ಬೆಂಗಳೂರು, ನ.11- ಬರ ಪರಿಸ್ಥಿತಿಯಿಂದ ನಲುಗಿದ್ದ ರೈತರಿಗೆ ಪ್ರತಿ ಎಕರೆಗೆ 2,500 ರೂ. ಇನ್ಪುಟ್ ಸಬ್ಸಿಡಿ ರೂಪದಲ್ಲಿ ಪರಿಹಾರ ಪಾವತಿಸುವುದಾಗಿ ಘೋಷಿಸಿದ್ದ ರಾಜ್ಯ ಸರ್ಕಾರ, ಈಗ ಮಾತು ಬದಲಿಸಿದ್ದು ಕುಟುಂಬದ ಲೆಕ್ಕಾಚಾರದಲ್ಲಿ ಹಣ ಪಾವತಿಸುವುದಾಗಿ ಹೇಳುವ ಮೂಲಕ ಆಕ್ರೋಶಕ್ಕೆ ಗುರಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಗಳು ಕೇಳಿ ಬಂದ ಬೆನ್ನಲ್ಲೆ ಸಿಎಂ ಹಾಗೂ ಡಿಸಿಎಂ ಸ್ಪಷ್ಟನೆ ನೀಡಿದ್ದಾರೆ. ಅದರಲ್ಲೂ ಹೊಂದಾಣಿಕೆ ಕೊರತೆಯಿಂದಾಗಿ ಗೊಂದಲಗಳಾಗಿವೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, 5 ಸಾವಿರ ರೂ. ಪರಿಹಾರ ನೀಡುವುದಾಗಿ ನಾವು ಕೊಟ್ಟ ಮಾತಿಗೆ ಬದ್ಧರಾಗಿದ್ದೇವೆ. ಲೋಪದೋಷಗಳನ್ನು ಸರಿಪಡಿಸುತ್ತೇವೆ. ಯಾರೂ ಆತಂಕಕ್ಕೊಳಗಾಗಬಾರದು ಎಂದಿದ್ದಾರೆ.ಸಿದ್ಧ ಸೂತ್ರದ ಪ್ರಕಾರ ರೈತರ ಪರಿಹಾರದ ಮೊತ್ತ ನಿಗದಿಯಾಗಿದೆ. ಖಾತೆ ಸಂಖ್ಯೆಗಳು ಸರಿ ಇರುವವರಿಗೆ ಪರಿಹಾರ ಪಾವತಿಯಾಗಿದೆ. ಯಾರಿಗೆ ಹಣ ಹೋಗಿಲ್ಲ, ಅದನ್ನು ಸರಿ ಪಡಿಸುತ್ತೇವೆ ಎಂದಿದ್ದಾರೆ.
ಎಕರೆಗೋ… ಹೆಕ್ಟೇರ್ಗೋ… ಯಾವುದೋ ಒಂದು ದರ ನಿಗದಿಯಾಗಿದೆ. ಅದರಂತೆ ಹಣ ಪಾವತಿಸುತ್ತೇವೆ. ಮೊದಲ ಮತ್ತು ಎರಡನೇ ಕಂತಿನಲ್ಲಿ ತಲಾ 2,500 ರೂ. ನಂತೆ ಒಟ್ಟು 5 ಸಾವಿರ ರೂ.ಗಳನ್ನು ನೀಡುತ್ತೇವೆ. ಕೇಂದ್ರ ಸರ್ಕಾರ ಹಣ ಕೊಡದೇ ಇದ್ದರೂ ನಾವು ಕೊಟ್ಟ ಮಾತಿಗೆ ಬದ್ಧರಾಗಿದ್ದೇವೆ ಎಂದರು.
ಹಣ ಪಾವತಿಯಲ್ಲಿ ಅಧಿಕಾರಿಗಳ ಲೋಪ ಇಲ್ಲ. ಖಾತೆಗಳ ಸಂಖ್ಯೆಗಳು ಸರಿ ಇಲ್ಲ. ಒಂದು ಬಟನ್ನಲ್ಲಿ ಎಲ್ಲರಿಗೂ ಹಣ ಹೋಗುತ್ತಿದೆ. ಕೆಲವು ಖಾತೆಗಳ ಸಂಖ್ಯೆಗಳಲ್ಲಿ ವ್ಯತ್ಯಾಸಗಳಿವೆ. ಇನ್ನೂ ಕೆಲವು ಕಡೆ ಸಾಲಕ್ಕೆ ಪರಿಹಾರದ ಹಣ ಹೊಂದಾಣಿಕೆಯಾಗುತ್ತದೆ. ಅವುಗಳನ್ನು ಪರಿಶೀಲಿಸಿ, ಸರಿ ಮಾಡುತ್ತಿದ್ದೇವೆ. ಇದನ್ನು ವೈರಲ್ ಮಾಡಿ ಅಪಪ್ರಚಾರ ಮಾಡುವುದರಿಂದ ಏನು ಪ್ರಯೋಜನವಿಲ್ಲ ಎಂದು ಹೇಳಿದರು.
