Homeರಾಜ್ಯನೈಸ್‌‍ ರಸ್ತೆ ಟೋಲ್‌ ಸ್ಥಗಿತಕ್ಕೆ ಎಚ್‌ಡಿಕೆ ಆಗ್ರಹ

ನೈಸ್‌‍ ರಸ್ತೆ ಟೋಲ್‌ ಸ್ಥಗಿತಕ್ಕೆ ಎಚ್‌ಡಿಕೆ ಆಗ್ರಹ

ಬೆಂಗಳೂರು,ಆ.8- ರಾಜ್ಯ ಹೈಕೋರ್ಟ್‌ನ ದ್ವಿಸದಸ್ಯ ನ್ಯಾಯ ಪೀಠ ಜು.29 ರಂದು ಬಿಎಂಐಸಿ ಯೋಜನೆ ಕುರಿತಂತೆ ನೀಡಿರುವ ತೀರ್ಪಿನ ಬಗ್ಗೆ ರಾಜ್ಯಸರ್ಕಾರ ಏಕೆ ಮೌನ ವಹಿಸಿದೆ ಎಂದು ಪ್ರಶ್ನಿಸಿದ ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು ನೈಸ್‌‍ ರಸ್ತೆಯ ಟೋಲ್‌ ಸಂಗ್ರಹವನ್ನು ಸ್ಥಗಿತಗೊಳಿಸಲು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಂಐಸಿ ಕುರಿತಂತೆ ಹೈಕೋರ್ಟ್‌ನ ಆದೇಶವನ್ನು ಅನುಷ್ಠಾನಗೊಳಿಸಲು ಒತ್ತಾಯಿಸಿ ರಾಜ್ಯಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಒಂದು ವಾರ ಹತ್ತು ದಿನಗಳ ಗಡುವು ನೀಡಲಾಗುವುದು ಎಂದು ಹೇಳಿದರು.

ಸರ್ಕಾರದ ಪೂರ್ವಾನುಮತಿ ಪಡೆಯದೆ ನೈಸ್‌‍ ಸಂಸ್ಥೆ ಟೋಲ್‌ ಪರಿಷ್ಕರಣೆ ಮಾಡಿದೆ. ಹೀಗಾಗಿ ನೈಸ್‌‍ ರಸ್ತೆಯಲ್ಲಿ ಟೋಲ್‌ ಸಂಗ್ರಹಿಸುವುದನ್ನು ವಿರೋಧಿಸಿ ರಸ್ತೆ ಬಳಕೆದಾರರು, ಬೆಂಗಳೂರಿನ ನಾಗರಿಕರು, ನಾಡಿನ ಜನರು, ರೈತರು, ಯುವಕರು ಹೋರಾಟ ಮಾಡಬೇಕು ಎಂದು ಕರೆ ನೀಡಿದರು. ಲಂಚ ಕೇಳಿದರೆ ಫೋನ್‌ ಮಾಡಿ ಎಂದು ಹೇಳುವ ಮುಖ್ಯಮಂತ್ರಿಯವರು ನ್ಯಾಯಾಲಯವೇ, ಇದೊಂದು ದೇಶದ ದೊಡ್ಡ ಹಗರಣ ಎಂದು ಹೇಳಿದೆ. ಸದನ ಸಮಿತಿಯು ಇದರ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ವರದಿ ನೀಡಿದೆ. ಹೀಗಿದ್ದರೂ ಮೌನವೇಕೆ? ಎಂದು ಪ್ರಶ್ನಿಸಿದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಬಿಎಂಐಸಿ ಯೋಜನೆ ಕುರಿತ ಮೂಲ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅನಂತರದ ಸರ್ಕಾರದಲ್ಲಿ ಬದಲಾವಣೆಯಾಗಿದೆ. ಮೂಲ ಒಪ್ಪಂದ ಉಲ್ಲಂಘಿಸಿ ರೈತರಿಂದ 20 ಸಾವಿರ ಎಕರೆಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ರೈತರಿಗೆ ಭೂ ಪರಿಹಾರವನ್ನು ನೀಡಿರುವ ಕೆಐಡಿಬಿ ಪರಿಹಾರ ನೀಡಲು ಕಾಲಮಿತಿ ಇಲ್ಲ ಎಂದು ಹೇಳುತ್ತದೆ. ಹೈಕೋರ್ಟ್‌ 150 ಅರ್ಜಿಗಳಿಗೆ ಸಂಬಂಧಿಸಿದಂತೆ ತೀರ್ಪು ನೀಡಿದೆ ಎಂದರು.

