ಬೆಂಗಳೂರು,ಜು.29-ಕಾವೇರಿ ನೀರು ಪ್ರಾಧಿಕಾರ ಸಮಿತಿ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿರುವ ಕ್ರಮ ಖಂಡಿಸಿ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ರಾಜ್ಯದಲ್ಲಿ ಬರ ಆವರಿಸಿದ್ದು, ಜಲಾಶಯಗಳು ನೀರಿಲ್ಲದೆ ಒಣಗಿ ಹೋಗಿವೆ. ಬೆಳೆಗಳಿಗೆ ನೀರಿಲ್ಲ. ಜನಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಕಾವೇರಿ ನೀರು ಪ್ರಾಧಿಕಾರ ಸಮಿತಿ ಪ್ರತಿ ದಿನ ಕಾವೇರಿಯಿಂದ ಮೂರುವರೆ ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂದು ನೀಡಿರುವ ಆದೇಶ ನಾಡಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಬಣ, ಶಿವರಾಮೇಗೌಡ ಬಣ, ಪ್ರವೀಣಶ್ ಶೆಟ್ಟಿ, ವಾಟಾಳ್ ನಾಗರಾಜ್, ಸಾರಾ ಗೋವಿಂದ್ ನೇತೃತ್ವದಲ್ಲಿ ಸಿಡಬ್ಲ್ಯೂಆರ್‌ಸಿ ಕ್ರಮವನ್ನು ತೀವ್ರವಾಗಿ ಖಂಡಿಸಲಾಗಿದೆ.
ಮಲ್ಲೇಶ್ವರದ ಕುವೆಂಪು ವೃತ್ತದ ಬಳಿ ಸಾ.ರಾ.ಗೋವಿಂದು ಮತ್ತು ಶಿವರಾಮೇಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಕಾವೇರಿ ನೀರು ಪ್ರಾಧಿಕಾರದ ಕ್ರಮದ ವಿರುದ್ಧ ಖಂಡಿಸಲಾಯಿತು.ರಾಜ್ಯದಲ್ಲಿ ನೀರಿನ ಅಭಾವವಿರುವ ಸಂದರ್ಭದಲ್ಲಿ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ತೀವ್ರ ಕಡಿಮೆಯಾಗಿದೆ. ಮಳೆಯಿಲ್ಲದೆ ಜಲಾಶಯ ಡೆಡ್ ಸ್ಟೋರೆಜ್ ತಲುಪಿದೆ. ಈ ಭಾಗದ ರೈತರಿಗೆ ನೀರಲ್ಲದೆ ಬೆಳೆ ಹಾಕಬೇಡಿ ಎಂದು ಸೂಚನೆ ನೀಡಲಾಗಿದೆ.

ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರಿಗೆ ಮಾತ್ರ ನೀರು ಸಂಗ್ರಹ ಮಾಡಿಕೊಳ್ಳಲಾಗಿದೆ. ಇಂಥ ಸಂದರ್ಭದಲ್ಲಿ 4.50 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಮಾಡಿರುವ ಆದೇಶ ಖಂಡನೀಯ ಎಂದು ಸಾ.ರಾ.ಗೋವಿಂದು ಗುಡುಗಿದರು.
ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ನೀರು ಬಿಡಬಾರದು. ತಮಿಳುನಾಡಿಗೆ ನೀರು ಹರಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಶಿವರಾಮೇಗೌಡ ಎಚ್ಚರಿಸಿದರು.
ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, ನಮ ರೈತರು ಕಾಡಿಬೇಡಿದರೂ ನೀರು ಬಿಡುತ್ತಿಲ್ಲ. ಇಂಥ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುವುದು ಹೇಗೆ? ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು. ನೀರು ಹರಿಸಿದ್ದೇ ಆದರೆ ಕರ್ನಾಟಕ ಬಂದ್ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಪ್ಪು ಬಾವುಟ ಪ್ರದರ್ಶಿಸಿ ಕರಾಳ ದಿನ ಆಚರಿಸಿ ಪ್ರತಿಭಟನೆ ನಡೆಸಿದ ಅವರು, ಮೇಕೆದಾಟು ಯೋಜನೆಗೆ ಯಾರ ಅನುಮತಿಯೂ ಬೇಕಾಗಿಲ್ಲ. ಕೂಡಲೇ ಮೇಕೆದಾಟು ಯೋಜನೆಯನ್ನು ಆರಂಭ ಮಾಡಿ. ನಮ ನೀರನ್ನು ರಕ್ಷಿಸಿ ಎಂದು ಗುಡುಗಿದರು.
ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕರವೇ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರವೀಣ್ ಶೆಟ್ಟಿ ಮಾತನಾಡಿ, ಅನೇಕ ಭಾಗಗಳಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ನೀರನ್ನು ಹೊರ ರಾಜ್ಯಕ್ಕೆ ಬಿಡುವುದು ನಮ ಜನರ ಹಾಗೂ ರೈತರ ಹಿತಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.
