Homeರಾಜ್ಯವಿಧಾನಪರಿಷತ್‌ ಸೀಟು ಆಮಿಷ : ಮಹಿಳೆಗೆ 1.50 ಕೋಟಿ ರೂ. ವಂಚಿಸಿದ್ದ ಮೂವರ ವಿರುದ್ಧ ಎಫ್‌ಐಆರ್‌

ವಿಧಾನಪರಿಷತ್‌ ಸೀಟು ಆಮಿಷ : ಮಹಿಳೆಗೆ 1.50 ಕೋಟಿ ರೂ. ವಂಚಿಸಿದ್ದ ಮೂವರ ವಿರುದ್ಧ ಎಫ್‌ಐಆರ್‌

ಬೆಂಗಳೂರು,ಜು.29- ವಿಧಾನಪರಿಷತ್‌ ಸದಸ್ಯೆ ಮಾಡಿಸುವುದಾಗಿ ನಂಬಿಸಿ ಪ್ರಭಾವಿ ನಾಯಕರ ಜೊತೆ ನಂಟು ಹೊಂದಿರುವಂತೆ ಬಿಂಬಿಸಿ, ಮಂಗಳೂರು ಮೂಲದ ಮಹಿಳೆಯೊಬ್ಬರಿಂದ ಬರೋಬ್ಬರಿ 1.50 ಕೋಟಿ ರೂ. ವಂಚಿಸಿರುವ ಗಂಭೀರ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.ರಾಜಕೀಯ ಮುಖಂಡರ ಹೆಸರನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಆಕಾಂಕ್ಷಿಗಳನ್ನು ಟಾರ್ಗೆಟ್‌ ಮಾಡುತ್ತಿರುವ ವಂಚಕ ಜಾಲದ ಕರಾಳ ಮುಖ ಇದೀಗ ಪೊಲೀಸರ ತನಿಖೆಯಿಂದ ಹೊರಬಂದಿದೆ.

ಖಾಸಗಿ ಟ್ರಸ್ಟ್‌ ಒಂದರ ಮೂಲಕ ಕ್ಯಾನ್ಸರ್‌ ಮುಕ್ತ ಅಭಿಯಾನ ಸೇರಿದಂತೆ ವಿವಿಧ ಸಮಾಜಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮಂಗಳೂರು ಮೂಲದ ಮಹಿಳೆಗೆ ಯರಿಸ್ವಾಮಿ ಎಂಬಾತನ ಪರಿಚಯವಾಗಿತ್ತು.

ತಾನು ಕಾಂಗ್ರೆಸ್‌‍ ನಾಯಕರ ಮಾಧ್ಯಮ ಸಲಹೆಗಾರನೆಂದು ಪರಿಚಯಿಸಿಕೊಂಡಿದ್ದ ಆರೋಪಿ, ಪ್ರಭಾವಿ ರಾಜಕಾರಣಿಗಳೊಂದಿಗೆ ತನಗಿರುವ ನಂಟು ಹಾಗೂ ನಕಲಿ ಅಥವಾ ಆಪ್ತ ಫೋಟೋಗಳನ್ನು ತೋರಿಸಿ ಮಹಿಳೆಯ ವಿಶ್ವಾಸವನ್ನು ಸಂಪೂರ್ಣವಾಗಿ ಗಳಿಸಿದ್ದನು.

ನಂತರ ಮಹಿಳೆಯ ಸಮಾಜ ಸೇವೆಯನ್ನು ಗಮನಿಸಿದ ಆಪಾದಿತ, ನೀವು ಇಷ್ಟೊಂದು ಸಮಾಜಸೇವೆ ಮಾಡುತ್ತಿದ್ದೀರಲ್ಲ, ನಿಮಗೆ ವಿಧಾನಪರಿಷತ್‌ ಸದಸ್ಯೆಯಾಗುವ ಅರ್ಹತೆಯಿದೆ. 5 ಕೋಟಿ ರೂಪಾಯಿ ನೀಡಿದರೆ ಹೈಕಮಾಂಡ್‌ ಮಟ್ಟದಲ್ಲಿ ಮಾತನಾಡಿ ಎಂಎಲ್‌ಸಿ ಸ್ಥಾನ ಕೊಡಿಸುತ್ತೇನೆ ಎಂದು ಗಾಳ ಹಾಕಿದ್ದನು. ಆರಂಭದಲ್ಲಿ ಅಷ್ಟೊಂದು ದೊಡ್ಡ ಮೊತ್ತವನ್ನು ನೀಡಲು ಸಾಧ್ಯವಿಲ್ಲ ಎಂದು ಮಹಿಳೆ ಹಿಂಜರಿದಾಗ, ಮಾತುಕತೆ ನಡೆಸಿ ಕೊನೆಗೆ 1.50 ಕೋಟಿ ರೂಪಾಯಿಗೆ ಒಪ್ಪಂದ ಕುದುರಿಸಿಕೊಳ್ಳಲಾಗಿತ್ತು.

