ನವದೆಹಲಿ,ಜು.29- ಜೆಎನ್ಯುಎಸ್ಯು ಮಾಜಿ ಅಧ್ಯಕ್ಷೆ ಐಷೆ ಘೋಷ್ ಅವರ ಬಂಧನಕ್ಕಾಗಿ ದೆಹಲಿ ಪೊಲೀಸರು ರಾಷ್ಟ್ರ ರಾಜಧಾನಿಯಲ್ಲಿರುವ ಸಿಪಿಐ(ಎಂ) ಪಕ್ಷದ ಕೇಂದ್ರ ಕಚೇರಿಗೆ ನಾಗರಿಕ ಉಡುಪಿನಲ್ಲಿ ಪ್ರವೇಶಿಸಿರುವುದನ್ನು ಖಂಡಿಸಿ ವಿರೋಧ ಪಕ್ಷದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಾಜ್ಯಸಭೆಯ ಕಲಾಪವನ್ನು ಕೆಲ ಕಾಲ ಮುಂದೂಡಲಾಯಿತು.
ಸಿಪಿಐ(ಎಂ) ಕಚೇರಿಗೆ ಪೊಲೀಸರು ನುಗ್ಗಿರುವ ಕ್ರಮವು ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ವಿರೋಧ ಪಕ್ಷಗಳ ಅಸ್ತಿತ್ವಕ್ಕೆ ದೊಡ್ಡ ಅಪಾಯ ತಂದೊಡ್ಡಿದೆ ಎಂದು ವಿಪಕ್ಷಗಳು ಗಂಭೀರವಾಗಿ ಆಪಾದಿಸಿವೆ.
ಸದನದಲ್ಲಿ ನಿಗದಿತ ದಾಖಲೆಗಳನ್ನು ಮಂಡಿಸಿದ ಬೆನ್ನಲ್ಲೇ, ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಈ ವಿಷಯವನ್ನು ಪ್ರಸ್ತಾಪಿಸಿ, 2021ರ ಜೆಎನ್ಯು ಪ್ರತಿಭಟನಾ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪಕ್ಷದ ಕಚೇರಿಗೆ ಅತಿಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಆರೋಪಿಸಿದರು. ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇ ಐಷೆ ಘೋಷ್ ಮಾಡಿದ ಏಕೈಕ ತಪ್ಪು ಎಂದು ಅವರು ಸಮರ್ಥಿಸಿಕೊಂಡರು.
ಬ್ರಿಟ್ಟಾಸ್ ಅವರನ್ನು ಬೆಂಬಲಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ, ರಾಷ್ಟ್ರೀಯ ರಾಜಕೀಯ ಪಕ್ಷವೊಂದರ ಕಚೇರಿಗೆ ಯಾವುದೇ ಪೂರ್ವಾನುಮತಿಯಿಲ್ಲದೆ ಅಥವಾ ನಿಯಮಬಹಿರವಾಗಿ ಪ್ರವೇಶಿಸಲು ಪೊಲೀಸರಿಗೆ ಆದೇಶ ನೀಡಿದವರು ಯಾರು ಎಂದು ಪ್ರಶ್ನಿಸಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ವಿರೋಧ ಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಿದ ಸದನದ ನಾಯಕ ಜೆ.ಪಿ. ನಡ್ಡಾ, ಇದು ಯಾವುದೇ ರಾಜಕೀಯ ಪ್ರೇರಿತ ಕ್ರಮವಲ್ಲದೆ ಸಂಪೂರ್ಣವಾಗಿ ಸಾಮಾನ್ಯ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಪ್ರಕರಣವಾಗಿದೆ. ಕಾನೂನು ಎಲ್ಲರಿಗೂ ಒಂದೇ. ಅಪರಾಧ ಅಥವಾ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಅಥವಾ ವಿದ್ಯಾರ್ಥಿ ಅಂತಹ ಕಾನೂನು ಕ್ರಮಗಳನ್ನು ಎದುರಿಸಲೇಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ತಮ ಹಳೆಯ ದಿನಗಳನ್ನು ಸರಿಸಿದ ಅವರು, ತಾವೂ ಕೂಡ ವಿದ್ಯಾರ್ಥಿ ನಾಯಕನಾಗಿದ್ದಾಗ ಇಂತಹದೇ ಕಠಿಣ ಕ್ರಮಗಳನ್ನು ಎದುರಿಸಬೇಕಾಗಿ ಬಂದಿತು ಎಂದರು. ತುರ್ತು ಪರಿಸ್ಥಿತಿಯ ದಿನಗಳಲ್ಲಿ ತಮ್ನನು ನೇರವಾಗಿ ತರಗತಿಯಿಂದಲೇ ಎರಡು ಬಾರಿ ಬಂಧಿಸಲಾಗಿತ್ತು ಎಂದು ತಮ ಹಿಂದಿನ ಘಟನೆಗಳನ್ನು ಉಲ್ಲೇಖಿಸಿ ಸದನದಲ್ಲಿ ವಿವರಿಸಿದರು.
ಸರ್ಕಾರದ ಸಮರ್ಥನೆಯ ಬಳಿಕ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರು ನಿಗದಿತ ಶೂನ್ಯ ವೇಳೆಕಲಾಪವನ್ನು ಮುಂದುವರಿಸಲು ಮುಂದಾದರು. ಆದರೆ, ಇದಕ್ಕೆ ಜಗ್ಗದ ವಿರೋಧ ಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಮುಗಿಬಿದ್ದು ತೀವ್ರ ಘೋಷಣೆಗಳನ್ನು ಕೂಗುವುದನ್ನು ಮುಂದುವರಿಸಿದರು.
ಸದನದಲ್ಲಿ ಗದ್ದಲ ಮರುಕಳಿಸುತ್ತಿದ್ದಂತೆ, ಪ್ರತಿಭಟನಾ ನಿರತ ಸದಸ್ಯರು ಸದನದ ಬಾವಿಗೆ ಇಳಿಯದಂತೆ ಸಭಾಪತಿಗಳು ಎಚ್ಚರಿಕೆ ನೀಡಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಯವರೆಗೆ ಕಲಾಪವನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು.
ಕಳೆದ ಜುಲೈ 20ರಂದು ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾದಾಗಿನಿಂದಲೂ ವಿವಿಧ ಪ್ರಮುಖ ವಿಷಯಗಳ ಕುರಿತು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ವಾಗ್ವಾದದಿಂದಾಗಿ ರಾಜ್ಯಸಭೆಯಲ್ಲಿ ಪದೇ ಪದೇ ಕಲಾಪಗಳಿಗೆ ಅಡಚಣೆಂಟಾಗುತ್ತಿರುವುದು ಮುಂದುವರಿದಿದೆ.
