ನವದೆಹಲಿ,ಮಾ.4-ಲಂಚ ಪಡೆದ ಪ್ರಕರಣಗಳಲ್ಲಿ ಸಂಸದರು ಹಾಗೂ ಶಾಸಕರಿಗೆ ಕಾನೂನು ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಮಹತ್ವದ ತೀರ್ಪು ನೀಡಿರುವ ಸುಪ್ರೀಂಕೋರ್ಟ್‍ನ ಸಪ್ತಪೀಠ, ಶಾಸಕರಿಗೆ ಕಾನೂನು ಕ್ರಮದಿಂದ ವಿನಾಯಿತಿ ನೀಡುವ ಹಿಂದಿನ ಆದೇಶವನ್ನು ರದ್ದುಗೊಳಿಸಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ, ಎಂ.ಎಂ.ಸುಂದಂರೇಶ್, ಪಿ.ಎಸ್.ನರಸಿಂಹ, ಜೆ.ಬಿ.ಪರ್ದಿವಾಲ, ಸಂಜಯ್‍ಕುಮಾರ್ ಮತ್ತು ಮನೋಜ್ ಮಿಶ್ರ ಅವರನ್ನೊಳಗೊಂಡ ಸಪ್ತ ಪೀಠ ನೀಡಿರುವ ತೀರ್ಪು ಜನಪ್ರತಿನಿಧಿಗಳಿಗೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ.
ಈ ಹಿಂದೆ 1998ರಲ್ಲಿ ಸುಪ್ರೀಂಕೋರ್ಟ್‍ನ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಸಪ್ತ ಸದಸ್ಯ ಪೀಠ ಬದಲಾವಣೆ ಮಾಡಿದೆ. ಈ ಹಿಂದೆ ಅಂದರೆ 1998ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ಅನ್ವಯ, ಸಂಸದರು ಹಾಗೂ ಶಾಸಕರು ಹಣ ಪಡೆದು ಭಾಷಣ ಮಾಡಿದ್ದರೆ ಅಥವಾ ಮತ ಹಾಕಿದ್ದರೆ ಅವರಿಗೆ ಲಂಚ ಪ್ರಕರಣದ ತನಿಖೆ ಅಡಿ ಕಾನೂನಿನ ರಕ್ಷಣೆ ಸಿಗುತ್ತಿತ್ತು. ಇದೀಗ ಸುಪ್ರೀಂ ಕೋರ್ಟ್ ನ್ಯಾಯ ಪೀಠ, ಶಾಸಕರು ಹಾಗೂ ಸಂಸದರಿಗೆ ಇದ್ದ ಆ ವಿನಾಯಿತಿಯನ್ನು ರದ್ದು ಮಾಡಿದೆ.
ಸಂಸದೀಯ ಸೌಲಭ್ಯಗಳ ಅಡಿ ಲಂಚ ಸ್ವೀಕಾರವನ್ನು ಸೇರ್ಪಡೆ ಮಾಡಲು ಸಾಧ್ಯವಿಲ್ಲ ಎಂದಿರುವ ನ್ಯಾಯಪೀಠ, 1998ರಲ್ಲಿ ನೀಡಿದ್ದ ತೀರ್ಪು ಸಂವಿಧಾನದ ಆರ್ಟಿಕಲ್ 105 ಹಾಗೂ 194ಕ್ಕೆ ವ್ಯತಿರಿಕ್ತ ನಿಲುವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಮಾಜಿ ಪ್ರಧಾನಿ ದಿವಂಗತ ನರಸಿಂಹರಾವ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್‍ನ ಐವರು ಪಂಚಪೀಠ ನೀಡಿದ್ದ ತೀರ್ಪಿನಲ್ಲಿ ಕೆಲವು ಲೋಪದೋಷಗಳಿವೆ ಎಂದಿರುವ ನ್ಯಾಯಪೀಠ, ಜನಪ್ರತಿನಿಧಿಗಳೆಂದರೆ ಕಾನೂನಿಗಿಂತ ಮೇಲಿನವರೇ ಎಂದು ಖಾರವಾಗಿ ಪ್ರಶ್ನೆ ಮಾಡಿತು.
