ಬೆಂಗಳೂರು,ಮಾ.1- ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿಯನ್ನು ಮತ್ತಷ್ಟು ಅಧ್ಯಯನಕ್ಕೆ ಒಳಪಡಿಸಲು ಸಚಿವ ಸಂಪುಟ ಉಪಸಮಿತಿ ರಚಿಸುವ ಮೂಲಕ ಬೀಸುವ ದೊಣ್ಣೆಯಿಂದ ತಲೆ ತಪ್ಪಿಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ನಿನ್ನೆ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. 2015 ರಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ನೇತೃತ್ವದಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮಾಹಿತಿಗಳನ್ನು ಜಯಪ್ರಕಾಶ್ ಹೆಗ್ಡೆ ಅವರ ಸಮಿತಿ ದತ್ತಾಂಶ ಸಮೀಕರಿಸಿ ಸರ್ಕಾರಕ್ಕೆ ವರದಿ ನೀಡಿದೆ.
ಅದರಲ್ಲಿ ಜಾತಿವಾರು ಜನಸಂಖ್ಯೆಯ ವಿವರಗಳಿದ್ದು, ವಿಧಾನಸಭಾ ಕ್ಷೇತ್ರವಾರು ಜಾತಿ ಜನಗಣತಿಯ ಅಂಕಿ ಅಂಶಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ವರದಿಯ ಮಾಹಿತಿಗಳು ಅಧಿಕೃತವಾಗಿ ಇನ್ನೂ ಹೊರಬಂದಿಲ್ಲ. ನಿನ್ನೆ ಇದ್ದಕ್ಕಿದ್ದಂತೆ ಮಾಧ್ಯಮಗಳಲ್ಲಿ ಕೆಲವು ದತ್ತಾಂಶಗಳು ಬಹಿರಂಗಗೊಂಡಿವೆ. ಅದು ಕೆಲ ಸಮುದಾಯವನ್ನು ಮತ್ತಷ್ಟು ಕೆರಳುವಂತೆ ಮಾಡಿದೆ.
ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲೇ ಇದು ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿದೆ. ವರದಿಗೆ ಕಾಂಗ್ರೆಸ್‍ನ ಹಿರಿಯ ಶಾಸಕರಾಗಿರುವ ಶ್ಯಾಮನೂರು ಶಿವಶಂಕರಪ್ಪ ಬಹಿರಂಗವಾಗಿ ವಿರೋಧಿಸಿದ್ದಾರೆ. ಒಕ್ಕಲಿಗ ಸಮುದಾಯ ಕೂಡ ವರದಿಯನ್ನು ತಿರಸ್ಕರಿಸಬೇಕು ಎಂದು ಪಟ್ಟು ಹಿಡಿದಿದೆ. ಈ ಹಂತದಲ್ಲಿ ವರದಿಯಲ್ಲಿರುವ ದತ್ತಾಂಶಗಳನ್ನು ಬಹಿರಂಗಗೊಳಿಸಿದರೆ ಅದು ಲೋಕಸಭೆ ಚುನಾವಣೆಯ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆಯಿದೆ.
ವಾಣಜ್ಯ ಬಳಕೆ ಎಲ್‍ಪಿಜಿ ದರ ಹೆಚ್ಚಳ
8 ವರ್ಷಗಳ ಹಿಂದೆ ನಡೆದ ಸಮೀಕ್ಷೆಯ ದತ್ತಾಂಶಗಳನ್ನು ಈಗಲೂ ಪಾಲನೆ ಮಾಡುವುದು ಅವೈಜ್ಞಾನಿಕ ಎಂಬುದು ವರದಿಯನ್ನು ವಿರೋಧಿಸುವವರ ಅಭಿಪ್ರಾಯವಾಗಿದೆ. ವರದಿ ನೀಡಿದ ಜಯಪ್ರಕಾಶ್ ಹೆಗ್ಡೆಯವರು, ಆಗಿನ ಸಮೀಕ್ಷಾ ಮಾಹಿತಿಗಳ ಜೊತೆಗೆ ನಮ್ಮ ಆಯೋಗ ವರ್ತಮಾನದ ಅಂಕಿ ಅಂಶಗಳನ್ನು ಕಲೆ ಹಾಕಿ ಸಮಗ್ರವಾಗಿ 2024 ರ ಸಾಮಾಜಿಕ ಮತ್ತು ಶೈಕ್ಷಣಿಕ ಅಧ್ಯಯನ ವರದಿಯನ್ನು ಸಿದ್ಧಪಡಿಸಿದೆ ಎಂದು ತಿಳಿಸಿದ್ದಾರೆ.
