ಬೊಗೊಟಾ,ಆ.11- ಪಶ್ಚಿಮ ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ ದೇಶದ ಬಡ ಇಲಾಖೆಯಾದ ಚೋಕೊ ಮತ್ತು ಪ್ರಸಿದ್ಧ ಕಾಫಿ ಆಕ್ಸಿಸ್ ಪ್ರದೇಶಗಳು ಅತ್ಯಂತ ಹಾನಿಗೊಳಗಾಗಿ ಈವರೆಗೆ ಕನಿಷ್ಠ 132 ಜನರು ಸಾವನ್ನಪ್ಪಿದ್ದಾರೆ ಮತ್ತು 570 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಕೊಲಂಬಿಯಾದ ಭೂವೈಜ್ಞಾನಿಕ ಸೇವೆಯು 21ನೇ ಶತಮಾನದಲ್ಲಿ ದೇಶದಲ್ಲಿ ದಾಖಲಾದ ಅತ್ಯಂತ ಪ್ರಬಲ ಭೂಕಂಪ ಇದಾಗಿದೆ ಎಂದು ಹೇಳಿದೆ. ಜನಸಂಖ್ಯೆಯ ಮೂರನೇ ಎರಡರಷ್ಟು ಜನರು ಬಡತನದಲ್ಲಿ ವಾಸಿಸುವ ಚೋಕೊದ ಸ್ಯಾನ್ ಜೋಸ್ ಡೆಲ್ ಪಾಲರ್ ಬಳಿ ಭೂಕಂಪದ ಕೇಂದ್ರಬಿಂದು ದಾಖಲಾಗಿದೆ. ಈ ಪ್ರದೇಶದ ಸೀಮಿತ ರಸ್ತೆ ಸಂಪರ್ಕ ಮತ್ತು ದೂರದ ಸಮುದಾಯಗಳ ಕಾರಣದಿಂದ ತುರ್ತು ರಕ್ಷಣಾ ತಂಡಗಳು ಸಂತ್ರಸ್ತರ ಬಳಿ ತೆರಳಲು ಹರಸಾಹಸಪಡುತ್ತಿವೆ. ಸಂವಹನ ವ್ಯವಸ್ಥೆ ಅಸ್ತವ್ಯಸ್ತಗೊಂಡಿರುವುದು ರಕ್ಷಣಾ ಕಾರ್ಯಾಚರಣೆಗೆ ಮತ್ತಷ್ಟು ತೊಡಕಾಗಿದೆ.
ಕೊಲಂಬಿಯಾದ ಕಾಫಿ ಬೆಳೆಯುವ ಪ್ರದೇಶದ ಹೃದಯಭಾಗವಾದ ರಿಸರಾಲ್ಡಾ ಅತ್ಯಂತ ಹೆಚ್ಚು ಹಾನಿಗೊಳಗಾಗಿದೆ. ಇಲ್ಲಿನ ಪೆರೇರಾದಲ್ಲಿ ಅತಿ ಹೆಚ್ಚು ಅಂದರೆ 60 ಸಾವುನೋವುಗಳು ಸಂಭವಿಸಿವೆ. ಡೋಸ್ಕ್ವೆಬ್ರಾಡಾಸ್ ಕೂಡ ವ್ಯಾಪಕ ನಾಶವನ್ನು ಅನುಭವಿಸಿದೆ.
ಒಟ್ಟು 1,577 ವಸತಿ ಕಟ್ಟಡಗಳು ಹಾನಿಗೊಳಗಾಗಿದ್ದು, 37 ಸಂಪೂರ್ಣವಾಗಿ ಧ್ವಂಸಗೊಂಡಿವೆ. 60ಕ್ಕೂ ಹೆಚ್ಚು ಕಟ್ಟಡಗಳು ಕುಸಿದಿದ್ದು, 18 ಆರೋಗ್ಯ ಕೇಂದ್ರಗಳು ಹಾಗೂ 52 ಶಾಲೆಗಳು ಹಾನಿಗೀಡಾಗಿವೆ. ಐದು ರಾಜಧಾನಿ ನಗರಗಳು ರೆಡ್ ಅಲರ್ಟ್ ಝೋನ್ಗಳಾಗಿವೆ.
