Homeರಾಜಕೀಯಸಚಿವ ಸ್ಥಾನ ಕೈತಪ್ಪಿದಕ್ಕೆ ರಾಜೀನಾಮೆಗೆ ಮುಂದಾದ ತನ್ವೀರ್‌ ಸೇಠ್‌

ಸಚಿವ ಸ್ಥಾನ ಕೈತಪ್ಪಿದಕ್ಕೆ ರಾಜೀನಾಮೆಗೆ ಮುಂದಾದ ತನ್ವೀರ್‌ ಸೇಠ್‌

ಮೈಸೂರು,ಆ.4- ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಮೈಸೂರಿನ ಶಾಸಕ ತನ್ವೀರ್‌ ಸೇಠ್‌ ಅವರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕ ಸ್ಥಾನ ಮತ್ತು ಕಾಂಗ್ರೆಸ್‌‍ ಸದಸ್ಯತ್ವಕ್ಕೆ ರಾಜೀನಾಮೆ ನೀಡುವಂತೆ ಬಿಗಿಪಟ್ಟು ಹಿಡಿದಿದ್ದಾರೆ. ಇಂದೇ ರಾಜೀನಾಮೆ ನೀಡುವಂತೆ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಸಚಿವ ಸ್ಥಾನ ಕೈತಪ್ಪಿದ ವಿಚಾರ ತಿಳಿಯುತ್ತಿದ್ದಂತೆ ತನ್ವೀರ್‌ ಸೇಠ್‌ ಅವರ ಬೆಂಬಲಿಗರು ಮೈಸೂರಿನಲ್ಲಿ ಜಮಾಯಿಸಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್‌‍ ಸದಸ್ಯತ್ವಕ್ಕೂ ರಾಜೀನಾಮೆ ನೀಡಿ, ಇಂದೇ ರಾಜೀನಾಮೆ ನೀಡಿ ಎಂದು ಕಾರ್ಯಕರ್ತರು ಶಾಸಕರನ್ನು ಒತ್ತಾಯಿಸಿದರು.

ಕಾರ್ಯಕರ್ತರ ಮನವೊಲಿಕೆ ಸಾಧ್ಯವಾಗದೆ ತನ್ವೀರ್‌ ಸೇಠ್‌ ಅವರು ಬೆಂಗಳೂರಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ತನ್ವೀರ್‌ ಸೇಠ್‌ ಅವರ ಅಭಿಮಾನಿಗಳು ರಾಜೀನಾಮೆ ನೀಡಲು ಸಿದ್ಧತೆ ನಡೆಸಿದ್ದು, ನೂರಾರು ಕಾರ್ಯಕರ್ತರು ಇಂದು ಬೆಂಗಳೂರಿಗೆ ತೆರಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ರಾಜೀನಾಮೆ ನೀಡಲು ತೆರಳಿರುವವರಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಶೌಕತ್‌ ಪಂಡು, ಬಷೀರ್‌, ಶ್ರೀಧರ್‌, ಪ್ರದೀಪ್‌ ಚಂದ್ರ, ಬ್ಲಾಕ್‌ ಅಧ್ಯಕ್ಷ ಸಯ್ಯದ್‌ ಇಕ್ಬಾಲ್‌, ಮಂಜುನಾಥ್‌, ಎಂಡಿಸಿಸಿ ಮಂಜುನಾಥ್‌, ಅಫ್ತಾಬ್‌ ಅಕಲ್‌ ಸೇರಿದಂತೆ ಹಲವು ಕಾಂಗ್ರೆಸ್‌‍ ಕಾರ್ಯಕರ್ತರು ಇದ್ದಾರೆ.

ಸಂಪುಟ ವಿಸ್ತರಣೆಯ ಬಳಿಕ ಹಿರಿಯ ಶಾಸಕರಿಗೆ ಸ್ಥಾನ ನೀಡದಿರುವುದರಿಂದ ಕಾಂಗ್ರೆಸ್‌‍ನಲ್ಲಿ ಅಸಮಾಧಾನದ ಬಿಸಿ ಹೆಚ್ಚಾಗಿದೆ. ತನ್ವೀರ್‌ ಸೇಠ್‌ ಅವರು 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನ ನಿರೀಕ್ಷಿಸಿದ್ದರು. ಈ ಬೆಳವಣಿಗೆಯಿಂದ ಪಕ್ಷದ ಹೈಕಮಾಂಡ್‌ ಮುಂದೆ ಮತ್ತೊಂದು ತಲೆನೋವು ಎದುರಾಗಿದೆ. ನಾಯಕರು ಕಾರ್ಯಕರ್ತರನ್ನು ಹೇಗೆ ಸಮಾಧಾನಪಡಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

RELATED ARTICLES
spot_img

Latest News