ಬೆಂಗಳೂರು, ಆ.7- ಸಂಪುಟ ವಿಸ್ತರಣೆಯಿಂದ ಭುಗಿಲೆದ್ದಿದ್ದ ಅಸಮಾಧಾನ ಬಹುತೇಕ ತಣ್ಣಗಾಗಿದ್ದು, ಖಾತೆ ಹಂಚಿಕೆ ಸಂಬಂಧ ಪಟ್ಟಂತೆ ಇಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಲಿದ್ದಾರೆ. ಇಂದು ಸಂಜೆ ಅಥವಾ ನಾಳೆಯೊಳಗಾಗಿ ಖಾತೆಗಳ ಹಂಚಿಕೆ ಪೂರ್ಣಗೊಳ್ಳಲಿದೆ. ಈವರೆಗೂ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದವರು, ಈಗ ಪ್ರಭಾವಿ ಖಾತೆಗಳ ಮೇಲೆ ಕಣ್ಣಿಟ್ಟು ಒತ್ತಡ ತರುತ್ತಿದ್ದಾರೆ. ಸಮಾಜ ಕಲ್ಯಾಣ, ಆರ್ಥಿಕ, ಕೃಷಿ, ವಸತಿ, ಶಿಕ್ಷಣ, ಸಹಕಾರ, ಅಬಕಾರಿ, ಅರಣ್ಯ ಇಲಾಖೆಗಳ ಮೇಲೆ ಹಲವರ ಕಣ್ಣಿದೆ.
ಈಗಾಗಲೇ ಸಂಪುಟದಲ್ಲಿ ಹಿರಿಯರಾಗಿರುವ ಕೆ.ಎಚ್.ಮುನಿಯಪ್ಪ ತಮ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯನ್ನು ಬದಲಾವಣೆ ಮಾಡಿ ಸಮಾಜ ಕಲ್ಯಾಣ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಖಾತೆಯ ಮೇಲೆ ಪಿ.ಎಂ.ನರೇಂದ್ರ ಸ್ವಾಮಿ, ಶಿವರಾಜ್ ತಂಗಡಗಿ, ಬಸವಂತಪ್ಪ ಸೇರಿದಂತೆ ಹಲವರು ಕಣ್ಣಿಟ್ಟಿದ್ದಾರೆ. ರಾಜ್ಯ ಸಚಿವ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯ ಕೊರತೆ ತೀವ್ರವಾಗಿದೆ. ರೂಪಕಲಾ ಅವರಿಗೆ ಸಚಿವ ಸ್ಥಾನ ನೀಡಿದರೆ, ಮಹಿಳಾ ಕೋಟ, ಪರಿಶಿಷ್ಟ ಜಾತಿಯ ಎಡಗೈ ಕೋಟ ಹಾಗೂ ಕೋಲಾರ ಜಿಲ್ಲೆಯ ಪ್ರಾತಿನಿಧ್ಯ ಸೇರಿದಂತೆ ಹಲವು ರೀತಿಯಲ್ಲಿ ಅನುಕೂಲಗಳಾಗಲಿವೆ. ಈ ಕಾರಣಕ್ಕೆ ಸಚಿವ ಸ್ಥಾನವನ್ನು ಮಗಳಿಗೆ ಬಿಟ್ಟುಕೊಡಿ ಎಂದು ಕೆ.ಎಚ್. ಮುನಿಯಪ್ಪ ಅವರಿಗೆ ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದಾರೆ.
ಆದರೆ ಬಾಕಿಯಿರುವ ಅವಧಿಗೆ ತಾವೇ ಸಚಿವರಾಗಿರುವುದಾಗಿ ಮುನಿಯಪ್ಪ ಪಟ್ಟು ಹಿಡಿದಿದ್ದು, ಆಹಾರ ಮತ್ತು ನಾಗರಿಕ ಖಾತೆ ಪೂರೈಕೆ ಬದಲಾಗಿ ಸಮಾಜ ಕಲ್ಯಾಣ ನೀಡುವಂತೆ ಒತ್ತಾಯಿಸುತ್ತಿದ್ದಾರೆ.
ಈ ನಡುವೆ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಬಸವರಾಜ ರಾಯರೆಡ್ಡಿ ಹಣಕಾಸು ಇಲಾಖೆಗಾಗಿ ಬೇಡಿಕೆ ಸಲ್ಲಿಸಿದ್ದಾರೆ. ಬಜೆಟ್ ತಯಾರಿಕೆ ಮತ್ತು ಮಂಡನೆ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವರ್ಗಾವಣೆ ಅಧಿಕಾರವನ್ನು ಮುಖ್ಯಮಂತ್ರಿಗಳೇ ಉಳಿಸಿಕೊಳ್ಳಲಿ. ಆರ್ಥಿಕ ಸಂಪನೂಲ ಸಂಗ್ರಹ ಮತ್ತು ಬಳಕೆ ಜವಾಬ್ದಾರಿಗಳನಷ್ಟೇ ನಾನು ನಿಭಾಯಿಸುತ್ತೇನೆ. ಪ್ರಾದೇಶಿಕ ಅಸಮತೋಲನ ನಿರ್ವಹಣೆಗಾಗಿ ಪ್ರೊ.ಗೋವಿಂದರಾವ್ ಸಮಿತಿ ನೀಡಿರುವ ವರದಿಯನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವ ಮತ್ತು ಸಮತೋಲಿತ ಅಭಿವೃದ್ಧಿಗೆ ಆದ್ಯತೆ ನೀಡುವುದು ತಮ ಉದ್ದೇಶ. ಅದಕ್ಕೆ ಪೂರಕವಾದ ಜವಾಬ್ದಾರಿ ನೀಡಬೇಕೆಂದು ಮನವಿ ಮಾಡಿದ್ದಾರೆ.
