ನವದೆಹಲಿ, ಅ.3 ಪಕ್ಷೇತರ ಸಂಸದ ಪಪ್ಪು ಯಾದವ್ ಮೇಲೆ ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ನಡಿದಿದೆ. ಬಿಹಾರದ ಪೂರ್ಣಿಯಾ ಕ್ಷೇತ್ರದ ಸ್ವತಂತ್ರ ಸಂಸದ ಪಪ್ಪು ಯಾದವ್ ಅವರ ನಿವಾಸದಲ್ಲಿ ಏರ್ಪಡಿಸಲಾಗಿದ್ದ ಮಾಧ್ಯಮಗೋಷ್ಠಿಯ ವೇಳೆ ಚಾಕು ಹಿಡಿದು ಬಂದಿದ್ದ ವ್ಯಕ್ತಿಯೊಬ್ಬ ಸಂಸದರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಇದು ತನ್ನ ಕೊಲ್ಲುವ ಸಂಚು ಎಂದು ಪಪ್ಪು ಯಾದವ್ ಗಂಭೀರ ಆರೋಪ ಮಾಡಿದ್ದಾರೆ.
ದಾಳಿ ವೇಳೆ ಜಾಗರೂಕರಾದ ಸಂಸದರ ಬೆಂಬಲಿಗರು ಮತ್ತು ಆಪ್ತರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ, ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ದಾಳಿಕೋರನನ್ನು ಉತ್ತರ ಪ್ರದೇಶದ ಬುಲಂದ್ಶಹರ್ ಮೂಲದ, ಪ್ರಸ್ತುತ ಗಾಜಿಯಾಬಾದ್ನಲ್ಲಿ ಕೆಲಸ ಮಾಡುತ್ತಿದ್ದ ಸುಮಿತ್ ಎಂದು ದೆಹಲಿ ಪೊಲೀಸರು ಗುರುತಿಸಿದ್ದಾರೆ.
ಸಂಸದರ ನಿವಾಸದ ಹೊರಗೆ ಕಾರಿನಲ್ಲಿ ಕಾಯುತ್ತಿದ್ದ ಈತನ ಸಹಚರ ಹ್ಯಾಪಿ ಎಂಬಾತನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.ದಾಳಿಯ ನಂತರ ಮಾತನಾಡಿದ ಸಂಸದ ಪಪ್ಪು ಯಾದವ್ ಅವರು, ದೆಹಲಿ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದರು.
ನನ್ನ ಜೀವಕ್ಕೆ ಬೆದರಿಕೆಯಿದ್ದು, ದೀರ್ಘಕಾಲದಿಂದ ಸೂಕ್ತ ಭದ್ರತೆ ನೀಡುವಂತೆ ಮನವಿ ಮಾಡುತ್ತಿದ್ದರೂ ಪೊಲೀಸರು ನಿರ್ಲಕ್ಷಿಸಿದ್ದಾರೆ. ನಿನ್ನೆ ಬೆಂಬಲಿಗರು ಇಲ್ಲದಿದ್ದರೆ ನನ್ನನ್ನು ಕೊಂದು ಹಾಕುತ್ತಿದ್ದರು ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಶ್ರೀರಾಮ ಜನ್ಮಭೂಮಿಯ 200 ಕೆಜಿ ಬೆಳ್ಳಿ ಮತ್ತು ಚಿನ್ನ ಎಲ್ಲಿ ಹೋಯಿತು ಎಂದು ನಾನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಈ ರೀತಿ ಕೊಲೆ ಯತ್ನ ನಡೆಸಲಾಗಿದೆ ಎಂದು ಅವರು ಆರೋಪಿಸಿದರು. ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣವನ್ನು ಉಲ್ಲೇಖಿಸಿ, ಪಪ್ಪು ಯಾದವ್ ಹಾಗೂ ಇತರ ವಿರೋಧ ಪಕ್ಷದ ಸಂಸದರು ಸಂಸತ್ತಿನ ಆವರಣದಲ್ಲಿ ಇತ್ತೀಚೆಗೆ ಸ್ಕಿಟ್ ಪ್ರದರ್ಶಿಸಿದ್ದರು.
ಈ ನಾಟಕವು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಬಿಜೆಪಿ ಕಟುವಾಗಿ ಟೀಕಿಸಿದೆ.ಈ ನಾಟಕದ ವಿರುದ್ಧ ವಾರಾಣಸಿಯಲ್ಲಿ ಪಪ್ಪು ಯಾದವ್, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಅಖಿಲೇಶ್ ಯಾದವ್ ಮತ್ತು ಅವಧೇಶ್ ಪ್ರಸಾದ್ ವಿರುದ್ಧ ಪ್ರಕರಣ ದಾಖಲಾಗಿದೆ.
ಪಪ್ಪು ಯಾದವ್ ಅವರು ಗ್ಯಾಂಗ್ಸ್ಟರ್ ಲಾರೆನ್್ಸ ಬಿಷ್ಣೋಯ್ ಪಡೆಯಿಂದಲೂ ಜೀವ ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದಾಗಿ ಈ ಹಿಂದೆ ತಿಳಿಸಿದ್ದರು ಹಾಗೂ ಗೃಹ ಸಚಿವಾಲಯಕ್ಕೆ ಕಟ್ಟುನಿಟ್ಟಿನ ಭದ್ರತೆ ಒದಗಿಸುವಂತೆ ಹಲವು ಬಾರಿ ಪತ್ರ ಬರೆದಿದ್ದರು. ಈ ದಾಳಿಯ ಹಿಂದೆ ರಾಜಕೀಯ ವೈಷಮ್ಯವಿದೆಯೇ ಅಥವಾ ವೈಯಕ್ತಿಕ ಕಾರಣಗಳಿವೆಯೇ ಎಂಬ ಕೋನದಲ್ಲಿ ದೆಹಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
