ಬೆಂಗಳೂರು, ಸೆ.22- ತುರ್ತು ಆರೋಗ್ಯ ಸೇವೆ ಒದಗಿಸುವ ಆಂಬ್ಯುಲೆನ್ಸ್ ಸೇವೆಗಳು ನಾಳೆಯಿಂದ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 108 ಆಂಬ್ಯುಲೆನ್ಸ್ ನೌಕರರು ಸರ್ಕಾರಕ್ಕೆ ನೀಡಿದ್ದ 15 ದಿನಗಳ ಗಡುವು ಇಂದು ರಾತ್ರಿ 8 ಗಂಟೆಗೆ ಮುಕ್ತಾಯಗೊಳ್ಳಲಿದ್ದು, ಅಷ್ಟರೊಳಗೆ ಸಮಸ್ಯೆ ಬಗೆಹರಿಯದಿದ್ದರೆ ಸೇವೆ ಸ್ಥಗಿತಗೊಳಿಸಿ ಸಾಮೂಹಿಕ ರಾಜೀನಾಮೆ ನೀಡುವ ಎಚ್ಚರಿಕೆಯನ್ನು ನೌಕರರು ನೀಡಿದ್ದಾರೆ.
ಆರೋಗ್ಯ ಇಲಾಖೆ ಹಾಗೂ 108 ಆಂಬ್ಯುಲೆನ್ಸ್ ಸೇವೆ ನಿರ್ವಹಿಸುತ್ತಿರುವ ವ್ಯವಸ್ಥೆಯ ವಿರುದ್ಧ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದು, ಹಲವು ವರ್ಷಗಳಿಂದ ತಮ್ಮ ಬೇಡಿಕೆಗಳು ಬಾಕಿ ಉಳಿದಿವೆ ಎಂದು ಆರೋಪಿಸಿದ್ದಾರೆ.ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಿರುವುದಾಗಿ ಸಂಘದ ಮುಖಂಡರು ತಿಳಿಸಿದ್ದಾರೆ.
15 ದಿನಗಳ ಗಡುವು ಮುಕ್ತಾಯವಾಗುವ ಮುನ್ನ ಸರ್ಕಾರ ಮಧ್ಯಪ್ರವೇಶಿಸಿ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದರೆ ರಾತ್ರಿ 8 ಗಂಟೆಯ ಬಳಿಕ ರಾಜ್ಯಾದ್ಯಂತ 108 ಸೇವೆಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ನೌಕರರು ಎಚ್ಚರಿಸಿದ್ದಾರೆ.
ಒಂದೊಮ್ಮೆ ಸೇವೆ ಸ್ಥಗಿತಗೊಂಡರೆ ಅಪಘಾತ ಸಂತ್ರಸ್ತರು, ಗರ್ಭಿಣಿಯರು, ತುರ್ತು ಚಿಕಿತ್ಸೆ ಅಗತ್ಯವಿರುವವರು ಹಾಗೂ ಗ್ರಾಮೀಣ ಪ್ರದೇಶದ ರೋಗಿಗಳಿಗೆ ತಕ್ಷಣದ ಸಾರಿಗೆ ವ್ಯವಸ್ಥೆ ಸಿಗುವುದರಲ್ಲಿ ಸಮಸ್ಯೆ ಎದುರಾಗುವ ಆತಂಕ ಸೃಷ್ಟಿಯಾಗಲಿದೆ.
ಏನೇನು ಬೇಡಿಕೆ?
108 ಆಂಬ್ಯುಲೆನ್ಸ್ ನೌಕರರ ಸಂಘ ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ. ಪ್ರತಿ ವರ್ಷ ವಾರ್ಷಿಕ ವೇತನ ಹೆಚ್ಚಳದ ಜತೆಗೆ ವೇತನ ಪರಿಷ್ಕರಣೆ ಮಾಡಬೇಕು. ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಅಗತ್ಯವಿರುವಷ್ಟು ವಾಹನಗಳ ವ್ಯವಸ್ಥೆ ಮಾಡಬೇಕು. ವಲಯವಾರು ವೇತನ ಪದ್ಧತಿ ರದ್ದುಪಡಿಸಿ ರಾಜ್ಯಾದ್ಯಂತ ಏಕರೂಪ ವೇತನ ಜಾರಿಗೊಳಿಸಬೇಕು. ಜೇಷ್ಠತೆಯ ಆಧಾರದ ಮೇಲೆ ಸಿಬ್ಬಂದಿಗೆ ವೇತನ ನಿಗದಿಪಡಿಸಬೇಕು.
ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಯ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು. ಸಿಬ್ಬಂದಿಗೆ ಸೂಕ್ತ ವಿಶ್ರಾಂತಿ ಕೊಠಡಿಗಳ ವ್ಯವಸ್ಥೆ ಮಾಡಬೇಕು. ಶಿಫ್ಟ್ ಸಮಯವನ್ನು ಪರಿಷ್ಕರಿಸಿ ಸಿಬ್ಬಂದಿಗೆ ಅನುಕೂಲವಾಗುವ ರೀತಿಯಲ್ಲಿ ಕರ್ತವ್ಯ ವ್ಯವಸ್ಥೆ ಮಾಡಬೇಕು.
ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತಾಯ
ಈ ಕುರಿತು ಮಾತನಾಡಿರುವ 108 ಆಂಬ್ಯುಲೆನ್ಸ್ ನೌಕರರ ಸಂಘದ ಅಧ್ಯಕ್ಷ ಪರಮಶಿವಯ್ಯ, ಹಲವು ವರ್ಷಗಳಿಂದ ಬಾಕಿ ಉಳಿದಿರುವ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೆ, ಇದುವರೆಗೆ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಅನಿವಾರ್ಯ ಪರಿಸ್ಥಿತಿಯಲ್ಲಿ ಸೇವೆ ಸ್ಥಗಿತಗೊಳಿಸಿ ಸಾಮೂಹಿಕ ರಾಜೀನಾಮೆ ನೀಡುವ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ರಾಜ್ಯದ ತುರ್ತು ಆರೋಗ್ಯ ಸೇವೆಯ ಪ್ರಮುಖ ಕೊಂಡಿಯಾಗಿರುವ 108 ಆಂಬ್ಯುಲೆನ್ಸ್ ಸೇವೆ ಸ್ಥಗಿತಗೊಂಡರೆ ಸಾರ್ವಜನಿಕರಿಗೆ ನೇರ ಹೊಡೆತ ಬೀಳುವ ಸಾಧ್ಯತೆ ಇದೆ. ಹೀಗಾಗಿ ಆರೋಗ್ಯ ಇಲಾಖೆ ಹಾಗೂ ಸಂಬಂಧಪಟ್ಟ ಸಂಸ್ಥೆ ತಕ್ಷಣ ನೌಕರರೊಂದಿಗೆ ಮಾತುಕತೆ ನಡೆಸಿ ಬಿಕ್ಕಟ್ಟು ಬಗೆಹರಿಸುತ್ತದೆಯೇ ಎಂಬುದು ಇದೀಗ ಕುತೂಹಲ ಮೂಡಿಸಿದೆ.