ಮೂಲ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಲಾಗಿದೆ. ಕಾನೂನು ಬಾಹಿರವಾಗಿ ಟೋಲ್‌ ಸಂಗ್ರಹಿಸಲಾಗುತ್ತಿದೆ. ಆದರೂ ಸರ್ಕಾರ ಮೌನಕ್ಕೆ ಶರಣಾಗಿದೆ. 2017 ರಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಸದನ ಸಮಿತಿ ಕೂಡಾ ವರದಿ ಕೊಟ್ಟಿದ್ದು, ಯೋಜನೆಯನ್ನು ವಾಪಸ್‌‍ ಪಡೆದು ಸಿಬಿಐಗೆ ವಹಿಸಬೇಕು ಎಂದು ಹೇಳಿದೆ. ಅದರ ಬಗ್ಗೆಯೂ ಸರ್ಕಾರ ತೀರ್ಮಾನ ಕೈಗೊಂಡಿಲ್ಲ. 20 ವರ್ಷವಾದರೂ ರೈತರಿಗೆ ಭೂಮಿ ನೀಡಿಲ್ಲ. ಜನರನ್ನು ರಕ್ಷಿಸಬೇಕಾದ ಸರ್ಕಾರವೇ ಏಕೆ ಮೌನ ವಹಿಸಿದೆ ಎಂಬುದನ್ನು ನ್ಯಾಯಾಲಯ ಪ್ರಶ್ನಿಸಿದೆ. ಕೆರೆಕಟ್ಟೆಯನ್ನು ಕೂಡಾ ನೈಸ್‌‍ ಸಂಸ್ಥೆಗೆ ಹಸ್ತಾಂತರಿಸಲಾಗಿದೆ ಎಂದು ಆರೋಪಿಸಿದರು.

ರೈತರನ್ನು ಒಕ್ಕಲೆಬ್ಬಿಸಿ ಕಣ್ಣೀರು ಸುರಿಸುವಂತೆ ಮಾಡಿದೆ. 2002 ರಿಂದಲೂ ದೇವೇಗೌಡರು ರೈತರ ಪರವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಹೊಸ್ಕೆರೆ ಹಳ್ಳಿ ಭಾಗದಲ್ಲಿ ಪೊಲೀಸರನ್ನು ಬಳಸಿ ಮನೆಗಳನ್ನು ನೆಲಸಮ ಮಾಡಿ ಒಕ್ಕಲೆಬ್ಬಿಸಲಾಯಿತು. ನೈಸ್‌‍ ಸಂಸ್ಥೆಯಿಂದ ಎನ್‌ಒಸಿ ಪಡೆದು ಕಟ್ಟಡ ಕಟ್ಟಲಾಗುತ್ತಿರುವುದರ ಬಗ್ಗೆ ಮುಖ್ಯಮಂತ್ರಿ ಉತ್ತರಿಸಬೇಕು. 4 ಸಾವಿರ ಕುಟುಂಬಗಳಿಗೆ ಪರಿಹಾರ ನಿವೇಶನ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಡದಿ ಟೌನ್‌ಶಿಪ್‌ ವಿಚಾರದಲ್ಲಿ ಡಿ ನೋಟಿಫಿಕೇಷನ್‌ ಮಾಡಿದರೆ ಜೈಲಿಗೆ ಹೋಗಬೇಕಾಗುತ್ತದೆ ಎನ್ನುವ ಮುಖ್ಯಮಂತ್ರಿ ಇಲ್ಲಿ ಮಾಡುವುದಾದರೂ ಏನು?, ಬಿಎಂಐಸಿಪಿಯ ಅಧ್ಯಕ್ಷರಾಗಿದ್ದಾಗಲೇ ಈ ಎಲ್ಲವೂ ನಡೆದಿದೆ ಎಂದು ಸಿಎಂ ವಿರುದ್ಧ ಆರೋಪಿಸಿದರು. 111 ಕಿ.ಮೀ. ರಸ್ತೆಯಲ್ಲಿ ಕೇವಲ 5 ಕಿ.ಮೀ. ರಸ್ತೆ ಮಾಡಲಾಗಿದೆ ಎಂಬುದನ್ನು ಸರ್ಕಾರ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದೆ. ಪಾದಚಾರಿ ಮಾರ್ಗದಲ್ಲಿ ಬಡ ವರ್ತಕರನ್ನು ಒಕ್ಕಲೆಬ್ಬಿಸುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಾಭೈರೇಗೌಡ ಅವರೇ, ಯಾವಾಗ ನೈಸ್‌‍ ಅವ್ಯವಹಾರವನ್ನು ಕ್ಲೀನ್‌ ಮಾಡುತ್ತೀರಿ? ಕಾನೂನು ಬಾಹಿರ ಟೋಲ್‌ ನಿಲ್ಲಿಸುತ್ತೀರಿ? ಎಂದು ಪ್ರಶ್ನಿಸಿದರು.