ಸುಪ್ರೀಂಕೋರ್ಟ್‍ನ ಸಾಂವಿಧಾನಿಕ ಪೀಠದ ಎಲ್ಲ ಏಳು ನ್ಯಾಯಾೀಧಿಶರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿರುವ ನ್ಯಾಯಮೂರ್ತಿ ಚಂದ್ರಚೂಡ್, 1998ರಲ್ಲಿ ಪಿ.ವಿ.ನರಸಿಂಹರಾವ್ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಒಪ್ಪಲು ಸಾಧ್ಯವಿಲ್ಲ. ಏಕೆಂದರೆ ಲಂಚ ಪ್ರಕರಣದಲ್ಲಿ ಶಾಸಕರು ಮತ್ತು ಸಂಸದರಿಗೆ ಕಾನೂನಿನ ರಕ್ಷಣೆ ನೀಡಬೇಕೆನ್ನುವುದೇ ಅತ್ಯಂತ ಅಪಾಯಕಾರಿ ಅಂಶ ಎಂದು ಆತಂಕ ವ್ಯಕ್ತಪಡಿಸಿದರು.
ಇನ್ನು ಮುಂದೆ ಯಾವುದೇ ಶಾಸಕ ಅಥವಾ ಸಂಸದರು ಮತ ಹಾಕಲು ಪಡೆಯುವ ಲಂಚ ಇಲ್ಲವೇ ಶಾಸನಸಭೆಗಳಲ್ಲಿ ಭಾಷಣ ಮಾಡಲು ಹಣ ಪಡೆಯುವುದನ್ನು ಲಂಚ ಪ್ರಕರಣದಡಿ ಕಾನೂನಿನ ರಕ್ಷಣೆ ಪಡೆಯಲು ಸಾಧ್ಯವೇ ಇಲ್ಲ. ಲಂಚ ಪಡೆಯುವುದೇ ಮಹಾಪರಾಧ. ಅಂಥದ್ದರಲ್ಲಿ ಕಾನೂನಿನ ರಕ್ಷಣೆ ನೀಡುವುದು ಹೇಗೆ ಸಾಧ್ಯ? ಸಾರ್ವಜನಿಕ ಜೀವನದಲ್ಲಿರುವ ಶಾಸಕರು ಹಾಗೂ ಸಂಸದರು ಭ್ರಷ್ಟಾಚಾರ ಅಥವಾ ಲಂಚಗುಳಿತನದಲ್ಲಿ ತೊಡಗುವುದು ಸರಿಯಲ್ಲ. ಇದು ಈ ನೆಲದ ಕಾನೂನಿಗೆ ವಿರುದ್ಧ ಎಂದು ಅಭಿಪ್ರಾಯಪಟ್ಟರು.
ಸಂಸದೀಯ ಸೌಲಭ್ಯಗಳಡಿ ಲಂಚ ಸ್ವೀಕಾರವನ್ನು ಸೇರ್ಪಡೆ ಮಾಡಲು ಸಾಧ್ಯವಿಲ್ಲ ಎಂದಿರುವ ನ್ಯಾಯಪೀಠ, 1998ರಲ್ಲಿ ನೀಡಿದ್ದ ತೀರ್ಪು ಸಂವಿಧಾನದ ಆರ್ಟಿಕಲ್ 105 ಹಾಗೂ 194ಕ್ಕೆ ವ್ಯತಿರಿಕ್ತ ನಿಲುವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ. ಶಾಸಕಾಂಗ ಸದಸ್ಯರ ಭ್ರಷ್ಟಾಚಾರ ಮತ್ತು ಲಂಚವು ಸಾರ್ವಜನಿಕ ಜೀವನದಲ್ಲಿ ನಿಷ್ಠೆಯನ್ನು ಕಳೆದುಕೊಳ್ಳುತ್ತದೆ. ಶಾಸಕರಿಗೆ ವಿನಾಯಿತಿ ನೀಡುವ ಪಿವಿ ನರಸಿಂಹ ರಾವ್ ಪ್ರಕರಣದ ಬಹುಮತದ ತೀರ್ಪು ಗಂಭೀರ ಅಪಾಯವನ್ನು ಹೊಂದಿದೆ ಮತ್ತು ಹೀಗಾಗಿ ಅದನ್ನು ರದ್ದುಗೊಳಿಸಲಾಗಿದೆ.
