ಬೆಂಗಳೂರು,ಫೆ.27- ತೀವ್ರ ಕುತೂಹಲ ಕೆರಳಿಸಿರುವ ಬೆಳವಣಿಗೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅಡ್ಡಮತದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯಸಭೆ ಚುನಾವಣೆಯಲ್ಲಿ ಐವರು ಅಭ್ಯರ್ಥಿಗಳು ಕಣದಲ್ಲಿದ್ದರು. ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ 3, ಬಿಜೆಪಿ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಅವಕಾಶವಿತ್ತು. ಹೆಚ್ಚುವರಿಯಾಗಿರುವ ಜೆಡಿಎಸ್‍ನ ನಾಯಕ ಹಾಗೂ ಎನ್‍ಡಿಎ ಅಭ್ಯರ್ಥಿ ಡಿ.ಕುಪೇಂದ್ರ ರೆಡ್ಡಿ ಅವರಿಗೆ ಬಾಕಿ ಉಳಿದ ಮತಗಳನ್ನು ಹಾಕಲು ಸಲಹೆ ನೀಡಲಾಗಿತ್ತು.
ಬಿಜೆಪಿಯಿಂದ ಒಂದು ಹೆಜ್ಜೆ ಹೊರಗಿಟ್ಟಿರುವ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್ ಅಡ್ಡಮತದಾನ ಮಾಡಲಿದ್ದಾರೆ ಎಂಬ ವದಂತಿಗಳು ವ್ಯಾಪಕವಾಗಿದ್ದವು. ಸುಮಾರು 11.15 ಕ್ಕೆ ಆಗಮಿಸಿದ ಎಸ್.ಟಿ.ಸೋಮಶೇಖರ್ ಕೆಲವೇ ನಿಮಿಷಗಳಲ್ಲಿ ಮತ ಹಾಕಿ ಹೊರಬಂದರು. ತಾವು ಆತ್ಮಸಾಕ್ಷಿಯ ಮತ ಹಾಕಿರುವುದಾಗಿ ಹೇಳಿದರು. ಮಾಧ್ಯಮದ ಪ್ರತಿನಿಧಿಗಳು 5 ನಿಮಿಷ ಅಡ್ಡ ಹಾಕಿಕೊಂಡು ನಾನಾ ರೀತಿಯ ಪ್ರಶ್ನೆ ಮಾಡಿದರು. ಆಗ ಒಂದೇ ವಾಕ್ಯದಲ್ಲಿ ಉತ್ತರಿಸಿದ ಎಸ್.ಟಿ.ಸೋಮಶೇಖರ್, ಆತ್ಮಸಾಕ್ಷಿಗನುಗುಣವಾಗಿ ಮತ ಹಾಕಿದ್ದೇನೆ ಎಂದು ಪುನರುಚ್ಚರಿಸಿದರು.
ನಿಗದಿತ ಚುನಾವಣಾ ಏಜೆಂಟ್‍ಗೆ ತಾವು ಮತ ಹಾಕಿರುವುದನ್ನು ತೋರಿಸಿದ್ದಾಗಿ ತಿಳಿಸಿದ್ದಾರೆ. ಮತಗಟ್ಟೆಯಲ್ಲಿ ಬಿಜೆಪಿ ಚುನಾವಣಾ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅರವಿಂದ್ ಬೆಲ್ಲದ್ ಅವರಿಗೆ ತಮ್ಮ ಮತಪತ್ರವನ್ನು ತೋರಿಸಿದ್ದಾರೆ. ಈ ವೇಳೆ ಅರವಿಂದ್ ಬೆಲ್ಲದ್ ಅವರ ಮುಖ ಬಾಡಿ ಹೋಯಿತು ಎಂದು ಹೇಳಲಾಗಿದೆ.
ವಿಧಾನಸೌಧ ಮೊಗಸಾಲೆಯಲ್ಲಿ ಅಡ್ಡ ಮತದಾನದ್ದೇ ಸದ್ದು
ಈ ವೇಳೆ ಡಿ.ಕೆ.ಶಿವಕುಮಾರ್‍ರವರು ಮತಗಟ್ಟೆಯಲ್ಲೇ ಇದ್ದು ಸೋಮಶೇಖರ್ ಮೇಲೆ ತೀವ್ರ ನಿಗಾ ವಹಿಸಿದ್ದರು. ಅಡ್ಡಮತದಾನವಾಗುತ್ತಿದ್ದಂತೆ ಬಿಜೆಪಿಯಲ್ಲೂ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ವಿಜಯೇಂದ್ರ ಮತ್ತು ಜೆಡಿಎಸ್‍ನ ನಾಯಕ ಎಚ್.ಡಿ.ಕುಮಾರಸ್ವಾಮಿಯವರು ಮಹತ್ವದ ಸಮಾಲೋಚನೆ ನಡೆಸಿದ್ದಾರೆ.
ಪಕ್ಷಾಂತರ ನಿಷೇಧ ಕಾಯ್ದೆಯ ತೂಗುಗತ್ತಿಯ ನಡುವೆಯೂ ಅಡ್ಡಮತದಾನ ನಡೆದಿರುವುದು ಮಹತ್ವದ ರಾಜಕೀಯ ತಿರುವನ್ನು ಸೃಷ್ಟಿಸಿದೆ. ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್‍ರವರು ಮಧ್ಯಾಹ್ನವಾದರೂ ಮತಗಟ್ಟೆಯತ್ತ ಸುಳಿಯದೇ ಇರುವುದು ಕೇಸರಿ ಪಾಳಯದಲ್ಲಿ ಆತಂಕ ಸೃಷ್ಟಿಸಿತು.