Homeರಾಜ್ಯಸಚಿವ ಸ್ಥಾನ ಸಿಗದ ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ವ್ಯಾಪಕ ಆಕ್ರೋಶ

ಸಚಿವ ಸ್ಥಾನ ಸಿಗದ ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ವ್ಯಾಪಕ ಆಕ್ರೋಶ

ಬೆಂಗಳೂರು, ಆ.4- ಕೋಲಾರ, ಚಿಕ್ಕಬಳ್ಳಾಪುರ ಅವಿಭಜಿತ ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡದೇ ಇರುವುದರಿಂದ ವ್ಯಾಪಕ ಆಕ್ರೋಶಗಳು ಕೇಳಿ ಬಂದಿದ್ದು, ಅಸಮಾಧಾನಿತರು ಪ್ರತ್ಯೇಕ ಸಭೆ ನಡೆಸುವ ಮೂಲಕ ಮುಂದಿನ ಹೋರಾಟದತ್ತ ಗಮನ ಹರಿಸಿದ್ದಾರೆ. ಕೋಲಾರ ಜಿಲ್ಲೆಯಲ್ಲಿ 4, ಚಿಕ್ಕಬಳ್ಳಾಪುರದಲ್ಲಿ 3 ಸೇರಿ, ಒಟ್ಟು ಎರಡು ಜಿಲ್ಲೆಗಳಿಂದ 7 ಮಂದಿ ಶಾಸಕರಿದ್ದಾರೆ. 2013 ರಿಂದ 2018ರ ನಡುವೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ರಮೇಶ್‌ ಕುಮಾರ್‌ ಸಚಿವರಾಗಿದ್ದನ್ನು ಹೊರತು ಪಡಿಸಿದರೆ, 8 ವರ್ಷಗಳಿಂದ ಕೋಲಾರ ಜಿಲ್ಲೆಗೆ ಅನ್ಯಾಯವಾಗುತ್ತಿದೆ.

2023ರಲ್ಲಿ ಕಾಂಗ್ರೆಸ್‌‍ ಸರ್ಕಾರ ಮರಳಿ ಅಧಿಕಾರಕ್ಕೆ ಬಂದಾಗಲೂ ಜಿಲ್ಲೆಗೆ ಸಚಿವ ಸ್ಥಾನ ವಂಚಿಸಲಾಗಿತ್ತು. ಬೆಂಗಳೂರಿನ ಬೈರತಿ ಸುರೇಶ್‌ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಗೆ ಡಾ.ಎಂ.ಸಿ.ಸುಧಾಕರ್‌ ಅವರನ್ನು ನೇಮಿಸಲಾಗಿತ್ತಾದರೂ, 3 ವರ್ಷಗಳ ಬಳಿಕ ಅವರನ್ನು ಕೈ ಬಿಡಲಾಗಿದೆ.

2 ಜಿಲ್ಲೆಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂಬ ಆಕ್ರೋಶಗಳು ಕೇಳಿ ಬಂದಿವೆ. ಈ ಮೊದಲು ಕೋಲಾರ ಲೋಕಸಭಾ ಕ್ಷೇತ್ರವನ್ನು 9 ಬಾರಿ ಪ್ರತಿನಿಧಿಸಿದ್ದ ಕೆ.ಎಚ್‌. ಮುನಿಯಪ್ಪ ಅವರನ್ನು ಕಾಂಗ್ರೆಸ್‌‍ನ ಒಳ ಏಟು ಸೋಲುವಂತೆ ಮಾಡಿತ್ತು. ಕೊನೆಗೆ ಮುನಿಯಪ್ಪ ಅವರು ಜಿಲ್ಲೆಯಿಂದ ವಲಸೆ ಹೋಗಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿದ್ದಾರೆ.

ಮುನಿಯಪ್ಪ ಅವರನ್ನು ಸೋಲಿಸಲು ಒಟ್ಟಾಗಿ ಕೆಲಸ ಮಾಡಿದ ಅವಿಭಜಿತ ಜಿಲ್ಲೆಗಳ ನಾಯಕರ ಮೇಲೆ ನಿರಂತರವಾಗಿ ಹಗೆತನ ತೀರಿಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳಿವೆ.ಕಳೆದ 2023ರ ಲೋಕಸಭಾ ಚುನಾವಣೆಯಲ್ಲಿ ಮುನಿಯಪ್ಪ ತಮ ಅಳಿಯನಿಗೆ ಕೋಲಾರದಿಂದ ಟಿಕೆಟ್‌ ಕೊಡಿಸಲು ಪ್ರಯತ್ನಿಸಿದ್ದರು. ಅದು ಬಹುತೇಕ ಯಶಸ್ವಿಯಾಗಿತ್ತು. ಇನ್ನೇನು ಅಂತಿಮ ಆಯ್ಕೆಯಾಗಬೇಕು ಎಂಬ ಸಂದರ್ಭದಲ್ಲಿ ಚುರುಕಾದ ಮುನಿಯಪ್ಪ ವಿರೋಧಿ ಬಣ, ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಒತ್ತಡ ಹಾಕಿದ್ದಲ್ಲದೇ, ಮುನಿಯಪ್ಪ ಅವರ ಅಳಿಯನಿಗೆ ಟಿಕೆಟ್‌ ತಪ್ಪಿಸುವಲ್ಲಿ ಯಶಸ್ವಿಯಾಗಿತ್ತು.

ಇದರ ಪರಿಣಾಮ ಕೋಲಾರದಲ್ಲಿ ಎರಡನೇ ಬಾರಿಗೆ ಕಾಂಗ್ರೆಸ್‌‍ ಅಭ್ಯರ್ಥಿ ಸೋಲು ಕಂಡರು. ಅದಕ್ಕೆ ಪ್ರತೀಕಾರವಾಗಿ ಮುನಿಯಪ್ಪ ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆಯ ಚರ್ಚೆಯಲ್ಲಿ ತಮ ದಾಳವನ್ನು ಉರುಳಿಸಿದ್ದಾರೆ.ತಮಗೆ ಖಾತೆ ಬದಲಾವಣೆ ಮಾಡಿಕೊಡಬೇಕೆಂದು ಒತ್ತಡ ಹಾಕುವ ಜೊತೆಗೆ ಎರಡು ಜಿಲ್ಲೆಗಳಲ್ಲೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಪಟ್ಟು ಹಿಡಿದಿದ್ದರು ಎಂದು ಹೇಳಲಾಗಿದೆ.

ಮುನಿಯಪ್ಪ ಅವರ ಒತ್ತಡವೋ ಅಥವಾ ಬೇರೆ ಕಾರಣಗಳಿಂದಾಗಿಯೋ ಅವಿಭಜಿತ ಜಿಲ್ಲೆಯ ಶಾಸಕರು ಅವಕಾಶ ವಂಚಿತರಾಗಿದ್ದಾರೆ. ಈಗ ಕನಿಷ್ಠ ಪಕ್ಷ ವಿಧಾನಸಭೆಯ ಮುಖ್ಯ ಸಚೇತಕ ಸ್ಥಾನವನ್ನಾದರೂ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಎರಡು ಜಿಲ್ಲೆಗಳ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಇಂದು ಮಧ್ಯಾಹ್ನ ಸಭೆ ಸೇರಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

RELATED ARTICLES
spot_img

Latest News