Homeರಾಷ್ಟ್ರೀಯಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣ : ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ವಿರುದ್ಧದ ಕ್ರಿಮಿನಲ್‌ ಕೇಸ್...

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣ : ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ವಿರುದ್ಧದ ಕ್ರಿಮಿನಲ್‌ ಕೇಸ್ ವಜಾ

Supreme Court Closes Coal Block Case Against Ex-PM Manmohan Singh

ನವದೆಹಲಿ,ಜು.29- ದೇಶಾದ್ಯಂತ ವ್ಯಾಪಕ ಸಂಚಲನ ಮೂಡಿಸಿದ್ದ ಬಹುಚರ್ಚಿತ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ, ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ದೊಡ್ಡ ಕಾನೂನು ಗೆಲುವು ಸಿಕ್ಕಿದೆ.

ದಶಕಗಳ ಕಾಲ ಕಾನೂನು ಹೋರಾಟದ ನೆರಳಿನಲ್ಲಿದ್ದ ಈ ಪ್ರಕರಣದಲ್ಲಿ, ಅವರ ವಿರುದ್ಧದ ಕ್ರಿಮಿನಲ್‌ ಮೊಕದ್ದಮೆಯನ್ನು ಸುಪ್ರೀಂಕೋರ್ಟ್‌ ಅಧಿಕೃತವಾಗಿ ಮುಕ್ತಾಯಗೊಳಿಸಿದ್ದು, ಈ ಹಿಂದೆ ನೀಡಲಾಗಿದ್ದ ಎಲ್ಲಾ ಸಮನ್‌್ಸ ಆದೇಶಗಳನ್ನು ರದ್ದುಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಮತ್ತು ನ್ಯಾಯಮೂರ್ತಿಗಳಾದ ಜೋಯಲ್ಯ ಬಾಗ್ಚಿ ಹಾಗೂ ವಿ.ಮೋಹನ ಅವರನ್ನೊಳಗೊಂಡ ವಿಶೇಷ ನ್ಯಾಯಪೀಠವು ಈ ಮಹತ್ವದ ತೀರ್ಪು ನೀಡಿದೆ. ಸಿಬಿಐ (ಕೇಂದ್ರ ತನಿಖಾ ದಳ) ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ಮಾಜಿ ಪ್ರಧಾನಿ ಹಾಗೂ ಇತರ ಆರೋಪಿಗಳ ವಿಚಾರದಲ್ಲಿ ನ್ಯಾಯಾಲಯ ಅಂಗೀಕರಿಸಿದೆ. ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾದ ಮೇಲನವಿಗಳನ್ನು ಪರಿಶೀಲಿಸಿದ ಉನ್ನತ ನ್ಯಾಯಾಲಯವು, ಸಿಬಿಐ ತನಿಖೆಯಲ್ಲಿ ಯಾವುದೇ ಲೋಪವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ಸಿಬಿಐ ವರದಿಗೆ ಮನ್ನಣೆ:
ತನಿಖಾ ಸಂಸ್ಥೆಯು ಸಲ್ಲಿಸಿದ್ದ ಮುಕ್ತಾಯ ವರದಿಗಳನ್ನು ತಿರಸ್ಕರಿಸಲು ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರಿಗೆ ಯಾವುದೇ ಸಮರ್ಥನೀಯ ಕಾರಣವಿರಲಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.ಸಿಬಿಐನ ಮುಕ್ತಾಯ ವರದಿಗಳನ್ನು ಸ್ವೀಕರಿಸಿ, ಈ ಹಿಂದಿನ ಆಕ್ಷೇಪಾರ್ಹ ತೀರ್ಪನ್ನು ಬದಿಗಿಟ್ಟು ಸಂಪೂರ್ಣ ಪ್ರಕ್ರಿಯೆಯನ್ನು ನ್ಯಾಯಪೀಠವು ಮುಕ್ತಾಯಗೊಳಿಸಿದೆ. ದಶಕಗಳ ಹಿಂದಿನ ನೀತಿ ನಿರೂಪಣಾ ನಿರ್ಧಾರಗಳನ್ನು ಈ ರೀತಿಯಾಗಿ ಅಪರಾಧೀಕರಣಗೊಳಿಸಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಉನ್ನತ ನ್ಯಾಯಾಲಯವು ಈ ಮೂಲಕ ರವಾನಿಸಿದೆ.

