Homeರಾಜ್ಯ2 ನಿಮಿಷದಲ್ಲೇ ರಾಜೀನಾಮೆ ಅಂಗೀಕರಿಸುತ್ತೇವೆ : ಬ್ಲಾಕ್‌ಮೇಲ್‌ ಮಾಡುವವರಿಗೆ ಡಿಕೆಶಿ ಶಾಕ್

2 ನಿಮಿಷದಲ್ಲೇ ರಾಜೀನಾಮೆ ಅಂಗೀಕರಿಸುತ್ತೇವೆ : ಬ್ಲಾಕ್‌ಮೇಲ್‌ ಮಾಡುವವರಿಗೆ ಡಿಕೆಶಿ ಶಾಕ್

We will accept resignations within 2 minutes: DK Shivakumar

ಬೆಂಗಳೂರು, ಆ.4- ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗದೇ ಇದ್ದವರು ಬಂಡಾಯದ ಬಾವುಟ ಹಿಡಿದು ರಾಜೀನಾಮೆ ನೀಡಿದರೆ, 2 ನಿಮಿಷದಲ್ಲಿ ಅಂಗೀಕರಿಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಹೈಕಮಾಂಡ್‌ನ ಸಂದೇಶವನ್ನು ಅಸಮಾಧಾನಿತರಿಗೆ ರವಾನಿಸಿರುವ ಡಿ.ಕೆ.ಶಿವಕುಮಾರ್‌, ಎಲ್ಲರೂ ತಾಳೆಯಿಂದ ಇರಬೇಕು. ಅದನ್ನು ಬಿಟ್ಟು ರಾಜೀನಾಮೆ ನೀಡಿ ಬ್ಲಾಕ್‌ಮೇಲ್‌ ಮಾಡುವುದು, ಪ್ರತಿಭಟನೆ ನಡೆಸುವುದು, ಪಕ್ಷಕ್ಕೆ ಹಾನಿ ಮಾಡುವುದನ್ನು ಮಾಡಿದರೆ ಪಕ್ಷ ವಿರೋಧ ಚಟುವಟಿಕೆ ಎಂದು ಪರಿಗಣಿಸಿ ಕ್ರಮ ಜರುಗಿಸುವುದಾಗಿ ಖಡಕ್‌ ಎಚ್ಚರಿಕೆ ನೀಡಲಾಗಿದೆ.

ಎಲ್ಲರಿಗೂ ಅವರ ಹಿರಿತನ, ಪಕ್ಷ ನಿಷ್ಠೆ ಆಧರಿಸಿ ಸ್ಥಾನಮಾನ ನೀಡಲಾಗುತ್ತಿದೆ. ಇರುವುದು ಕೇವಲ 33 ಸ್ಥಾನಗಳು ಮಾತ್ರ. ಎಲ್ಲರಿಗೂ ಅವಕಾಶ ಕೊಡಲಾಗುವುದಿಲ್ಲ. ಹೈಕಮಾಂಡ್‌ ತೀರ್ಮಾನದಂತೆ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಪ್ರತಿಭಟನೆ ನಡೆಸುವುದು, ಟೀಕೆ ಮಾಡುವುದು, ನಾಯಕತ್ವವನ್ನು ಪ್ರಶ್ನಿಸಿದಂತಾಗುತ್ತದೆ. ಈ ಸಂದರ್ಭದಲ್ಲಿನ ನಡವಳಿಕೆಗಳನ್ನು ಪರಿಗಣಿಸಿ ಮುಂದಿನ ವಿಧಾನಸಭಾ ಚುನಾವಣೆಯ ವೇಳೆ ಟಿಕೆಟ್‌ ನೀಡುವುದನ್ನು ನಿರ್ಧರಿಸಲಾಗುತ್ತದೆ. ಪಕ್ಷದ ಶಿಸ್ತನ್ನು ಉಲ್ಲಂಘಿಸಿದವರಿಗೆ ಯಾವುದೇ ರೀತಿಯ ಕ್ಷಮೆ ಇಲ್ಲ ಎಂದು ಸಂದೇಶ ರವಾನೆಯಾಗಿದೆ.

ಶಾಸಕರು ಯಾವುದೇ ಅಭಿಪ್ರಾಯಗಳಿದ್ದರೂ ಅದನ್ನು ಪಕ್ಷದಲ್ಲಿ ಆಂತರಿಕವಾಗಿ ಚರ್ಚೆ ಮಾಡಬೇಕು. ತಮ ಬೆಂಬಲಿಗರನ್ನು ನಿಯಂತ್ರಿಸಬೇಕು. ಪ್ರತಿಭಟನೆ ನಡೆಸುವುದು ಸರಿಯಲ್ಲ, ಒಂದು ವೇಳೆ ಪ್ರತಿಭಟನೆಯಾದರೂ ಸಂಯಮ ಕಾಯ್ದುಕೊಳ್ಳುವುದು ಅತ್ಯಗತ್ಯ. ಬಾಯಿಗೆ ಬಂದಂತೆ ಮಾತನಾಡುವುದು, ನಾಯಕತ್ವವನ್ನು ಅವಹೇಳನ ಮಾಡಿದರೆ ಸಹಿಸಲಾಗುವುದಿಲ್ಲ ಎಂದು ಹೇಳಲಾಗಿದೆ.