ಲಂಚದ ಅಪರಾಧವು ಕಾನೂನುಬಾಹಿರ ತೃಪ್ತಿಯನ್ನು ತೆಗೆದುಕೊಳ್ಳುವುದರ ಮೇಲೆ ಹರಳುಗಟ್ಟುತ್ತದೆ ಮತ್ತು ಮತ ಅಥವಾ ಭಾಷಣವನ್ನು ನಂತರ ನೀಡಿದರೆ ಅದನ್ನು ಅವಲಂಬಿಸಿರುವುದಿಲ್ಲ ಮತ್ತು ಶಾಸಕರು ಲಂಚವನ್ನು ಸ್ವೀಕರಿಸಿದಾಗ ಅಪರಾಧವು ಪೂರ್ಣಗೊಳ್ಳುತ್ತದೆ. ಲಂಚದ ಕಾರಣದಿಂದಾಗಿ ಒಬ್ಬ ಸದಸ್ಯನು ಒಂದು ನಿರ್ದಿಷ್ಟ ರೀತಿಯಲ್ಲಿ ಮತ ಚಲಾಯಿಸಲು ಪ್ರೇರೇಪಿಸಲ್ಪಟ್ಟಿದ್ದಾನೆ ಮತ್ತು ಅದು ಭಾರತೀಯ ಪ್ರಜಾಪ್ರಭುತ್ವದ ಅಡಿಪಾಯವನ್ನು ನಾಶಪಡಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಲಂಚವು ಸಂಸದೀಯ ಸವಲತ್ತುಗಳಿಂದ ರಕ್ಷಿಸಲ್ಪಡುವುದಿಲ್ಲ ಮತ್ತು ಅವರ ಕಾರ್ಯಕಾರಿ ಪದಗಳೊಂದಿಗೆ ಓದಿದಾಗ ಯಾವುದಾದರೂ ಪದವು ಸದನದ ಮುಂದೆ ಯಾವುದೇ ವಿಷಯದಲ್ಲಿ ಅವರು ಭಾವಿಸಿದಂತೆ ಹೇಳಲು ಮತ್ತು ಮತ ಚಲಾಯಿಸಲು ಸದಸ್ಯರು ವಿನಾಯಿತಿ ಪಡೆಯಬಹುದು ಎಂದು ಸಲಹೆ ಮಾಡಿದರು.
ಸುಪ್ರೀಂ ತೀರ್ಪಿಗೆ ಮೋದಿ ಸ್ವಾಗತ
ನವದೆಹಲಿ,ಮಾ.4- ವಿಧಾನಸಭೆಯಲ್ಲಿ ಭಾಷಣ ಮಾಡಲು ಮತ್ತು ಮತ ಚಲಾಯಿಸಲು ಲಂಚ ಪಡೆದಿರುವ ಶಾಸಕರಿಗೆ ಪ್ರಾಸಿಕ್ಯೂಷನ್‍ನಿಂದ ವಿನಾಯಿತಿ ನೀಡುವ 1998ರ ತೀರ್ಪನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತ ಎಂದು ಬಣ್ಣಿಸಿದ್ದಾರೆ. ಗೌರವಾನ್ವಿತ ಸುಪ್ರೀಂಕೋರ್ಟ್ ನೀಡಿರುವ ಈ ಮಹತ್ವದ ತೀರ್ಪು ಶುದ್ಧ ರಾಜಕೀಯವನ್ನು ಖಚಿತಪಡಿಸುತ್ತದೆ ಮತ್ತು ವ್ಯವಸ್ಥೆಯಲ್ಲಿ ಜನರ ನಂಬಿಕೆಯನ್ನು ಆಳಗೊಳಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.