ಈ ವರದಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚುನಾವಣೆ ಹೊಸ್ತಿಲಿನಲ್ಲಿ ಅನಗತ್ಯವಾಗಿ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ. ಈ ಹಿಂದೆ ಲಿಂಗಾಯತ ಹಾಗೂ ವೀರಶೈವ ಧರ್ಮದ ಸಾಂವಿಧಾನಿಕ ಸ್ಥಾನಮಾನಕ್ಕಾಗಿ ನಡೆಸಿದ ಚರ್ಚೆಗಳು ಅಡ್ಡಪರಿಣಾಮ ಬೀರಿ 2018 ರ ವಿಧಾನಸಭಾ ಹಾಗೂ 2019 ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪೆಟ್ಟು ತಿನ್ನಬೇಕಾಯಿತು. ಈಗ ಜಾತಿ ಜನಗಣತಿಯ ವರದಿಯನ್ನು ಬಹಿರಂಗಪಡಿಸಿ ವಿವಾದಕ್ಕೆ ಸಿಲುಕುವುದು ಬೇಡ ಎಂದು ಬಹುತೇಕ ಶಾಸಕರು, ಸಚಿವರು, ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸುವುದರ ಮೂಲಕ ಬಹಿರಂಗಪಡಿಸುವುದು ಅಥವಾ ನೇರವಾಗಿ ಸರ್ಕಾರವೇ ಪ್ರಕಟಿಸುವ ಆಯ್ಕೆಗಳು ಚರ್ಚೆಯಲ್ಲಿವೆ. ಆದರೆ ಸದ್ಯಕ್ಕೆ ಅದ್ಯಾವುದರ ಗೋಜಿಗೂ ಹೋಗದೆ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿ 3 ತಿಂಗಳೊಳಗೆ ವರದಿ ನೀಡುವಂತೆ ಸೂಚಿಸುವ ಮೂಲಕ ಬೀಸುವ ದೊಣ್ಣೆಯಿಂದ ತಲೆ ತಪ್ಪಿಸಿಕೊಳ್ಳುವ ಚರ್ಚೆಗಳು ನಡೆದಿವೆ. ಸಚಿವ ಸಂಪುಟ ಉಪಸಮಿತಿ ರಚನೆಯಾಗಿದ್ದೇ ಆದರೆ ಅಲ್ಲಿಗೆ ಲೋಕಸಭೆ ಚುನಾವಣೆ ಘೋಷಣೆಯಾಗಲಿದೆ. ಸರ್ಕಾರ ವರದಿಯನ್ನು ಬಹಿರಂಗಪಡಿಸುವ ಅಥವಾ ಅನುಷ್ಠಾನಗೊಳಿಸುವ ಇಕ್ಕಟ್ಟಿಗಾಗಲೀ ಸಿಲುಕುವ ಅನಿವಾರ್ಯತೆ ಇರುವುದಿಲ್ಲ.
ಲೋಕಸಭೆ ಚುನಾವಣೆ ಬಳಿಕ ಪರಿಸ್ಥಿತಿಯನ್ನು ಆಧರಿಸಿ ಸರ್ಕಾರ ಮುಂದಿನ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸಂಪುಟದ ಸಹದ್ಯೋಗಿಗಳು ಮುಖ್ಯಮಂತ್ರಿಯವರಿಗೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.