ಬೆಂಗಳೂರು, ಸೆ.22- ಕಸ್ತೂರಿರಂಗನ್ ವರದಿಯ ಕುರಿತು ಎರಡು ದಿನ ಚರ್ಚೆ ಮಾಡಿದರೆ, ಬರಬಾಧಿತ ತಾಲ್ಲೂಕುಗಳ ಸಮಸ್ಯೆಗಳ ಬಗ್ಗೆ ಯಾವಾಗ ಮಾತನಾಡುವುದು ಎಂದು ಹಿರಿಯ ಶಾಸಕ ಜಿ.ಟಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು. ವಿಧಾನಸಭೆಯ ಕಲಾಪದ ಆರಂಭದಲ್ಲೇ ಬಿಜೆಪಿಯ ಶಾಸಕ ವಿ. ಸುನೀಲ್ ಕುಮಾರ್ ಕಸ್ತೂರಿರಂಗನ್ ವರದಿಯಿಂದಾಗುತ್ತಿರುವ ಪರಿಣಾಮಗಳ ಕುರಿತು ಮುಂದುವರಿದ ಚರ್ಚೆಯಲ್ಲಿ ಭಾಗವಹಿಸಲು ಎದ್ದು ನಿಂತರು.
ಈ ಸಂದರ್ಭದಲ್ಲಿ ಸಿಡಿಮಿಡಿಗೊಂಡ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ, “ರಾಜ್ಯದಾದ್ಯಂತ ಭೀಕರ ಬರ ಪರಿಸ್ಥಿತಿ ಇದೆ. ಕುಡಿಯುವ ನೀರಿನ ಸಮಸ್ಯೆಗಳು ಹೆಚ್ಚಾಗಿವೆ. ಸರ್ಕಾರದ ಪುನರ್ವಸತಿ ಕಾರ್ಯಗಳ ಬಗ್ಗೆ ವ್ಯಾಪಕ ಚರ್ಚೆ ಆಗಬೇಕು. ಕಸ್ತೂರಿರಂಗನ್ ವರದಿ ಪಶ್ಚಿಮ ಘಟ್ಟಕ್ಕೆ ಸೀಮಿತ. ಅದರ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರೆ ಜನರ ಸಮಸ್ಯೆಗಳ ಬಗ್ಗೆ ಯಾವಾಗ ಮಾತನಾಡುವುದು?” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದು ಸುನೀಲ್ ಕುಮಾರ್ ಅವರನ್ನು ಗಲಿಬಿಲಿಗೀಡು ಮಾಡಿತು. ಸದನದ ಕಲಾಪವನ್ನು ಇನ್ನೊಂದು ದಿನ ವಿಸ್ತರಿಸಲು ನಿರ್ಧರಿಸಲಾಗಿದೆ. ಚರ್ಚೆಗೆ ಸಾಕಷ್ಟು ಸಮಯ ಸಿಗುತ್ತದೆ ಎಂದು ಜಿ.ಟಿ. ದೇವೇಗೌಡರನ್ನು ಸಮಾಧಾನಪಡಿಸಲು ಸುನೀಲ್ ಕುಮಾರ್ ಯತ್ನಿಸಿದರು. ಚರ್ಚೆಗೆ ನಿರ್ದಿಷ್ಟ ಗಡುವು ನಿಗದಿಪಡಿಸುವಂತೆ ದೇವೇಗೌಡರು ಆಗ್ರಹಿಸಿದರು.
ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಜಿ.ಎಸ್. ಪಾಟೀಲ್, “ನಿನ್ನೆ ಚರ್ಚೆ ಆರಂಭವಾಗಿದೆ. ವಿರೋಧ ಪಕ್ಷದವರು ಮೂರು ಗಂಟೆ ಒಂದು ನಿಮಿಷ, ಕಾಂಗ್ರೆಸ್‌ನ ಸದಸ್ಯರು 2 ಗಂಟೆ 7 ನಿಮಿಷ ಮಾತನಾಡಿದ್ದಾರೆ. ಇನ್ನೂ ನಾಲ್ವರಿಗೆ ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ನೀಡುತ್ತೇನೆ. 12.30ಕ್ಕೆ ಚರ್ಚೆ ಮುಕ್ತಾಯಗೊಳ್ಳುತ್ತದೆ. ನಂತರ ಮುಖ್ಯಮಂತ್ರಿ ಅವರು ಉತ್ತರ ನೀಡುತ್ತಾರೆ” ಎಂದು ತಿಳಿಸಿದರು. ಇದರಿಂದ ಸಮಾಧಾನಗೊಂಡ ಜಿ.ಟಿ. ದೇವೇಗೌಡರು ಚರ್ಚೆಗೆ ಅನುವು ಮಾಡಿಕೊಟ್ಟರು.