ಶಾಸಕ ಸ್ಥಾನಕ್ಕೆ ಈವರೆಗೂ ಯಶವಂತರಾಯ ಗೌಡ ಪಾಟೀಲ್‌ ಅವರು ರಾಜೀನಾಮೆ ನೀಡಿದ್ದಾರೆ. ಇನ್ನೂ ಒಂದಷ್ಟು ಮಂದಿ ಶಾಸಕರು ತಮ ಬೆಂಬಲಿಗರ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಧಮಕಿ ಹಾಕಿದ್ದಾರೆ.

ರಾಜೀನಾಮೆ ನೀಡುವ ಮೂಲಕ ಪಕ್ಷವನ್ನು ಬ್ಲಾಕ್‌ಮೇಲ್‌ ಮಾಡುವುದು, ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವುದನ್ನು ಮಾಡಿದರೆ ಸಹಿಸುವುದಿಲ್ಲ. ರಾಜೀನಾಮೆ ನೀಡುವವರ ಜೊತೆಗೆ ಯಾವ ಸಂಧಾನವೂ ನಡೆಯುವುದಿಲ್ಲ. ತಕ್ಷಣವೇ ರಾಜೀನಾಮೆಯನ್ನು ಅಂಗೀಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್‌‍ ಪಕ್ಷಕ್ಕೆ 140ಕ್ಕೂ ಹೆಚ್ಚು ಶಾಸಕರ ಬೆಂಬಲ ಇರುವುದರಿಂದ ಸದ್ಯದ ಪರಿಸ್ಥಿತಿ ನಿಭಾಯಿಸುವುದು ಕಷ್ಟವೇನೂ ಅಲ್ಲ ಎಂಬ ಅಭಿಪ್ರಾಯಗಳಿವೆ. 122 ಸ್ಥಾನಗಳ ಬಹುಮತಕ್ಕಿಂತಲೂ 18 ಮಂದಿ ಶಾಸಕರು ಹೆಚ್ಚುವರಿಯಾಗಿದ್ದಾರೆ. ಅವರಲ್ಲಿ ಐದಾರು ಮಂದಿ ರಾಜೀನಾಮೆ ನೀಡುವುದಾಗಿ ಹೇಳುತ್ತಿದ್ದಾರೆ. ಇನ್ನೂ ಕೆಲವರಿಗೆ ರಾಜೀನಾಮೆ ನೀಡಿ ಮರು ಆಯ್ಕೆಯಾಗುವ ಬಗ್ಗೆ ಅನುಮಾನಗಳಿವೆ. ಹೀಗಾಗಿ ನೆಪ ಮಾತ್ರಕ್ಕೆ ರಾಜೀನಾಮೆಯ ಬೆದರಿಕೆ ಹಾಕಿ ಬ್ಲಾಕ್‌ಮೇಲ್‌ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌‍ ಹೈಕಮಾಂಡ್‌ ವರಿಷ್ಠರ ಸಲಹೆಯನ್ನು ಮೀರಿ ರಾಜೀನಾಮೆ ನೀಡಿದರೆ, ಅಂತಹವರ ಜೊತೆ ಯಾವುದೇ ಮಾತುಕತೆ ಬೇಡ. ರಾಜೀನಾಮೆ ಅಂಗೀಕರಿಸಿ ಎಂದು ಖಡಕ್‌ ಆದೇಶ ನೀಡಿದೆ. ಅದೇ ಸಂದೇಶವನ್ನು ಮುಖ್ಯಮಂತ್ರಿಯವರು ಅಸಮಾಧಾನಿತರಿಗೆ ದಾಟಿಸಿದ್ದಾರೆ.

ಆರಂಭದಲ್ಲಿ ಅಬ್ಬರಿಸಿದ ಅಸಮಾಧಾನಿತರು ನಿಧಾನಕ್ಕೆ ತಣ್ಣಗಾಗುತ್ತಿದ್ದಾರೆ. ಕೆಲವು ಕಡೆ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿರುವುದರಿಂದ ವಾತಾವರಣ ತಿಳಿಯಾಗಿಲ್ಲ. ಆದರೆ ಯಾರೂ ಸಂಧಾನಕ್ಕೆ ಬರದೇ ಇರುವುದರಿಂದ ಪ್ರತಿಭಟನೆ ನಡೆಸುವವರು ಕೈಚೆಲ್ಲುವಂತಹ ವಾತಾವರಣ ನಿರ್ಮಾಣವಾಗಿದೆ.

RELATED ARTICLES
spot_img

Latest News