Homeಬೆಂಗಳೂರುಬೆಂಗಳೂರು : ರಸ್ತೆಯಲ್ಲೇ ನಿಂತ ಅನಾಥ ವಾಹನಗಳ ಎತ್ತಂಗಡಿಗೆ ವೇಳಾಪಟ್ಟಿ

ಬೆಂಗಳೂರು : ರಸ್ತೆಯಲ್ಲೇ ನಿಂತ ಅನಾಥ ವಾಹನಗಳ ಎತ್ತಂಗಡಿಗೆ ವೇಳಾಪಟ್ಟಿ

Schedule for removal of abandoned vehicles parked on the road

ಬೆಂಗಳೂರು, ಆ.4- ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ರಸ್ತೆಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿರುವ ಬೀಡಾಡಿ ವಾಹನಗಳ ತೆರವು ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಸಮಗ್ರ ಕ್ರಿಯಾ ಯೋಜನೆ ರೂಪಿಸಿ, ಪಾಲಿಕೆವಾರು ಕಾರ್ಯಾಚರಣೆ ವೇಳಾಪಟ್ಟಿಯನ್ನು ಸಿದ್ಧಪಡಿಸುವಂತೆ ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದಲ್ಲಿ ಬಿಡಾಡಿ ವಾಹನಗಳ ತೆರವು ಕಾರ್ಯಾಚರಣೆ, ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಇಂದು ಅಧಿಕಾರಿಗಳೊಂದಿಗೆ ನಡೆದ ವರ್ಚುವಲ್‌ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಡಾಡಿ ವಾಹನಗಳ ತೆರವು ಕಾರ್ಯವನ್ನು ಮತ್ತಷ್ಟು ವೇಗಗೊಳಿಸಲು ನಗರ ಪಾಲಿಕೆ ಅಧಿಕಾರಿಗಳು ಸಮಗ್ರ ಕಾರ್ಯಯೋಜನೆ ರೂಪಿಸಿ, ನಿಗದಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಬಿಡಾಡಿ ವಾಹನಗಳ ತೆರವು ಕಾರ್ಯಕ್ಕೆ ಸಂಬಂಧಿಸಿದಂತೆ ಕೆಳಹಂತದ ಅಧಿಕಾರಿಗಳ ಕಾರ್ಯಕ್ಷಮತೆಯ ಮೇಲೆ ಹಿರಿಯ ಅಧಿಕಾರಿಗಳು ನಿರಂತರ ಮೇಲ್ವಿಚಾರಣೆ ನಡೆಸಬೇಕು. ಕಾರ್ಯಗಳ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಿ, ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ತೆರವು ಕಾರ್ಯದಲ್ಲಿ ಪೊಲೀಸ್‌‍ ಹಾಗೂ ನಗರ ಪಾಲಿಕೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಈವರೆಗೆ ಗುರುತಿಸಿರುವ, ದಂಡ ಪಾವತಿಸಿ ಬಿಡುಗಡೆ ಮಾಡಿರುವ ಹಾಗೂ ಟೋಯಿಂಗ್‌ ಮಾಡಿರುವ ವಾಹನಗಳ ಕುರಿತು ನಿಖರ ಮಾಹಿತಿಯನ್ನು ಸಲ್ಲಿಸಬೇಕು. ನೋಟಿಸ್‌‍ ಅಂಟಿಸಿ ಟೋಯಿಂಗ್‌ ಮಾಡಿದ ನಂತರ 15 ದಿನಗಳು ಕಳೆದಿರುವ ಬಿಡಾಡಿ ವಾಹನಗಳನ್ನು ಹರಾಜು ಮಾಡುವ ಸಲುವಾಗಿ ಪತ್ರಿಕಾ ಪ್ರಕಟಣೆ ನೀಡುವಂತೆ ನಗರ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.