ಪ್ರಕರಣದ ಹಿನ್ನೆಲೆ:
2005ರಲ್ಲಿ ಒಡಿಶಾದ ತಲಬಿರಾ- ಕಲ್ಲಿದ್ದಲು ನಿಕ್ಷೇಪವನ್ನು ಹಿಂಡಾಲ್ಕೊ ಕಂಪನಿಗೆ ಹಂಚಿಕೆ ಮಾಡಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು.ಅಂದಿನ ಪ್ರಧಾನಿ ಹುದ್ದೆಯಲ್ಲಿದ್ದ ಜೊತೆಗೆ ಕಲ್ಲಿದ್ದಲು ಖಾತೆಯ ಜವಾಬ್ದಾರಿಯನ್ನೂ ಹೊಂದಿದ್ದ ಡಾ.ಮನಮೋಹನ್‌ ಸಿಂಗ್‌, ಪ್ರಸಿದ್ಧ ಕೈಗಾರಿಕೋದ್ಯಮಿ ಕುಮಾರ್‌ ಮಂಗಲಂ ಬಿರ್ಲಾ, ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಪಿ.ಸಿ. ಪಾರಖ್‌ ಹಾಗೂ ಇತರ ಮೂವರನ್ನು ವಿಶೇಷ ನ್ಯಾಯಾಲಯವು ಆರೋಪಿಗಳೆಂದು ಪರಿಗಣಿಸಿ ಸಮನ್ಸ್ ಜಾರಿಗೊಳಿಸಿತ್ತು.

ಈ ಆದೇಶದ ವಿರುದ್ಧ ಮನಮೋಹನ್‌ ಸಿಂಗ್‌ ಹಾಗೂ ಇತರೆ ಸಂಬಂಧಿತರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಸಾರ್ವಜನಿಕ ಅಧಿಕಾರಿಯೊಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕಡ್ಡಾಯವಾದ ಪೂರ್ವಾನುಮತಿ ಪಡೆದಿಲ್ಲದಿರುವುದನ್ನು ಅವರು ಪ್ರಶ್ನಿಸಿದ್ದರು. ಅಲ್ಲದೆ, ಕಲ್ಲಿದ್ದಲು ನಿಕ್ಷೇಪ ಹಂಚಿಕೆಗೆ ಸಂಬಂಧಿಸಿದಂತೆ ತಾವು ತೆಗೆದುಕೊಂಡ ಪ್ರತಿಯೊಂದು ನಿರ್ಧಾರವು ದೇಶದ ಹಿತದೃಷ್ಟಿಯಿಂದ ಹಾಗೂ ಪ್ರಾಮಾಣಿಕತೆಯಿಂದ ಕೂಡಿದೆ ಎಂದು ಅವರು ಸ್ಪಷ್ಟಪಡಿಸಿದ್ದರು. ಈ ಹಿಂದೆ ಸುಪ್ರೀಂ ಕೋರ್ಟ್‌ ಈ ಆದೇಶಕ್ಕೆ ತಡೆ ನೀಡಿತ್ತು.

ಈ ತೀರ್ಪು ಭಾರತೀಯ ರಾಜಕೀಯ ಮತ್ತು ನ್ಯಾಯಾಂಗ ಇತಿಹಾಸದಲ್ಲಿ ಅತ್ಯಂತ ನಿರ್ಣಾಯಕ ಘಟ್ಟವಾಗಿದೆ. ದಕ್ಷತೆ, ಪ್ರಾಮಾಣಿಕತೆ ಮತ್ತು ಸರಳತೆಗೆ ಹೆಸರಾಗಿದ್ದ ಡಾ. ಮನಮೋಹನ್‌ ಸಿಂಗ್‌ ಅವರ ಮೇಲಿದ್ದ ಕಳಂಕವನ್ನು ಈ ತೀರ್ಪು ಅಧಿಕೃತವಾಗಿ ತೊಡೆದುಹಾಕಿದೆ. ಆಡಳಿತಾತಕ ನಿರ್ಧಾರಗಳು ಮತ್ತು ಸದುದ್ದೇಶದ ನೀತಿ ನಿರೂಪಣೆಗಳು ದಶಕಗಳ ನಂತರವೂ ಕಾನೂನು ಪ್ರಕ್ರಿಯೆಗೆ ಒಳಪಡುವ ಆತಂಕಕ್ಕೆ ಈ ತೀರ್ಪು ಸ್ಪಷ್ಟವಾದ ತೆರೆ ಎಳೆದಿದೆ.

RELATED ARTICLES

Latest News