Homeರಾಜ್ಯವಿಶೇಷ ಅಧಿವೇಶನ ಒಂದು ದಿನ ವಿಸ್ತರಿಸುವ ಸಾಧ್ಯತೆ

ವಿಶೇಷ ಅಧಿವೇಶನ ಒಂದು ದಿನ ವಿಸ್ತರಿಸುವ ಸಾಧ್ಯತೆ

ಬೆಂಗಳೂರು, ಸೆ.22- ಬರ ಹಾಗೂ ಕಸ್ತೂರಿರಂಗನ್‌ ವರದಿಯ ಕುರಿತು ಚರ್ಚೆ ನಡೆಸಲಾಗುತ್ತಿರುವ ವಿಶೇಷ ಅಧಿವೇಶನವನ್ನು ಮತ್ತೆ ಒಂದು ದಿನ ವಿಸ್ತರಿಸುವ ಸಾಧ್ಯತೆ ಇದೆ.
ನಿನ್ನೆಯಿಂದ ಆರಂಭವಾಗಿರುವ ಅಧಿವೇಶನದಲ್ಲಿ ಇಡೀ ದಿನ ಕಸ್ತೂರಿರಂಗನ್‌ ವರದಿಯ ಕುರಿತು ಚರ್ಚೆಗಳಾಗಿವೆ. ಇಂದು ಮಧ್ಯಾಹ್ನದವರೆಗೂ ಚರ್ಚೆಗಳು ಮುಂದುವರೆದಿವೆ. ಬರ ಪರಿಸ್ಥಿತಿಯ ಕುರಿತು ಪ್ರಮುಖವಾಗಿ ಚರ್ಚಿಸಲು ಕರೆಯಲಾಗಿದ್ದ ಅಧಿವೇಶನದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಸಮಯವನ್ನು ಕಸ್ತೂರಿರಂಗನ್‌ ವರದಿ ಕಬಳಿಸಿದೆ.

ಸಭಾಧ್ಯಕ್ಷ ಜಿ.ಎಸ್‌‍. ಪಾಟೀಲ್‌ ಅವರು ನೀಡಿರುವ ಮಾಹಿತಿಯ ಪ್ರಕಾರ ಬಿಜೆಪಿ ಮತ್ತು ಜೆಡಿಎಸ್‌‍ನ ವಿರೋಧ ಪಕ್ಷಗಳ ಸದಸ್ಯರು 3 ಗಂಟೆ ಆಡಳಿತ ಪಕ್ಷ ಕಾಂಗ್ರೆಸ್ಸಿನ ಸದಸ್ಯರು 2 ಗಂಟೆ ಚರ್ಚೆ ಮಾಡಿದ್ದಾರೆ. ಇಂದು ಮಧ್ಯಾಹ್ನದ ವರೆಗೂ ಚರ್ಚೆ ಮುಂದುವರೆದು ಮುಖ್ಯಮಂತ್ರಿಯವರು ಉತ್ತರ ನೀಡಲಿದ್ದಾರೆ.

ಒಂದೂವರೆ ದಿನದಲ್ಲಿ ಬಹುತೇಕ ಸಮಯ ಪೂರ್ಣಗೊಂಡಿತ್ತು. ರಾಜ್ಯ ಸರ್ಕಾರ ಮೊದಲ ಹಂತದಲ್ಲಿ 101 ಎರಡನೇ ಹಂತದಲ್ಲಿ 23 ತಾಲ್ಲೂಕುಗಳನ್ನು ಸೇರಿಸಿ ಒಟ್ಟು 154 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ.

ಇನ್ನೂ ಐವತ್ತು ತಾಲ್ಲೂಕುಗಳು ಬರಪೀಡಿತ ಗುಣಲಕ್ಷಣಗಳನ್ನು ಹೊಂದಿವೆ, ಇವುಗಳ ಘೋಷಣೆ ಹಾಗೂ ಪುನರ್ವಸತಿಯ ಬಗ್ಗೆ ಸುದೀರ್ಘ ಚರ್ಚೆಯಾಗಬೇಕಿದೆ. ಎಲ್ಲಾ ಶಾಸಕರು ತಮ ಕ್ಷೇತ್ರ ಬರಪೀಡಿತ ತಾಲ್ಲೂಕಿನ ವ್ಯಾಪ್ತಿಗೆ ಒಳಪಡಬೇಕು ಎಂಬ ಒತ್ತಡ ಹೇರುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ವ್ಯಾಪಕ ಚರ್ಚೆಯಾಗುವ ಸಾಧ್ಯತೆ ಇದೆ. ಬಾಕಿ ಇರುವ ಒಂದೂವರೆ ದಿನ ಸಮಯ ಸಾಲುವುದಿಲ್ಲ ಎಂಬ ಕಾರಣಕ್ಕಾಗಿ ವಿಧಾನಮಂಡಳದ ಅಧಿವೇಶನವನ್ನು ಗುರುವಾರದವರೆಗೂ ವಿಸ್ತರಿಸುವ ಚರ್ಚೆಗಳಾಗಿವೆ.

ವಿರೋಧ ಪಕ್ಷಗಳು ಒಂದು ವಾರದ ಕಾಲ ಕಲಾಪವನ್ನು ವಿಸ್ತರಿಸುವಂತೆ ಒತ್ತಾಯಿಸಿವೆ. ಆದರೆ ಕಸ್ತೂರಿರಂಗನ ವರದಿ ಚರ್ಚೆಯ ಬಳಿಕ ಬರ ಪೀಡಿತ ಪ್ರದೇಶಗಳ ಸಮಸ್ಯೆ ಹಾಗೂ ಪುನರ್‌ ವಸತಿಗಷ್ಟೇ ಚರ್ಚೆಗಳು ಸೀಮಿತವಾದರೆ ಕಲಾಪದ ಅವಧಿ ವಿಸ್ತರಣೆಯಾಗಲಿದೆ.

ಅದರ ಬದಲು ವಿರೋಧ ಪಕ್ಷಗಳು ಬಿಡದಿ ಉಪನಗರ ಯೋಜನೆ, ನೈಸ್‌‍ ವಿವಾದಗಳ ಚರ್ಚೆ ಹಾಗೂ ಕೆಪಿಎಸ್‌‍ಸಿ ಹಗರಣಗಳನ್ನು ಕೈಗೆತ್ತಿಕೊಳ್ಳಲು ಮುಂದಾದರೆ ಕಲಾಪ ನಿಗದಿತ ಸಮಯಕ್ಕೆ ಮುಕ್ತಾಯವಾಗಲಿದೆ ಎಂದು ಹೇಳಲಾಗುತ್ತಿದೆ.

RELATED ARTICLES
spot_img

Latest News