ಚಮೋಲಿ,ಆ.11- ಉತ್ತರಾಖಂಡದಲ್ಲಿ ಮುಂದುವರಿದಿರುವ ವರುಣನ ಆರ್ಭಟಕ್ಕೆ ಮತ್ತೊಮೆ ಪ್ರಕೃತಿ ವಿಕೋಪ ಸಂಭವಿಸಿದೆ. ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಮೇಘಸ್ಫೋಟ ಹಾಗೂ ತೀವ್ರ ಮಾನ್ಸೂನ್ ಮಳೆಯಿಂದಾಗಿ ಟಮಕ್‌ನಲ್ಲಿ ಹಠಾತ್ ಪ್ರವಾಹ ಉಕ್ಕಿ ಹರಿದೆ. ಪ್ರವಾಹದ ರಭಸಕ್ಕೆ ಮಲಾರಿ-ನೀತಿ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಪ್ರಮುಖ ಬೈಲಿ ಸೇತುವೆ ಧರಾಶಾಹಿಯಾಗಿದೆ.
ಪ್ರವಾಹದ ನೀರನ್ನು ವೀಕ್ಷಿಸುತ್ತಿದ್ದ ಪಿಥೋರಗಢ ಮೂಲದ ಬಿಆರ್‌ಒ ಚಾಲಕ ಪಂಕಜ್ ಅವರು ಪ್ರವಾಹದ ಹೊಡೆತಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡುಹೋಗಿ ನಾಪತ್ತೆಯಾಗಿದ್ದಾರೆ. ಅವರ ಜೊತೆಗೆ ಒಂದು ವಾಹನವೂ ಪ್ರವಾಹದ ಪಾಲಾಗಿದೆ.
ಈ ಸೇತುವೆಯು ಜ್ಯೋತಿರ್ಮಠವನ್ನು ಗಡಿ ಪ್ರದೇಶಗಳೊಂದಿಗೆ ಸಂಪರ್ಕಿಸುವ ಅತ್ಯಂತ ಮಹತ್ವದ ಕೊಂಡಿಯಾಗಿತ್ತು. ಪ್ರಸ್ತುತ ಸೇತುವೆ ಕುಸಿತದಿಂದಾಗಿ ಜುಮಾ, ನೀತಿ ಸೇರಿದಂತೆ ಸುಮಾರು ಒಂದು ಡಜನ್ ಹಳ್ಳಿಗಳ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತಗ್ಗು ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸಂಪರ್ಕ ಕಡಿತಗೊಂಡಿರುವ ಹಳ್ಳಿಗಳಿಗೆ ಆಹಾರ, ಕುಡಿಯುವ ನೀರು ಪಡಿತರ, ಔಷಧಿಗಳು ಹಾಗೂ ಇತರೆ ಅಗತ್ಯ ವಸ್ತುಗಳ ಸರಬರಾಜಿಗೆ ಯಾವುದೇ ರೀತಿಯ ಕೊರತೆಯಾಗದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಟಮಕ್‌ನಲ್ಲಿ ಸಂಭವಿಸುತ್ತಿರುವ ಭೂಕುಸಿತ ಹಾಗೂ ಪ್ರವಾಹಗಳು ಜೋರ್ತಿಮಠ-ನೀತಿ ರಸ್ತೆಯ ಸಂಚಾರಕ್ಕೆ ನಿರಂತರ ಅಡ್ಡಿಯುಂಟು ಮಾಡುತ್ತಿವೆ. ಸದ್ಯ ಜಿಲ್ಲಾಡಳಿತ ಮತ್ತು ರಕ್ಷಣಾ ಪಡೆಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಮತ್ತು ಸಂಚಾರವನ್ನು ಶೀಘ್ರವಾಗಿ ಮರುಸ್ಥಾಪಿಸಲು ಹಗಲಿರುಳು ಶ್ರಮಿಸುತ್ತಿವೆ.
ಜ್ಯೋತಿರ್ಮಠವನ್ನು ಗಡಿ ಪ್ರದೇಶಗಳಿಗೆ ಸಂಪರ್ಕಿಸುವ ಈ ಸೇತುವೆ ಕುಸಿತದಿಂದ ಜುಮಾ ಮತ್ತು ನೀತಿ ಸೇರಿದಂತೆ ಸುಮಾರು ಒಂದು ಡಜನ್ ಹಳ್ಳಿಗಳ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದ್ದು, ನಾಪತ್ತೆಯಾಗಿರುವ ಚಾಲಕನಿಗಾಗಿ ಶೋಧ ಮುಂದುವರಿದಿದೆ. ಬಿಆರ್‌ಒ ವತಿಯಿಂದ ತುರ್ತು ಪರ್ಯಾಯ ವ್ಯವಸ್ಥೆಗಳು ನಡೆಯುತ್ತಿದ್ದು, ಒಂದೆರಡು ದಿನಗಳಲ್ಲಿ ಸಂಚಾರ ಮರುಸ್ಥಾಪಿಸುವ ನಿರೀಕ್ಷೆಯಿದೆ ಎಂದು ಚಮೋಲಿ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಎನ್.ಕೆ.ಜೋಶಿ ತಿಳಿಸಿದ್ದಾರೆ.
