Homeರಾಜಕೀಯಅತೃಪ್ತ ಶಾಸಕರಿಂದ ಪ್ರತ್ಯೇಕ ಸಭೆ, ನಿಲ್ಲದ ಬಂಡಾಯ

ಅತೃಪ್ತ ಶಾಸಕರಿಂದ ಪ್ರತ್ಯೇಕ ಸಭೆ, ನಿಲ್ಲದ ಬಂಡಾಯ

Separate meeting by dissatisfied MLAs

ಬೆಂಗಳೂರು, ಆ.5- ಸಚಿವ ಸಂಪುಟ ವಿಸ್ತರಣೆ ಯಲ್ಲಿ ಅವಕಾಶ ವಂಚಿತರಾಗಿರುವ ಕಾಂಗ್ರೆಸ್‌‍ನ 30ಕ್ಕೂ ಹೆಚ್ಚು ಶಾಸಕರು ಗುರುವಾರ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಲಿದ್ದು, ಮುಂದಿನ ರಾಜಕೀಯ ನಡೆ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಈ ಸಭೆ ಕಾಂಗ್ರೆಸ್‌‍ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಹಲವು ಹಿರಿಯ ಶಾಸಕರು ತೀವ್ರ ಅಸಮಾಧಾನ ಗೊಂಡಿದ್ದು, ಕೆಲವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಆಯ್ಕೆಯನ್ನೂ ಪರಿಗಣಿಸಿದ್ದರು ಎನ್ನಲಾಗಿದೆ. ಆದರೆ ರಾಜೀನಾಮೆಯಿಂದ ನಿರೀಕ್ಷಿತ ರಾಜಕೀಯ ಪರಿಣಾಮ ಉಂಟಾಗುವುದಿಲ್ಲ ಎಂಬ ಅಭಿಪ್ರಾಯಕ್ಕೆ ಬಂದ ಹಿನ್ನೆಲೆಯಲ್ಲಿ ಹೊಸ ಕಾರ್ಯತಂತ್ರ ರೂಪಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಕಾಂಗ್ರೆಸ್‌‍ನ ಹಿರಿಯ ಶಾಸಕರಾದ ಟಿ.ಬಿ. ಜಯಚಂದ್ರ, ಎನ್‌.ವೈ.ಗೋಪಾಲಕೃಷ್ಣ, ಆರ್‌.ವಿ. ದೇಶಪಾಂಡೆ, ಅಪ್ಪಾಜಿ ನಾಡಗೌಡ, ದಿನೇಶ್‌ ಗುಂಡೂರಾವ್‌, ಎಚ್‌.ಪಿ. ಮಹದೇವಪ್ಪ, ಶಿವಾನಂದ ಪಾಟೀಲ, ತನ್ವೀರ್‌ ಸೇಠ್‌, ಹಂಪನಗೌಡ ಬಾದರ್ಲಿ, ಎಸ್‌‍.ಆರ್‌. ಶ್ರೀನಿವಾಸ್‌‍, ಬಸವರಾಜ ನೀಲಪ್ಪ ಶಿವಣ್ಣನವರ್‌, ಎನ್‌.ಎ.ಹ್ಯಾರಿಸ್‌‍, ರಹೀಂ ಖಾನ್‌, ಎಸ್‌‍.ಎನ್‌. ನಾರಾಯಣಸ್ವಾಮಿ, ಪ್ರಸಾದ್‌ ಅಬ್ಬಯ್ಯ, ಪಿ.ಎಂ. ಅಶೋಕ್‌, ಎ.ಆರ್‌. ಕೃಷ್ಣಮೂರ್ತಿ, ಕೆ.ಎನ್‌. ರಾಜಣ್ಣ, ರಾಘವೇಂದ್ರ ಹಿಟ್ನಾಳ್‌, ಕೆ. ಷಡಕ್ಷರಿ, ಡಾ. ಎಂ.ಸಿ. ಸುಧಾಕರ್‌ ಸೇರಿದಂತೆ ಹಲವು ಶಾಸಕರು ಭಾಗವಹಿಸುವ ಸಾಧ್ಯತೆ ಇದೆ.

ಒಂದೆಡೆ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕರು ಅಸಮಾಧಾನಿತ ಶಾಸಕರನ್ನು ಮನವೊಲಿಸಲು ಸಂಧಾನದ ಪ್ರಯತ್ನ ಮುಂದುವರಿಸಿರುವ ನಡುವೆಯೇ, ಅವಕಾಶ ವಂಚಿತ ಹಿರಿಯ ಶಾಸಕರ ಈ ಪ್ರತ್ಯೇಕ ಸಭೆ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ಅಸಮಾಧಾನಗೊಂಡಿರುವ ಹಲವು ಶಾಸಕರು ಕಾಂಗ್ರೆಸ್‌‍ ವರಿಷ್ಠರ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಸಭೆಯಲ್ಲಿ ಮುಂದಿನ ರಾಜಕೀಯ ಕಾರ್ಯತಂತ್ರ, ಪಕ್ಷದ ನಾಯಕತ್ವದೊಂದಿಗೆ ನಡೆಸಬೇಕಾದ ಮಾತುಕತೆ ಹಾಗೂ ಒಗ್ಗಟ್ಟಿನ ನಿಲುವಿನ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ನಾಳೆ ನಡೆಯಲಿರುವ ಈ ಸಭೆಯಲ್ಲಿ ಯಾವ ರೀತಿಯ ನಿರ್ಧಾರಗಳು ಹೊರಬೀಳಲಿವೆ ಎಂಬುದರತ್ತ ಕಾಂಗ್ರೆಸ್‌‍ ವಲಯ ಸೇರಿದಂತೆ ರಾಜ್ಯ ರಾಜಕೀಯದ ಗಮನ ಕೇಂದ್ರೀಕೃತವಾಗಿದೆ.

RELATED ARTICLES
spot_img

Latest News