ಮುಂಬೈ, ಆ.5- ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಣಕಾಸು ನೀತಿ ಸಮಿತಿಯ (ಎಂಪಿಸಿ) ನಿರ್ಧಾರ ಪ್ರಕಟವಾಗುವ ಮುನ್ನ, ಅಮೆರಿಕ-ಇರಾನ್ ಮಾತುಕತೆಯಲ್ಲಿ ಪ್ರಗತಿ ಹಾಗೂ ಕಚ್ಚಾ ತೈಲದ ಬೆಲೆ ಇಳಿಕೆಯ ಪರಿಣಾಮ ರೂಪಾಯಿ ಇಂದು ಆರಂಭಿಕ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಎದುರು 39 ಪೈಸೆ ಏರಿಕೆ ಕಂಡು 94.89 ಮಟ್ಟಕ್ಕೆ ತಲುಪಿದೆ.
ಅಂತರ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ 94.90ಕ್ಕೆ ವಹಿವಾಟು ಆರಂಭಿಸಿ, ನಂತರ 94.89 ಕ್ಕೆ ತಲುಪಿತು. ಮಂಗಳವಾರದ ವಹಿವಾಟಿನಲ್ಲಿ ರೂಪಾಯಿ 95.28 ಕ್ಕೆ ಮುಕ್ತಾಯಗೊಂಡಿತ್ತು.
ವಿದೇಶಿ ವಿನಿಮಯ ಮಾರುಕಟ್ಟೆ ತಜ್ಞರ ಪ್ರಕಾರ, ಅಮೆರಿಕ-ಇರಾನ್ ನಡುವಿನ ಮಾತುಕತೆಯಲ್ಲಿ ಸಕಾರಾತಕ ಬೆಳವಣಿಗೆ ಹಾಗೂ ಉದ್ದೇಶಿತ ದಾಳಿಗಳಿಗೆ ತಾತ್ಕಾಲಿಕ ವಿರಾಮ ಘೋಷಣೆಯಿಂದ ಜಾಗತಿಕ ಕಚ್ಚಾ ತೈಲದ ಬೆಲೆ ಇಳಿದಿದ್ದು, ಇದು ರೂಪಾಯಿಗೆ ಬಲ ನೀಡಿದೆ.
ಜಾಗತಿಕ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ಬೆಲೆ ಭವಿಷ್ಯದ ವಹಿವಾಟಿನಲ್ಲಿ ಶೇ.1.11ರಷ್ಟು ಇಳಿದು ಪ್ರತಿ ಬ್ಯಾರೆಲ್‌ಗೆ 78.48 ಅಮೆರಿಕನ್ ಡಾಲರ್ ಆಗಿತ್ತು. ದೇಶೀಯ ಷೇರುಪೇಟೆಯಲ್ಲೂ ಉತ್ತಮ ಆರಂಭ ಕಂಡುಬಂದಿದ್ದು, ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್‌್ಸ 375.01 ಅಂಕ ಏರಿಕೆ ಕಂಡು 78,803.96ಕ್ಕೆ ಹಾಗೂ ನಿಫ್ಟಿ 62.70 ಅಂಕ ಏರಿಕೆ ಕಂಡು 24,677.60 ಕ್ಕೆ ತಲುಪಿತು.
ಷೇರುಪೇಟೆ ಅಂಕಿಅಂಶಗಳ ಪ್ರಕಾರ, ಮಂಗಳವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ನಿವ್ವಳ 2,446.47 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.ಈ ವಾರದ ಆರ್‌ಬಿಐ ಹಣಕಾಸು ನೀತಿ ಘೋಷಣೆಯತ್ತ ಹೂಡಿಕೆದಾರರ ಗಮನ ನೆಟ್ಟಿತ್ತು.ಸೋಮವಾರ ಆರಂಭವಾದ ಮೂರು ದಿನಗಳ ಹಣಕಾಸು ನೀತಿ ಸಮಿತಿಯ ಸಭೆಯ ನಿರ್ಧಾರವನ್ನು ಪ್ರಕಟಿಸಿದೆ.
ಈ ಹಿಂದೆ ಆರ್‌ಬಿಐ ತನ್ನ ಪ್ರಮುಖ ರೆಪೊ ದರವನ್ನು ಶೇ.5.25ರಲ್ಲೇ ಯಥಾಸ್ಥಿತಿಯಲ್ಲಿ ಮುಂದುವರಿಸಿತ್ತು. ಈ ಬಾರಿಯೂ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾದದೆ ಶೇ.5.25ರಲ್ಲೇ ಮುಂದುವರೆಯಲಿದೆ ಎಂದು ತಿಳಿಸಿದೆ.
ಹೋರ್ಮುಜ್ ಜಲಸಂಧಿ ಕುರಿತ ಮಾತುಕತೆ ಯಶಸ್ವಿಯಾದರೆ ರೂಪಾಯಿ ಮಟ್ಟದಲ್ಲಿ ಸ್ಥಿರತೆ ಕಂಡುಕೊಳ್ಳಬಹುದು. ಒಪ್ಪಂದ ಕಾರ್ಯರೂಪಕ್ಕೆ ಬಂದರೆ ರೂಪಾಯಿ ಡಾಲರ್ ಎದುರು 30ರಿಂದ 40 ಪೈಸೆಯಷ್ಟು ಮತ್ತಷ್ಟು ಬಲಗೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
