ನವದೆಹಲಿ,ಜು.29- ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಮಹತ್ವದ ಹೆಜ್ಜೆ ಇರಿಸಿದೆ.
ಎನ್ಟಿಎ ತಜ್ಞರು, ತರಬೇತಿ ಸಿಬ್ಬಂದಿ ಹಾಗೂ ಮಧ್ಯವರ್ತಿಗಳ ನಡುವಿನ ಜಾಲವನ್ನು (ಸಿಂಡಿಕೇಟ್) ಬಯಲಿಗೆಳೆದಿರುವ ಸಿಬಿಐ, ಒಟ್ಟು 13 ಆರೋಪಿಗಳ ವಿರುದ್ಧ ಅಧಿಕೃತವಾಗಿ ಆರೋಪಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದೆ.
ಮೇ 2026ರಲ್ಲಿ ನಡೆದ ನೀಟ್ ಪರೀಕ್ಷೆಯ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಇದರ ಹಿಂದೆ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿತ್ತು ಎಂಬುದು ತನಿಖೆಯಿಂದ ದೃಢಪಟ್ಟಿದೆ. ಎನ್ಟಿಎಯ ವಿವಿಧ ವಿಷಯ ತಜ್ಞರಿಂದ ಪ್ರಶ್ನೆಗಳನ್ನು ಪಡೆದು, ಅವುಗಳನ್ನು ವಿವಿಧ ತರಬೇತಿ ಸಂಸ್ಥೆಗಳು ಮತ್ತು ಮಧ್ಯವರ್ತಿಗಳ ಮೂಲಕ ವಿತರಿಸಲಾಗುತ್ತಿತ್ತು.
ಈ ಆರೋಪ ಪಟ್ಟಿಯಲ್ಲಿ 360 ಸಾಕ್ಷಿಗಳು, 422 ದಾಖಲೆಗಳು ಹಾಗೂ 43 ವಸ್ತು ಸಾಮಗ್ರಿಗಳನ್ನು ಸಿಬಿಐ ಉಲ್ಲೇಖಿಸಿದೆ.ಆರೋಪಿಗಳ ಅಕ್ರಮ ಹಣದ ಹಾದಿಯನ್ನು ಪತ್ತೆಹಚ್ಚಲಾಗಿದ್ದು, ಹಲವು ಬ್ಯಾಂಕ್ ಖಾತೆಗಳು, ಲಾಕರ್ಗಳು ಹಾಗೂ ಡಿಮ್ಯಾಟ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.
ಮೇ 12ರಂದು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಸಿಬಿಐ ಅಧಿಕಾರಿಗಳ ಬಹು ತಂಡಗಳು, ಮಹಾರಾಷ್ಟ್ರ, ರಾಜಸ್ಥಾನ, ಹರಿಯಾಣ ಹಾಗೂ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ 92 ಸ್ಥಳಗಳಲ್ಲಿ ದಾಳಿ ನಡೆಸಿ ಮಹತ್ವದ ಡಿಜಿಟಲ್ ಹಾಗೂ ಸಂವಹನ ಸಾಧನಗಳನ್ನು ವಶಪಡಿಸಿಕೊಂಡಿದ್ದವು.
ಕಾನೂನು ಕ್ರಮಗಳು :
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಕ್ರಿಮಿನಲ್ ಪಿತೂರಿ, ವಂಚನೆ, ನಂಬಿಕೆ ದ್ರೋಹ, ಸಾಕ್ಷ್ಯ ನಾಶ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ಮಾರ್ಗಗಳ ತಡೆಗಟ್ಟುವಿಕೆ) ಕಾಯ್ದೆ, 2024ರ ವಿವಿಧ ಗಂಭೀರ ಸೆಕ್ಷನ್ಗಳಡಿ ಮೊಕದ್ದಮೆ ಹೂಡಲಾಗಿದೆ.
ಈ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ವಿಡಂಬನಾತಕ ಗುಂಪುಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಉಗ್ರ ಪ್ರತಿಭಟನೆಗಳನ್ನು ನಡೆಸಿದ್ದವು. ಪರೀಕ್ಷಾ ವ್ಯವಸ್ಥೆಯ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಿಬಿಐ ತನಿಖೆ ಮುಂದುವರಿದಿದೆ.
ಚಾರ್ಜ್ಶೀಟ್ನಲ್ಲಿ ಹೆಸರಿಸಲಾದ ಆರೋಪಿಗಳು
ಮನೀಷಾ ಮಾಂಧರೆ – ಎನ್ಟಿಎ ಜೀವಶಾಸ್ತ್ರ ತಜ್ಞೆ
ಪ್ರಲ್ಹಾದ್ ವಿಠಲರಾವ್ ಕುಲಕರ್ಣಿ – ಎನ್ಟಿಎ ರಸಾಯನಶಾಸ್ತ್ರ ತಜ್ಞ
ಮನಿಶಾ ಸಂಜಯ್ ಹವಾಲ್ದಾರ್ – ಎನ್ಟಿಎ ಭೌತಶಾಸ್ತ್ರ ತಜ್ಞ
ಮನಿಶಾ ಸಂಜಯ್ ವಾಘಮಾರೆ – ಮಧ್ಯವರ್ತಿ
ಧನಂಜಯ್ ನಿವೃತ್ತಿ ಲೋಖಂಡೆ – ಮಧ್ಯವರ್ತಿ
ಶುಭಂ ಮಧುಕರ್ ಖೈರ್ನಾರ್ – ಮಧ್ಯವರ್ತಿ
ಯಶ್ ಯಾದವ್ – ಮಧ್ಯವರ್ತಿ
ಮಂಗೀಲಾಲ್ ಬಿವಾಲ್ – ಮಧ್ಯವರ್ತಿ
ವಿಕಾಶ್ ಬಿವಾಲ್ – ಮಧ್ಯವರ್ತಿ
ದಿನೇಶ್ ಬಿವಾಲ್ – ಮಧ್ಯವರ್ತಿ
ಡಾ. ಮನೋಜ್ ಭಗವಾನರಾವ್ ಶಿರೂರೆ – ಮಧ್ಯವರ್ತಿ
ಶಿವರಾಜ್ ರಘುನಾಥ್ ಮೋಟೆಗಾಂಕರ್ – ಲಾತೂರ್ನ ಆರ್ಸಿಸಿ ಕೋಚಿಂಗ್ ಇನ್ಸ್ಟಿಟ್ಯೂಟ್ ಮಾಲೀಕ
ತೇಜಸ್ ಹರ್ಷದ್ಕುಮಾರ್ ಷಾ – ಪುಣೆಯ ಎಪಿಎಂಎ ಕೋಚಿಂಗ್ ಇನ್ಸ್ಟಿಟ್ಯೂಟ್ನ ಭೌತಶಾಸ್ತ್ರ ಅಧ್ಯಾಪಕ ಹಾಗೂ ಸಿಒಒ.
