Homeರಾಜ್ಯ12.61 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ : ಇಬ್ಬರು ವಿದೇಶಿಗರು ಸೇರಿ 34 ಮಂದಿ...

12.61 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ : ಇಬ್ಬರು ವಿದೇಶಿಗರು ಸೇರಿ 34 ಮಂದಿ ಬಂಧನ

ಬೆಂಗಳೂರು, ನ.11- ನಗರ ಪೊಲೀಸರು ಇಬ್ಬರು ವಿದೇಶಿ ಪ್ರಜೆಗಳು ಹಾಗೂ ಒಂಬತ್ತು ಮಂದಿ ಹೊರರಾಜ್ಯದವರು ಸೇರಿದಂತೆ ಒಟ್ಟು 34 ಮಂದಿಯನ್ನು ಬಂಧಿಸಿ, 12.61 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳು ಹಾಗೂ ಎಂಟು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಹೆಬ್ಬಾಳ, ಕೋರಮಂಗಲ, ಡಿಜೆ ಹಳ್ಳಿ, ಮಹಾಲಕ್ಷ್ಮೀಪುರಂ, ಆಡುಗೋಡಿ, ಯಶವಂತಪುರ, ಹೆಣ್ಣೂರು, ಗೋವಿಂದಪುರ, ಬೇಗೂರು, ಹೆಬ್ಬಗೋಡಿ ಹಾಗೂ ಬಂಡೇಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದಾಗಿ ವಿವಿಧ ದಿನಾಂಕಗಳಂದು ಪೊಲೀಸರಿಗೆ ಮಾಹಿತಿ ಲಭಿಸಿದೆ.

ಈ ಮಾಹಿತಿಗಳ ಆಧಾರದ ಮೇಲೆ ಠಾಣೆಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿ, ಸ್ಥಳಗಳ ಮೇಲೆ ದಾಳಿ ಮಾಡಿ ಇಬ್ಬರು ವಿದೇಶಿ ಪ್ರಜೆಗಳು, 9 ಮಂದಿ ಹೊರರಾಜ್ಯದವರು ಹಾಗೂ 23 ಮಂದಿ ಸ್ಥಳೀಯರು ಸೇರಿದಂತೆ ಒಟ್ಟು 34 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ವಿದೇಶ, ಹೊರರಾಜ್ಯ ಹಾಗೂ ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ತಿಳಿಸಿದ್ದಾರೆ. ಈ ಪ್ರಕರಣಗಳ ಆರೋಪಿಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಅಪರಿಚಿತ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರೆದಿದ್ದು, ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ.

ಹೆಬ್ಬಾಳ ಠಾಣೆ ಪೊಲೀಸರು 3 ಪ್ರಕರಣಗಳಲ್ಲಿ 6.32 ಕೋಟಿ ರೂ. ಮೌಲ್ಯದ 3 ಕೆಜಿ 114 ಗ್ರಾಂ ಎಂಡಿಎಂಎ ಹಾಗೂ 9 ಕೆಜಿ 321 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡರೆ, ಕೋರಮಂಗಲ ಠಾಣೆ ಪೊಲೀಸರು 1.68 ಕೋಟಿ ರೂ. ಮೌಲ್ಯದ 841 ಗ್ರಾಂ ಎಂಡಿಎಂಎ ಹಾಗೂ ಒಂದು ಮೊಬೈಲ್ ಜಪ್ತಿ ಮಾಡಿದ್ದಾರೆ.

ಡಿಜೆ ಹಳ್ಳಿ ಠಾಣೆ ಪೊಲೀಸರು 1.66 ಕೋಟಿ ರೂ. ಮೌಲ್ಯದ 831 ಗ್ರಾಂ ಎಂಡಿಎಂಎ ಹಾಗೂ ಮಹಾಲಕ್ಷ್ಮೀಪುರಂ ಠಾಣೆ ಪೊಲೀಸರು 4 ಪ್ರಕರಣಗಳಲ್ಲಿ 1.24 ಕೋಟಿ ರೂ. ಮೌಲ್ಯದ 1 ಲೀ. 40 ಮಿ.ಲೀ. ಹ್ಯಾಶಿಷ್ ಆಯಿಲ್, 415 ಗ್ರಾಂ ಗಾಂಜಾ, 490 ಗ್ರಾಂ ಎಂಡಿಎಂಎ, 3 ಮೊಬೈಲ್‌ಗಳು ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಯಶವಂತಪುರ ಠಾಣೆ ಪೊಲೀಸರು 73 ಲಕ್ಷ ರೂ. ಮೌಲ್ಯದ 72.82 ಗ್ರಾಂ ಕೊಕೇನ್ ಹಾಗೂ 2 ಮೊಬೈಲ್‌ಗಳನ್ನು, ಆಡುಗೋಡಿ ಠಾಣೆ ಪೊಲೀಸರು 27.20 ಲಕ್ಷ ರೂ. ಮೌಲ್ಯದ 136 ಗ್ರಾಂ ಎಂಡಿಎಂಎ, 2 ಮೊಬೈಲ್‌ಗಳು ಹಾಗೂ ಒಂದು ಸಾವಿರ ರೂ. ನಗದನ್ನು, ಹೆಣ್ಣೂರು ಠಾಣೆ ಪೊಲೀಸರು 21.40 ಲಕ್ಷ ರೂ. ಮೌಲ್ಯದ 107 ಗ್ರಾಂ ಎಂಡಿಎಂಎ ಹಾಗೂ ದ್ವಿಚಕ್ರ ವಾಹನವನ್ನು ಮತ್ತು ಗೋವಿಂದಪುರ ಠಾಣೆ ಪೊಲೀಸರು 17 ಲಕ್ಷ ರೂ. ಮೌಲ್ಯದ 17 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಬೇಗೂರು ಠಾಣೆ ಪೊಲೀಸರು 3 ಪ್ರಕರಣಗಳಲ್ಲಿ 13.74 ಲಕ್ಷ ರೂ. ಮೌಲ್ಯದ 13 ಕೆಜಿ 750 ಗ್ರಾಂ ಗಾಂಜಾವನ್ನು, ಹೆಬ್ಬಗೋಡಿ ಠಾಣೆ ಪೊಲೀಸರು 12.56 ಲಕ್ಷ ರೂ. ಮೌಲ್ಯದ 502 ಮಿ.ಲೀ. ಹ್ಯಾಶಿಷ್ ಆಯಿಲ್ ಅನ್ನು ಹಾಗೂ ಬಂಡೇಪಾಳ್ಯ ಠಾಣೆ ಪೊಲೀಸರು 6 ಲಕ್ಷ ರೂ. ಮೌಲ್ಯದ 6 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಈ ಕಾರ್ಯಾಚರಣೆಯನ್ನು ಆಯಾ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಹಾಗೂ ಸಿಬ್ಬಂದಿಯ ತಂಡಗಳು ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.

RELATED ARTICLES

Latest News