ಹಂತ ಹಂತವಾಗಿ ಹಣ ವಸೂಲಿ:
ಆರೋಪಿ ಯರಿಸ್ವಾಮಿ ತನ್ನ ಸಹಚರರಾದ ಸಿದ್ದರಾಜು ಮತ್ತು ಬಸವರಾಜು ಅವರ ಮೂಲಕ 2024ರ ಆಗಸ್ಟ್‌ನಿಂದ 2025ರ ಜನವರಿ ವರೆಗಿನ ಅವಧಿಯಲ್ಲಿ ಹಂತ-ಹಂತವಾಗಿ ಹಣ ಸಂಗ್ರಹಿಸಿದ್ದನು. ನಗರದ ಮೈಸೂರು ಬ್ಯಾಂಕ್‌ ವೃತ್ತದ ಬಳಿಯ ಶಿಕ್ಷಕರ ಸದನ ಹಾಗೂ ಮಲ್ಲೇಶ್ವರಂನ ಕೆ.ಸಿ. ಜನರಲ್‌ ಆಸ್ಪತ್ರೆಯ ಸುತ್ತಮುತ್ತ ಹಣವನ್ನು ಹಸ್ತಾಂತರಿಸಿಕೊಳ್ಳಲಾಗಿತ್ತು ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.

ಕೇವಲ ಆರ್ಥಿಕ ವಂಚನೆ ಮಾತ್ರವಲ್ಲದೆ, ಕಾಂಗ್ರೆಸ್‌‍ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿಸುವುದಾಗಿ ನಂಬಿಸಿ ಮಹಿಳೆಯನ್ನು ದೆಹಲಿಗೆ ಕರೆದೊಯ್ದಿದ್ದ ಯರಿಸ್ವಾಮಿ, ಅಲ್ಲಿನ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ವೇಳೆ ಕೃತ್ಯವೆಸಗಲು ಯತ್ನಿಸಿದ್ದಾನೆ. ಮಹಿಳೆಯ ಕೊಠಡಿಗೆ ನುಗ್ಗಿ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಗಂಭೀರ ಆರೋಪ ದಾಖಲಾಗಿದೆ. ಈ ವೇಳೆ ಎಚ್ಚೆತ್ತುಕೊಂಡ ಮಹಿಳೆ ತೀವ್ರ ಪ್ರತಿರೋಧ ಒಡ್ಡಿದ್ದಲ್ಲದೆ, ಕೊಠಡಿಯನ್ನು ಒಳಗಿನಿಂದ ಲಾಕ್‌ ಮಾಡಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿಗೆ ವಾಪಸಾದ ಬಳಿಕ ತಮಗೆ ಮೋಸ ನಡೆದಿರುವುದನ್ನು ಅರಿತ ಮಹಿಳೆ, ತಾವು ನೀಡಿದ್ದ ಹಣವನ್ನು ವಾಪಸ್‌‍ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ಆರೋಪಿಗಳು ಹಣ ಮರಳಿಸದೆ, ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

ಮಹಿಳೆಯು ನೀಡಿದ ದೂರಿನ ಆಧಾರದ ಮೇಲೆ ಎಚ್ಚೆತ್ತ ಹಲಸೂರು ಗೇಟ್‌ ಪೊಲೀಸರು, ಪ್ರಮುಖ ಆರೋಪಿ ಯರಿಸ್ವಾಮಿ ಹಾಗೂ ಆತನ ಸಹಚರರಾದ ಬಸವರಾಜ್‌ ಮತ್ತು ಸಿದ್ದರಾಜು ವಿರುದ್ಧ ವಂಚನೆ, ನಂಬಿಕೆದ್ರೋಹ, ಬೆದರಿಕೆ ಹಾಗೂ ದೌರ್ಜನ್ಯದ ವಿವಿಧ ದೂರಿನಡಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ರಾಜಕೀಯ ಮುಖಂಡರ ಹೆಸರನ್ನು ಮತ್ತು ಪ್ರಭಾವಿ ವ್ಯಕ್ತಿಗಳ ನಂಟನ್ನು ದುರ್ಬಳಕೆ ಮಾಡಿಕೊಂಡು ನಿರುದ್ಯೋಗಿಗಳು ಹಾಗೂ ರಾಜಕೀಯ ಆಕಾಂಕ್ಷಿಗಳನ್ನು ವಂಚಿಸುತ್ತಿರುವ ಇಂತಹ ಜಾಲಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದು ತನಿಖೆ ಮುಂದುವರಿದಿದೆ.

RELATED ARTICLES

Latest News