ಎಕರೆಗೆ ಅಲ್ಲ, ಕುಟುಂಬಕ್ಕೆ ಪರಿಹಾರ:
ಮತ್ತೊಂದೆಡೆ ತಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕಂದಾಯ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಬರ ಪರಿಸ್ಥಿತಿಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ಪ್ರತಿ ರೈತನ ಕುಟುಂಬಕ್ಕೆ 2,500 ರೂ. ಇನ್ಪುಟ್ ಸಬ್ಸಿಡಿ ನೀಡುವುದಾಗಿ ಘೋಷಿಸಿದೆ. ಆಧಿಕಾರಿಗಳು ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಪ್ರತಿ ಎಕರೆ ಲೆಕ್ಕದಲ್ಲಿ ಹಣ ಪಾವತಿ ಮಾಡುತ್ತಿದ್ದಾರೆ. ಈ ಗೊಂದಲವನ್ನು ಸರಿಪಡಿಸುವುದಾಗಿ ತಿಳಿಸಿದ್ದಾರೆ.
ಪರಿಹಾರ ಪಾವತಿಸುವಾಗ ಕೆಲವರಿಗೆ ಒಂದೂವರೆ ಸಾವಿರ, ಒಂದು ಸಾವಿರ ರೀತಿಯಲ್ಲಿ ಹಣ ಹೋಗಿದೆ. ಸದನದಲ್ಲಿ ಒಬ್ಬ ರೈತನ ಕುಟುಂಬಕ್ಕೆ 2,500 ಸಾವಿರ ಎಂದು ನಾನು ಪ್ರಕಟಿಸಿದ್ದೇವೆ. ಮುಖ್ಯಮಂತ್ರಿಯವರು ಗೊತ್ತಾಗದೆ ಪ್ರತಿ ಎಕರೆಗೆ ಎಂದು ಹೇಳಿದ್ದರು. ಪತ್ರಿಕಾಗೋಷ್ಠಿಯಲ್ಲಿ ಅದಕ್ಕೆ ಸ್ಪಷ್ಟನೆ ನೀಡಲಾಗಿದೆ ಎಂದಿದ್ದಾರೆ.
ಅಧಿಕಾರಿಗಳು ತಪ್ಪಾಗಿ ಅರ್ಥಸಿಕೊಂಡಿದ್ದಾರೆ. ಪ್ರತಿ ಎಕರೆ ಲೆಕ್ಕದಲ್ಲಿ ಡಿಬಿಟಿ ಮಾಡುತ್ತಿದ್ದಾರೆ. ಪ್ರತಿ ಕುಟುಂಬದ ಲೆಕ್ಕದಲ್ಲಿ 1,250 ಕೋಟಿ ರೂ.ಗಳನ್ನು 50 ಲಕ್ಷ ಜನ ರೈತರಿಗೆ ಪಾವತಿಸುವುದು ಇಲಾಖೆಯ ಲೆಕ್ಕಾಚಾರ. ಎರಡನೇ ಕಂತನ್ನೂ ಇದೇ ರೀತಿ ಪಾವತಿಸಲಾಗುತ್ತದೆ. ಮೊದಲ ಕಂತಿನಲ್ಲಿ ಕಡಿಮೆ ಹಣ ಪಾವತಿಯಾಗಿರುವವರಿಗೆ ಎರಡನೇ ಕಂತಿನಲ್ಲಿ ಬಾಕಿ ಮೊತ್ತವನ್ನು ನೀಡುವುದಾಗಿ ತಿಳಿಸಿದರು.
ಹಣಕಾಸು ಇಲಾಖೆ ಈಗಾಗಲೇ ಹಣ ಬಿಡುಗಡೆ ಮಾಡಿದೆ.ಇಲಾಖೆಯಿಂದ ಹಂಚುವಾಗ ಲೋಪವಾಗಿದೆ. ಅಧಿಕಾರಿಗಳು ಎನ್ಡಿಆರ್ಎಫ್ ನಿಯಮಾವಳಿಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪರಿಹಾರ ಪಾವತಿಗೆ ಕಾಲ ಮಿತಿ ಇಲ್ಲ. ಆದಷ್ಟು ಶೀಘ್ರವಾಗಿ ಹಣ ನೀಡುತ್ತೇವೆ. ಮೊದಲ ಕಂತು ಮುಗಿದ ಮೇಲೆ 2ನೇ ಕಂತು ಪಾವತಿಸಲಾಗುತ್ತದೆ ಎಂದು ತಿಳಿಸಿದರು.
ಬರ ಪರಿಹಾರಕ್ಕಾಗಿ ಮನವಿ ಸಲ್ಲಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸಮಯ ನೀಡುತ್ತಿಲ್ಲ. ಪ್ರಧಾನಿಯವರು ಬೆಂಗಳೂರಿಗೆ ಬಂದಾಗ ಮನವಿ ಸಲ್ಲಿಸುವುದು ಕಷ್ಟಸಾಧ್ಯ. ಅದು ಸೂಕ್ತವೂ ಅಲ್ಲ. ಈಗಾಗಲೇ ಪ್ರತಿ ನಿಮಿಷದ ಕಾರ್ಯಕ್ರಮಗಳು ನಿಗದಿಯಾಗಿವೆ. ದೆಹಲಿಯಲ್ಲಿ ಭೇಟಿಯಾಗಲು ಸಮಯ ಕೊಡಿ ಎಂದು ವಾರದ ಹಿಂದೆಯೇ ಪತ್ರ ಬರೆದಿದ್ದೇವೆ. ಈವರೆಗೂ ಕೇಂದ್ರ ಸರ್ಕಾರದಿಂದ ಉತ್ತರ ಬಂದಿಲ್ಲ, ಸಮಯ ನಿಗದಿಯಾದ ಬಳಿಕ ಸರ್ವಪಕ್ಷ ನಿಯೋಗ ಕರೆದೊಯ್ಯುವ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿದರು.