ರಾಜ್ಯದ ಜನತೆ ನಿಮಗೆ ಅಧಿಕಾರ ನೀಡಿರುವುದು ಈ ರೀತಿ ರೈತರನ್ನು ಒಕ್ಕಲೆಬ್ಬಿಸಿ ದುಡ್ಡು ಹೊಡೆಯಲು ಅಲ್ಲ ಎಂದ ಅವರು, ನೈಸ್‌‍ ಕಂಪನಿ ಪರವಾಗಿ ಏಕೆ ನ್ಯಾಯಾಲಯದಲ್ಲಿ ಮೇಲನವಿ ಸಲ್ಲಿಸಿದ್ದೀರಿ ? ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲರನ್ನು ಪ್ರಶ್ನಿಸಿದರು. ಲಕ್ಷಾಂತರ ರೂ. ಬೆಲೆ ಬಾಳುವ ಭೂಮಿಯನ್ನು ಚಿನ್ನದ ತಟ್ಟೆಯಲ್ಲಿಟ್ಟು ಸರ್ಕಾರಕ್ಕೆ ನೀಡಿರುವುದನ್ನು ವಾಪಸ್‌‍ ಪಡೆಯಬೇಕು. ಆ ರೀತಿ ಮಾಡಿದರೆ ಸರ್ಕಾರ ಸಾಲ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.

ಬಿಡದಿ ಟೌನ್‌ಶಿಪ್‌ ಹಾಗೂ ಬಿಎಂಐಸಿ ಯೋಜನೆಯನ್ನು ಅಧಿವೇಶನದಲ್ಲಿ ಬಿಜೆಪಿ, ಜೆಡಿಎಸ್‌‍ ಪ್ರಸ್ತಾಪಿಸಲಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ಬಾಬು, ಸಂಸದ ಮಲ್ಲೇಶ್‌ಬಾಬು, ಮಾಜಿ ಸಚಿವ ವೆಂಕಟರಾವ್‌ ನಾಡಗೌಡ, ವಿಧಾನಪರಿಷತ್‌ ಸದಸ್ಯ ಬೋಜೇಗೌಡ, ಮಾಜಿ ಶಾಸಕ ಅನ್ನದಾನಿ ಮೊದಲಾದ ಮುಖಂಡರು ಉಪಸ್ಥಿತರಿದ್ದರು.

RELATED ARTICLES
spot_img

Latest News