ಪ್ರತಿ ಸಂಚಾರಿ ಪೊಲೀಸ್‌‍ ಠಾಣೆಗೆ ಈ ಕಾರ್ಯಕ್ಕಾಗಿ ಪ್ರತ್ಯೇಕವಾಗಿ ಇಬ್ಬರು ಪೊಲೀಸ್‌‍ ಸಿಬ್ಬಂದಿಯನ್ನು ನಿಯೋಜಿಸಬೇಕು. ಅಲ್ಲದೆ, ಪೊಲೀಸ್‌‍ ಇಲಾಖೆ ಗುರುತಿಸಿರುವ ಬಿಡಾಡಿ ವಾಹನಗಳಿಗೆ ನೋಟಿಸ್‌‍ ಅಂಟಿಸುವ ಕಾರ್ಯದಲ್ಲಿ ವಾರ್ಡ್‌ ಅಧಿಕಾರಿಗಳೊಂದಿಗೆ ಮಾರ್ಷಲ್‌ಗಳನ್ನು ಸಹ ನಿಯೋಜಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದಲ್ಲಿ ಇದುವರೆಗೆ 773 ಕಿ.ಮೀ. ಪಾದಚಾರಿ ಮಾರ್ಗಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸುವವರ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಬೇಕು. ತೆರವುಗೊಳಿಸಿದ ನಂತರ ಮರು ಅತಿಕ್ರಮಣ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದರ ಜೊತೆಗೆ, ನಿಯಮಾನುಸಾರ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯದ ಜೊತೆಗೆ ದುರಸ್ತಿ ಕಾಮಗಾರಿಯನ್ನೂ ಸಮಾನಾಂತರವಾಗಿ ಕೈಗೊಳ್ಳಬೇಕು. ಈಗಾಗಲೇ ಹಲವು ಕಡೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನೂ ಕೆಲವು ಕಡೆ ಅಂತಿಮ ಹಂತದಲ್ಲಿದೆ. ಬಾಕಿ ಇರುವ ಟೆಂಡರ್‌ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸಿ, ಪಾದಚಾರಿ ಮಾರ್ಗಗಳ ದುರಸ್ತಿ ಕಾಮಗಾರಿಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಂತೆ ಸೂಚನೆ ನೀಡಿದರು.

ನಗರದ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಅತಿಕ್ರಮಣ ಮತ್ತು ಬಿಡಾಡಿ ವಾಹನಗಳಿಂದ ಮುಕ್ತಗೊಳಿಸುವ ಕಾರ್ಯದಲ್ಲಿ ಸಂಬಂಧಿತ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಬೇಕು. ನಾಗರಿಕರಿಗೆ ಸುರಕ್ಷಿತ, ಸ್ವಚ್ಛ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವುದು ಎಲ್ಲಾ ಇಲಾಖೆಗಳ ಆದ್ಯತೆಯಾಗಿರಬೇಕು ಎಂದು ಸಚಿವರು ತಿಳಿಸಿದರು.

ಬೆಂಗಳೂರು ಪೊಲೀಸ್‌‍ ವಿಭಾಗದ ಜಂಟಿ ಪೊಲೀಸ್‌‍ ಆಯುಕ್ತರಾದ ಕಾರ್ತಿಕ್‌ ರೆಡ್ಡಿ ಅವರು ಮಾತನಾಡಿ, ನಗರದಲ್ಲಿ ಪೊಲೀಸ್‌‍ ಇಲಾಖೆಯಿಂದ 2,533 ಹಾಗೂ ನಾಗರಿಕರಿಂದ 4,043 ಸೇರಿ ಒಟ್ಟು 6,576 ಬಿಡಾಡಿ ವಾಹನಗಳನ್ನು ಗುರುತಿಸಲಾಗಿದೆ. ಈ ಪೈಕಿ 1,605 ವಾಹನಗಳಿಗೆ ನೋಟಿಸ್‌‍ ಅಂಟಿಸಲಾಗಿದ್ದು, 263 ವಾಹನಗಳನ್ನು ಟೋಯಿಂಗ್‌ ಮಾಡಲಾಗಿದೆ. ನೋಟಿಸ್‌‍ ಅಂಟಿಸಿದ ಹಾಗೂ ಟೋಯಿಂಗ್‌ ಮಾಡಿದ ವಾಹನಗಳ ಮಾಲೀಕರು ?2.16 ಲಕ್ಷ ದಂಡ ಪಾವತಿಸಿ ತಮ ವಾಹನಗಳನ್ನು ಬಿಡುಗಡೆ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್‌ ರಾವ್‌, ನಗರ ಪಾಲಿಕೆ ಆಯುಕ್ತರಾದ ರಮೇಶ್‌ ಡಿ.ಎಸ್‌‍., ಪೊಮಲ ಸುನೀಲ್‌ ಕುಮಾರ್‌, ರಮೇಶ್‌ ಕೆ.ಎನ್‌., ಡಾ. ರಾಜೇಂದ್ರ ಕೆ.ವಿ. ಹಾಗೂ ಜಿ. ಜಗದೀಶ್‌, ಅಪರ ಆಯುಕ್ತರು, ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ವಿದ್ಯುತ್‌ ವಿಭಾಗದ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ವರ್ಚುವಲ್‌ ಮೂಲಕ ಭಾಗವಹಿಸಿದ್ದರು.

RELATED ARTICLES
spot_img

Latest News