ಬೆಂಗಳೂರು, ಆ.7- ಸಚಿವ ಸ್ಥಾನ ಸಿಗದ ಕಾರಣಕ್ಕೆ ಅಸಮಾಧಾನಗೊಂಡಿರುವ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರ ಜೊತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರೇ ಮಾತುಕತೆ ನಡೆಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ. ಇಂದು ಬೆಳಗ್ಗೆ ಕೃಷ್ಣಪ್ಪ ಅವರ ಮನೆಗೆ ಭೇಟಿ ನೀಡಿದ್ದ ಹರಿಪ್ರಸಾದ್ ಅವರು ಸುದೀರ್ಘ ಮಾತುಕತೆ ನಡೆಸಿದರು.
ಆದರೂ ಕೃಷ್ಣಪ್ಪ ಅವರು ಸಮಾಧಾನಗೊಂಡಿಲ್ಲ, ಸಚಿವ ಸ್ಥಾನದ ಹೊರತು ಬೇರೆ ಯಾವುದೇ ಸಮಾಧಾನದ ಮಾತುಗಳು ತಮಗೆ ಅಗತ್ಯ ಇಲ್ಲ ಎಂದು ಪಟ್ಟು ಹಿಡಿದಿರುವುದಾಗಿ ಮೂಲಗಳು
ತಿಳಿಸಿವೆ.
ಈ ಹಿನ್ನೆಲೆಯಲ್ಲಿ ರಾಹುಲ್ಗಾಂಧಿ ಅವರ ಮೂಲಕವೇ ಕರೆ ಮಾಡಿಸಿ, ಸಮಾಧಾನ ಪಡಿಸುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡಿದ್ದಾರೆ. ಕೃಷ್ಣಪ್ಪ ಅವರ ಭೇಟಿಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, ರಾಜಕೀಯ ಎಂಬುದು ಅವಕಾಶಗಳ ಆಟ. ಸಾಧ್ಯತೆಗಳಿರುವಾಗ ಏನಾದರೂ ಆಗಬಹುದು, ಏನಾಗುತ್ತದೆ ಎಂದು ಯಾರಿಗೂ ಗೊತ್ತಾಗುವುದಿಲ್ಲ ಎಂದಿದ್ದಾರೆ.
ಕೃಷ್ಣಪ್ಪ ಅವರು ಅಸಮಾಧಾನ ನಡುವೆಯೂ ಪಕ್ಷಕ್ಕೆ ಹಾನಿಯಾಗದಂತೆ ನಡೆದುಕೊಂಡಿದ್ದಾರೆ. ಹಿರಿಯರಿಗೆ ಅನ್ಯಾಯವಾದಾಗ ಬೇಸರವಾಗುವುದು, ಬೆಂಬಲಿಗರು ಸಿಟ್ಟುಗೊಳ್ಳುವುದು ಸಹಜ. ತಾವು ಮಾತನಾಡಿದ ವೇಳೆಯಲ್ಲಿ ಕೃಷ್ಣಪ್ಪ ಅವರು ತಾವು ಸಮಾಧಾನದಿಂದಿರುವುದಾಗಿ ಹೇಳಿದ್ದಾರೆ. ಮಿಕ್ಕ ವಿಚಾರಗಳನ್ನು ರಾಹುಲ್ ಗಾಂಧಿಯವರೇ ಮಾತುಕತೆ ನಡೆಸಿಲಿದ್ದಾರೆ ಎಂದು ಹರಿಪ್ರಸಾದ್ ತಿಳಿಸಿದರು.
MLA M. Krishnappa demands ministerial post