ತಮ ಸುದೀರ್ಘ ರಾಜಕೀಯ ಅನುಭವ ಹಾಗೂ ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಆರ್ಥಿಕ ಸಲಹೆಗಾರರಾಗಿ ಕೆಲಸ ಮಾಡಿದ್ದ ಸಾಮರ್ಥ್ಯ ಆಧರಿಸಿ ಆರ್ಥಿಕ ಇಲಾಖೆ ನೀಡುವಂತೆ ಮನವಿ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಬಸವರಾಜ ರಾಯರೆಡ್ಡಿ ಅವರಿಗೆ ಕಾನೂನು, ಸಂಸದೀಯ ವ್ಯವಹಾರ ಹಾಗೂ ಯೋಜನಾ ಇಲಾಖೆಯ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.
ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಚಿವರಾಗಿದ್ದ ಚೆಲುವರಾಯ ಸ್ವಾಮಿ (ಕೃಷಿ), ಎಸ್.ಎಸ್.ಮಲ್ಲಿಕಾರ್ಜುನ (ತೋಟಗಾರಿಕೆ, ಗಣಿ ಮತ್ತು ಭೂವಿಜ್ಞಾನ), ಮಧುಬಂಗಾರಪ್ಪ (ಶಾಲಾ ಶಿಕ್ಷಣ ಮತ್ತು ಸಾಕ್ಷರತೆ), ಜಮೀರ್ ಅಹಮದ್ (ಅಲ್ಪಸಂಖ್ಯಾತರ ಅಭಿವೃದ್ಧಿ, ಹಜ್ ಮತ್ತು ವಕ್‌್ಫ), ಸಂತೋಷ್ ಲಾಡ್ (ಕಾರ್ಮಿಕ, ಮುಜರಾಯಿ), ಶಿವರಾಜ್ ತಂಗಡಗಿ (ಕನ್ನಡ ಮತ್ತು ಸಂಸ್ಕೃತಿ)ಇಲಾಖೆಗಳಿಗೆ ಸೀಮಿತವಾಗುವ ಸಾಧ್ಯತೆಗಳಿವೆ.
ಟಿ.ರಘುಮೂತಿಯವರಿಗೆ (ಪರಿಶಿಷ್ಟ ವರ್ಗಗಗಳ ಕಲ್ಯಾಣ), ನಾಗೇಂದ್ರ (ಮೀನುಗಾರಿಕೆ ಮತ್ತು ಬಂದರು), ಪುಟ್ಟರಂಗ ಶೆಟ್ಟಿ (ಪಶು ಸಂಗೋಪನೆ), ರಿಜ್ವಾನ್ ಅರ್ಷದ್ (ಉನ್ನತ ಶಿಕ್ಷಣ), ಎಚ್.ಸಿ.ಬಾಲಕೃಷ್ಣ (ಅರಣ್ಯ), ರುದ್ರಪ್ಪ ಲಮಾಣಿ (ಅಬಕಾರಿ), ಅಜಯ್ ಸಿಂಗ್ (ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ) ವಿಜಯಾನಂದ ಕಾಶಪ್ಪನವರ್ (ಕೃಷಿ ಮಾರುಕಟ್ಟೆ, ಜವಳಿ,), ಕೆ.ಎನ್.ಬಸವಂತಪ್ಪ (ಪೌರಾಡಳಿತ), ಲಕ್ಷ್ಮಣ ಸವದಿ (ಸಹಕಾರ, ಸಕ್ಕರೆ), ಕೆ.ಎಂ.ಶಿವಲಿಂಗೇಗೌಡ (ವಸತಿ), ಪಿ.ಎಂ.ನರೇಂದ್ರಸ್ವಾಮಿ ಅವರಿಗೆ (ಸಮಾಜ ಕಲ್ಯಾಣ) ಖಾತೆಗಳು ಹಂಚಿಕೆಯಾಗುವ ಸಾಧ್ಯತೆ ಇದೆ.
ಡಿ.ಕೆ.ಶಿವಕುಮಾರ್ ಅವರ ಜೊತೆ ಸಂಪುಟ ಸೇರಿದವರ ಪೈಕಿ ರಾಮಲಿಂಗಾರೆಡ್ಡಿ ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಅವರಿಗೆ ಜಲ ಸಂಪನೂಲದ ಜೊತೆಗೆ ಹೆಚ್ಚುವರಿ ಖಾತೆ ನೀಡುವ ಸಾಧ್ಯತೆ ಇದೆ.
ಉಪ ಮುಖ್ಯಮಂತ್ರಿ ಹುದ್ದೆಗಾಗಿ ಲಾಬಿ ಮಾಡಿದ್ದ ಸತೀಶ್ ಜಾರಕಿ ಹೊಳಿ ಮತ್ತು ಎಂ.ಬಿ.ಪಾಟೀಲ್ ಅವರಿಗೆ ಹೆಚ್ಚುವರಿ ಖಾತೆಗಳ ಭಾಗ್ಯ ದೊರೆಯಬಹುದು ಎಂದು ಹೇಳಲಾಗುತ್ತದೆ.
