Friday, May 3, 2024
Homeರಾಜ್ಯಜೆಡಿಎಸ್-ಬಿಜೆಪಿ ನಾಯಕರ ನಡುವೆ ಲೋಕಸಭಾ ಚುನಾವಣೆ ಕುರಿತು ಸ್ವಾರಸ್ಯಕರ ಚರ್ಚೆ

ಜೆಡಿಎಸ್-ಬಿಜೆಪಿ ನಾಯಕರ ನಡುವೆ ಲೋಕಸಭಾ ಚುನಾವಣೆ ಕುರಿತು ಸ್ವಾರಸ್ಯಕರ ಚರ್ಚೆ

ಬೆಂಗಳೂರು,ಫೆ.27- ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯ ಬಗ್ಗೆ ಜೆಡಿಎಸ್-ಬಿಜೆಪಿ ನಾಯಕರ ನಡುವೆ ಸ್ವಾರಸ್ಯಕರ ಚರ್ಚೆಯಾಗಿದೆ. ಮತದಾನದ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿರೋಧಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಆಪ್ತ ಸಮಾಲೋಚನೆಯಲ್ಲಿ ತೊಡಗಿದ್ದರು.

ಬಿಜೆಪಿಯ ಅಭ್ಯರ್ಥಿಯ ಗೆಲುವಿನ ಬಳಿಕ ಹೆಚ್ಚುವರಿಯಾಗಿರುವ ಮತಗಳನ್ನು ಯಾವ ರೀತಿ ಹಂಚಿಕೆ ಮಾಡಬೇಕು ಎಂಬ ಕುರಿತು ಚರ್ಚೆ ನಡೆಯುತ್ತಿದ್ದಾಗ ಜೆಡಿಎಸ್ ನಾಯಕರೂ ಆಗಿರುವ ಎಚ್.ಡಿ.ಕುಮಾರಸ್ವಾಮಿ ಆಗಮಿಸಿದರು. ರಾಜ್ಯಸಭಾ ಚುನಾವಣೆ ಬಗ್ಗೆ ಬಿಟ್ಟು ಹಾಕಿ. ನಾವು ಸುಮ್ಮನೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ನಮ್ಮ ಮುಂದೆ ಇರುವುದು ಲೋಕಸಭಾ ಚುನಾವಣೆ. ಅದರ ಬಗ್ಗೆ ಗಂಭೀರವಾಗಿ ಚರ್ಚೆ ಮಾಡಿ ಎಂದು ಸಲಹೆ ನೀಡಿದ್ದಾರೆ.

ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್‍ರವರು ಗಲಾಟೆ ಮಾಡುತ್ತಿದ್ದಾರೆ. ಇತ್ತ ಬೆಂಗಳೂರು ಗ್ರಾಮಾಂತರದಿಂದ ಜಯದೇವ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಬಿಜೆಪಿಯಿಂದ ಕಣಕ್ಕಿಳಿಯುತ್ತಾರೆ ಎಂದು ಚರ್ಚೆಯಾಗುತ್ತಿದೆ. ಮಂಜುನಾಥ್‍ರನ್ನು ನಿಮ್ಮ ಪಕ್ಷದಿಂದ ಕಣಕ್ಕಿಳಿಸುವುದಾದರೆ ವಿ.ಸೋಮಣ್ಣ ಅವರನ್ನು ತುಮಕೂರಿನಿಂದ ನಮ್ಮ ಪಕ್ಷದ ಅಭ್ಯರ್ಥಿಯಾಗಲು ಬಿಟ್ಟುಕೊಡಿ ಎಂದು ಸಲಹೆ ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಧಮ್ಕಿ, ಬೆದರಿಸುವುದು ಕಾಂಗ್ರೆಸ್‍ನವರ ಅಭ್ಯಾಸ: ಕುಮಾರಸ್ವಾಮಿ

ತುಮಕೂರಿನಲ್ಲಿ ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಅಹಿಂದಾ ಮತಗಳು ಮತ್ತು ಮುದ್ದಹನುಮೇಗೌಡರ ವೈಯಕ್ತಿಕ ಮತಗಳಿಂದ ಕಾಂಗ್ರೆಸ್ ಗೆದ್ದರೂ ಗೆಲ್ಲಬಹುದು. ಅದಕ್ಕೆ ಪ್ರತಿತಂತ್ರ ಎಂದರೆ ಲಿಂಗಾಯತ ಸಮುದಾಯದ ಸೋಮಣ್ಣ ಅವರನ್ನು ಜೆಡಿಎಸ್‍ನಿಂದ ಕಣಕ್ಕಿಳಿಸಿದರೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಸಮೀಕರಣದಿಂದಾಗಿ ಮೈತ್ರಿ ಅಭ್ಯರ್ಥಿ ಗೆಲ್ಲುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಜೆಡಿಎಸ್ ಪ್ರಾಬಲ್ಯವಿರುವ ಹಳೆ ಮೈಸೂರು ಭಾಗದ ಕ್ಷೇತ್ರಗಳ ಬಗ್ಗೆ ಈ ಸಂದರ್ಭದಲ್ಲಿ ಚರ್ಚೆ ನಡೆಯುತ್ತಿದ್ದಾಗ ಬಿಜೆಪಿ ನಾಯಕರು ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ನೀವು ಹೈಕಮಾಂಡ್ ಜೊತೆ ನೇರ ಸಂಪರ್ಕದಲ್ಲಿದ್ದೀರ. ನಿಮ್ಮ ಅಭಿಪ್ರಾಯವನ್ನು ಅಲ್ಲಿಯೇ ತಿಳಿಸುವುದು ಸೂಕ್ತ ಎಂದು ಪ್ರತಿ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಳೆ ದೆಹಲಿಗೆ ತೆರಳಲಿದ್ದು, ಮೈತ್ರಿ ನಡುವಿನ ಕ್ಷೇತ್ರ ಹಂಚಿಕೆ ಹಾಗೂ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News