ಕ್ಯಾಲಿಯಲ್ಲಿ ವಿಶ್ವವಿದ್ಯಾಲಯ ಆಸ್ಪತ್ರೆಯ ಒಂದು ಭಾಗ ಕುಸಿದು ರೋಗಿಗಳು ಒಳಗೆ ಸಿಲುಕಿಕೊಂಡಿದ್ದರು. ಆಸ್ಪತ್ರೆಯ ಮೂಲಸೌಕರ್ಯದ ಸುಮಾರು ಶೇ.30ರಷ್ಟು ಭಾಗ ಹಾನಿಗೊಳಗಾಗಿದ್ದು, ಮಕ್ಕಳ ವೈದ್ಯಕೀಯ ಘಟಕ ಹಾಗೂ ನವಜಾತ ಶಿಶುಗಳ ಘಟಕದ ಮೇಲೆಯೂ ಪರಿಣಾಮ ಬೀರಿದೆ.
ಈ ಭೂಕಂಪದಿಂದ ಉಂಟಾಗಿರುವ ಮೂಲಸೌಕರ್ಯ ಹಾನಿಯನ್ನು ಸರಿಪಡಿಸಲು ಮತ್ತು ಬದುಕುಳಿದವರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿದೆ.
ಕುಸಿದ ಕಟ್ಟಡಗಳಡಿ ಸಿಲುಕಿರುವವರನ್ನು ಪತ್ತೆ ಹಚ್ಚಲು ಪೊಲೀಸರು, ಅಗ್ನಿಶಾಮಕ ದಳ, ಸೈನಿಕರು ಮತ್ತು ಸ್ವಯಂಸೇವಕರನ್ನು ಒಳಗೊಂಡ ರಕ್ಷಣಾ ತಂಡಗಳು ಹಗಲಿರುಳು ಶ್ರಮಿಸುತ್ತಿವೆ. ಕ್ಯಾಲಿಯಲ್ಲಿ ರಕ್ಷಣಾ ಕಾರ್ಯಕರ್ತರು ಕುಸಿದ ಕಟ್ಟಡದಿಂದ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳನ್ನು ಜೀವಂತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನೆರವು: ಭೂಕಂಪದಿಂದಾಗಿ ಕೊಲಂಬಿಯಾಕ್ಕೆ ನೆರೆಹೊರೆಯ ದೇಶಗಳು ನೆರವಿನ ಹಸ್ತ ಚಾಚ್ಚಿದ್ದು, ಈಕ್ವೆಡಾರ್ 47 ರಕ್ಷಣಾ ತಂಡಗಳು, ತಜ್ಞ ಶೋಧಕ ನಾಯಿಗಳು ಮತ್ತು ಅಗತ್ಯ ಪರಿಕರಗಳನ್ನು ಕಳುಹಿಸಿಕೊಟ್ಟಿವೆ. ಎಲ್ ಸಾಲ್ವಡಾರ್ ಮತ್ತು ಮೆಕ್ಸಿಕೊ ಕೂಡ ಸಹಾಯ ಹಸ್ತ ನೀಡಿವೆ. ಇದರೊಂದಿಗೆ ಯುನೈಟೆಡ್ ಸ್ಟೇಟ್್ಸ ಮತ್ತು ವಿಶ್ವಸಂಸ್ಥೆಗಳು ಅಗತ್ಯವಿರುವ ಎಲ್ಲಾ ರೀತಿಯ ಬೆಂಬಲವನ್ನು ನೀಡಲು ಸಿದ್ಧವಿರುವುದಾಗಿ ಘೋಷಿಸಿವೆ.
