Homeರಾಜ್ಯದೆಹಲಿಯಲ್ಲಿ ಹೈಕಮಾಂಡ್ ಬಾಗಿಲು ಕಾಯುತ್ತಿರುವ ಸರ್ಕಾರ, ರಾಜ್ಯದಲ್ಲಿ ಜನಾಕ್ರೋಶ

ದೆಹಲಿಯಲ್ಲಿ ಹೈಕಮಾಂಡ್ ಬಾಗಿಲು ಕಾಯುತ್ತಿರುವ ಸರ್ಕಾರ, ರಾಜ್ಯದಲ್ಲಿ ಜನಾಕ್ರೋಶ

ಬೆಂಗಳೂರು, ಜು.30- ಸಚಿವ ಸಂಪುಟ ವಿಸ್ತರಣೆಯ ಪ್ರಕ್ರಿಯೆಗಳ ಭಾಗವಾಗಿ ರಾಜ್ಯ ಸರ್ಕಾರದ ಮುಖ್ಯಮಂತ್ರಿ, ಕಾಂಗ್ರೆಸ್‌‍ ಶಾಸಕರು ಸೇರಿದಂತೆ ಬಹುತೇಕ ಮಂದಿ ದೆಹಲಿಯಲ್ಲೇ ಠಿಕಾಣಿ ಹೂಡಿರುವುದರಿಂದ ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ಕೇಳುವವರಿಲ್ಲದಂತಹ ವಾತಾವರಣ ನಿರ್ಮಾಣವಾಗಿದೆ.

ಜನರಿಗೆ ಮಳೆಯ ಚಿಂತೆಯಾದರೆ, ಶಾಸಕರಿಗೆ ಸಚಿವ ಸ್ಥಾನದ ಚಿಂತೆ, ಪ್ರಮುಖ ನಾಯಕರಿಗೆ ಕುರ್ಚಿಯ ಕಾಳಜಿ ಎಂಬಂತಾಗಿದೆ. ಆಡಳಿತ ನಡೆಸುವವರ ಧೋರಣೆ ವಿರುದ್ಧ ಜನಾಕ್ರೋಶಗಳು ಹೆಚ್ಚಾಗುತ್ತಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಜೊತೆಗೆ ಕಾಂಗ್ರೆಸ್‌‍ನ 70ಕ್ಕೂ ಹೆಚ್ಚು ಮಂದಿ ಶಾಸಕರು ದೆಹಲಿಯಲ್ಲೇ ಉಳಿದುಕೊಂಡಿದ್ದಾರೆ.

ಹೀಗಾಗಿ ಬರ ಪೀಡಿತ ಪ್ರದೇಶಗಳಲ್ಲಿ ಜನಪ್ರತಿನಿಧಿಗಳ ಕೊರತೆ ಎದ್ದು ಕಾಣುತ್ತಿದೆ. ಜನ ಕುಡಿಯುವ ನೀರು, ಬೆಳೆ ಹಾನಿಯಂತಹ ಸಮಸ್ಯೆಗಳಿಂದ ಚಿಂತಿತರಾಗಿದ್ದಾರೆ. ಕೆಲವು ಭಾಗಗಳಲ್ಲಿ ಉದ್ಯೋಗಕ್ಕಾಗಿ ನಗರಗಳತ್ತ ವಲಸೆ ಹೆಚ್ಚಾಗುತ್ತಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಕ್ರಿಯಾ ಯೋಜನೆಗಳಿಗೆ ಶಾಸಕರ ಅನುಮೋದನೆ ಅಗತ್ಯ ಇದೆ ಮತ್ತು ಬರ ನಿರ್ವಹಣೆಗಾಗಿ ಬಿಡುಗಡೆ ಮಾಡಲಾಗುವ ಹಣದ ಬಳಕೆಯ ಮೇಲುಸ್ತುವಾರಿಗೂ ಶಾಸಕರ ಉಪಸ್ಥಿತಿ ಅತ್ಯಂತ ಜರೂರಿನ ವಿಷಯ. ಆದರೆ ಆಡಳಿತ ಪಕ್ಷದ ಸುಮಾರು 70ಕ್ಕೂ ಹೆಚ್ಚು ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿರುವುದರಿಂದ ಬರ ನಿರ್ವಹಣೆ ಕೆಲಸಗಳಿಗೆ ಗರ ಬಡಿದಂತಾಗಿದೆ.

ಕೆಲ ಸಚಿವರು ಮತ್ತು ಮುಖ್ಯಮಂತ್ರಿಯವರು ದೆಹಲಿಯಲ್ಲೇ ಉಳಿದಿದ್ದು, ಬರ ನಿರ್ವಹಣೆಗಾಗಿ ಕೇಂದ್ರದಿಂದ ಹೆಚ್ಚಿನ ಅನುದಾನ ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂಬ ಸಮರ್ಥನೆ ನೀಡಲಾಗುತ್ತಿದೆ. ಆದರೆ ಸಂಸತ್‌ ಅಧಿವೇಶನ ನಡೆಯುತ್ತಿರುವುದರಿಂದ ಎಲ್ಲಾ ಸಚಿವರು ಅದರ ಕಾರ್ಯದೊತ್ತಡದಲ್ಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವರ ಭೇಟಿಗೆ ಸಮಯ ನೀಡುತ್ತಿಲ್ಲ ಎನ್ನಲಾಗಿದೆ.

ರಾಜ್ಯದಿಂದ ತೆರಳಿರುವವರು ದೆಹಲಿಯಲ್ಲಿ ಬೀಡು ಬಿಟ್ಟಿರುವುದು ಸಂಪುಟ ವಿಸ್ತರಣೆಯ ಕುರಿತು ಚರ್ಚಿಸುವ ಸಲುವಾಗಿ ಎಂದು ಎಲ್ಲರಿಗೂ ಗೊತ್ತಿರುವ ಸತ್ಯ. ಕಾಂಗ್ರೆಸ್‌‍ ಹೈಕಮಾಂಡ್‌ ನಾಯಕರು ನೀಟ್‌ ವಿಚಾರವಾಗಿ ಹೆಚ್ಚು ಗಮನ ಹರಿಸಿದ್ದು, ಸಂಪುಟ ವಿಸ್ತರಣೆಯ ಚರ್ಚೆಯನ್ನು ಅಲಕ್ಷಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿ 4 ದಿನಗಳಿಂದ ಎಲ್ಲಾ ಕೆಲಸ ಕಾರ್ಯ ಬಿಟ್ಟು ಕಾದು ಕುಳಿತಿದ್ದರೂ, ಅವರ ಜೊತೆ ಅಗತ್ಯ ಚರ್ಚೆ ನಡೆಸಿ ವಿಷಯ ಇತ್ಯರ್ಥಗೊಳಿಸುವ ಬದಲಾಗಿ ಉದಾಸೀನತೆ ತೋರಿಸುತ್ತಿರುವ ಕಾಂಗ್ರೆಸ್‌‍ ಹೈಕಮಾಂಡ್‌ನ ಧೋರಣೆ ರಾಜ್ಯಕ್ಕಾದ ಅವಮಾನವೆಂಬ ವ್ಯಾಖ್ಯಾನಗಳು ನಡೆಯುತ್ತಿವೆ. ಈ ವಿಚಾರವಾಗಿ ವಿರೋಧ ಪಕ್ಷಗಳ ನಾಯಕರು ಆಕ್ಷೇಪ ಎತ್ತಿದ್ದು ಜನ ಬೀದಿಗಿಳಿಯುವ ಸಾಧ್ಯತೆ ಇದೆ.

RELATED ARTICLES

Latest News