ವಾಷಿಂಗ್ಟನ್,ಆ.11- ಭಾರತೀಯ ಉದ್ಯಮಿ, ಅದಾನಿ ಗ್ರೂಪ್ನ ಮುಖ್ಯಸ್ಥ ಗೌತಮ್ ಅದಾನಿ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿದ್ದ ವಂಚನೆ ಮತ್ತು ಲಂಚದ ಕ್ರಿಮಿನಲ್ ಆರೋಪ ಪ್ರಕರಣಗಳನ್ನು ಅಮೆರಿಕದ ನ್ಯಾಯಾಧೀಶರು ಅಧಿಕೃತವಾಗಿ ವಜಾಗೊಳಿಸಿದ್ದಾರೆ.
ಪ್ರಾಸಿಕ್ಯೂಟರ್ಗಳ ಅಪರೂಪದ ಮನವಿಯನ್ನು ಪುರಸ್ಕರಿಸಿ ಬ್ರೂಕ್ಲಿನ್ ಜಿಲ್ಲಾ ನ್ಯಾಯಾಧೀಶ ನಿಕೋಲಸ್ ಗರೋಫಿಸ್ ಈ ತೀರ್ಪು ನೀಡಿದ್ದಾರೆ.
ಅಮೆರಿಕದ ನ್ಯಾಯಾಂಗ ಇಲಾಖೆಯ ಪ್ರಾಸಿಕ್ಯೂಟರ್ಗಳು ಈ ಪ್ರಕರಣವನ್ನು ಕೈಬಿಡುವಂತೆ ಕೋರಿದ್ದರು. ಇದನ್ನು ಪರಿಶೀಲಿಸಿದ ನ್ಯಾಯಾಧೀಶ ನಿಕೋಲಸ್ ಗರೋಫಿಸ್, ಆರೋಪ ಪ್ರಕರಣವನ್ನು ವಜಾಗೊಳಿಸುವುದಾಗಿ ಘೋಷಿಸಿದ್ದಾರೆ.
2024ರಲ್ಲಿ ಭಾರತದಲ್ಲಿ ಸೌರಶಕ್ತಿ ಸ್ಥಾವರ ನಿರ್ಮಾಣಕ್ಕಾಗಿ ಅನುಮೋದನೆ ಪಡೆಯಲು ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಲು ಒಪ್ಪಿಕೊಂಡಿದ್ದಾರೆ ಹಾಗೂ ಅಮೆರಿಕದ ಹೂಡಿಕೆದಾರರನ್ನು ದಾರಿ ತಪ್ಪಿಸಿದ್ದಾರೆಂಬ ಗಂಭೀರ ಆರೋಪಗಳು ಗೌತಮ್ ಅದಾನಿ ವಿರುದ್ಧ ಕೇಳಿಬಂದಿದ್ದವು.
ಪ್ರಕರಣವನ್ನು ಕೈಬಿಡುವ ನಿರ್ಧಾರ ಕಾನೂನುಬದ್ಧವಾಗಿದ್ದರೂ, ನ್ಯಾಯಾಂಗ ಇಲಾಖೆಯ ಉನ್ನತ ಅಧಿಕಾರಿಗಳು ತನಿಖಾಧಿಕಾರಿಗಳ ಅಭಿಪ್ರಾಯವನ್ನು ಕಡೆಗಣಿಸಿ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿರುವುದು ಕಳವಳಕಾರಿ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಅಮೆರಿಕದಲ್ಲಿ 10 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಅದಾನಿ ಅವರ ಭರವಸೆಗೂ ಈ ಪ್ರಕರಣದ ವಜಾಗೂ ನೇರ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಗೌತಮ್ ಅದಾನಿ ಪ್ರತಿಕ್ರಿಯೆ:
ನ್ಯಾಯಾಲಯದ ತೀರ್ಪಿನ ಕುರಿತು ಎಕ್್ಸನಲ್ಲಿ ಪ್ರತಿಕ್ರಿಯಿಸಿರುವ ಗೌತಮ್ ಅದಾನಿ, ನಾನು ಅಮೆರಿಕದ ನ್ಯಾಯಾಲಯದ ತೀರ್ಪನ್ನು ನಮ್ರತೆ ಮತ್ತು ನ್ಯಾಯಾಂಗ ಪ್ರಕ್ರಿಯೆಯನ್ನು ಗೌರವದಿಂದ ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ. ಅದಾನಿ ಗ್ರೂಪ್ ಆರಂಭದಿಂದಲೂ ತಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸುತ್ತಾ ಬಂದಿದೆ.
ಕ್ರಿಮಿನಲ್ ಪ್ರಕರಣ ವಜಾಗೊಂಡಿದ್ದರೂ, ಸಂಬಂಧಿತ ಇಲಾಖೆಗಳೊಂದಿಗೆ ನಡೆದ ಇತರ ಪ್ರಕ್ರಿಯೆಗಳಲ್ಲಿ ಅದಾನಿ ಗುಂಪು ದಂಡ ಹಾಗೂ ಹಣಕಾಸಿನ ಒಡಂಬಡಿಕೆಗಳಿಗೆ ಒಪ್ಪಿಗೆ ಸೂಚಿಸಿದೆ.
ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ ತಂದ ಸಿವಿಲ್ ಆರೋಪಗಳ ಇತ್ಯರ್ಥಕ್ಕಾಗಿ ಗೌತಮ್ ಅದಾನಿ 6 ಮಿಲಿಯನ್ ಡಾಲರ್ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ 12 ಮಿಲಿಯನ್ ಡಾಲರ್ ಪಾವತಿಸಲು ಒಪ್ಪಿಕೊಂಡಿದ್ದಾರೆ.
ಇರಾನ್ ಮೇಲಿನ ನಿರ್ಬಂಧಗಳ ಉಲ್ಲಂಘನೆ ಆರೋಪಗಳನ್ನು ಇತ್ಯರ್ಥಪಡಿಸಲು ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ ಪ್ರತ್ಯೇಕವಾಗಿ ಯುಎಸ್ ಖಜಾನೆ ಇಲಾಖೆಗೆ 275 ಮಿಲಿಯನ್ ಡಾಲರ್ ಪಾವತಿಸಲು ಒಪ್ಪಿಗೆ ನೀಡಿದೆ.
