Homeರಾಜ್ಯಮತಾಂತರ ನಿಷೇಧ ಕಾಯ್ದೆ ವಾಪಸ್‌ ಪಡೆಯಲು ಕಾಂಗ್ರೆಸ್ ಸರ್ಕಾರ ಚಿಂತನೆ

ಮತಾಂತರ ನಿಷೇಧ ಕಾಯ್ದೆ ವಾಪಸ್‌ ಪಡೆಯಲು ಕಾಂಗ್ರೆಸ್ ಸರ್ಕಾರ ಚಿಂತನೆ

ಬೆಂಗಳೂರು,ನ.11- ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಸಂರಕ್ಷಣಾ ಕಾಯ್ದೆ-2022 ಅನ್ನು ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಾಪಸ್‌‍ ಪಡೆಯುವ ಅಥವಾ ಕಾಯ್ದೆಯಲ್ಲಿರುವ ಕೆಲವು ವಿವಾದಾತಕ ಅಂಶಗಳನ್ನು ತೆಗೆದುಹಾಕಿ ತಿದ್ದುಪಡಿ ಮಾಡುವ ಕುರಿತು ರಾಜ್ಯ ಕಾಂಗ್ರೆಸ್‌‍ ಸರ್ಕಾರ ಚಿಂತನೆ ನಡೆಸುತ್ತಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ಬಿಜೆಪಿ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಲು ಮುಂದಾಗಿವೆ. ಬಲವಂತ, ವಂಚನೆ, ತಪ್ಪು ಮಾಹಿತಿ,
ಪ್ರಭಾವ, ಒತ್ತಡ ಹಾಗೂ ಆಮಿಷದ ಮೂಲಕ ನಡೆಯುವ ಮತಾಂತರವನ್ನು ತಡೆಯುವ ಉದ್ದೇಶದಿಂದ ಬಸವರಾಜ ಬೊಮಾಯಿ ನೇತೃತ್ವದ ಬಿಜೆಪಿ ಸರ್ಕಾರ 2022ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದಿತ್ತು. ಆರಂಭದಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ಬಂದಿದ್ದ ನಿಯಮಗಳನ್ನು ಬಳಿಕ ವಿಧಾನಮಂಡಲದ ಮೂಲಕ ಕಾಯ್ದೆಯಾಗಿ ರೂಪಿಸಲಾಗಿತ್ತು.

ಆದರೆ ಕಾಯ್ದೆಯಲ್ಲಿರುವ ಕೆಲವು ವಿಧಿಗಳು ವೈಯಕ್ತಿಕ ಧಾರ್ಮಿಕ ಸ್ವಾತಂತ್ರ್ಯ, ಅಂತರ್ಧರ್ಮೀಯ ವಿವಾಹ ಹಾಗೂ ಸ್ವಯಂಪ್ರೇರಿತ ಧಾರ್ಮಿಕ ಆಯ್ಕೆಯ ಮೇಲೆ ಅತಿಯಾದ ನಿಯಂತ್ರಣ ಹೇರುತ್ತವೆ ಎಂದು ಕಾಂಗ್ರೆಸ್‌‍ ಸೇರಿದಂತೆ ವಿರೋಧ ಪಕ್ಷಗಳು ಮತ್ತು ಕೆಲವು ಅಲ್ಪಸಂಖ್ಯಾತ ಸಂಘಟನೆಗಳು ಆರಂಭದಿಂದಲೂ ಆಕ್ಷೇಪ ವ್ಯಕ್ತಪಡಿಸಿದ್ದವು.

ಅಧಿಕಾರಕ್ಕೆ ಬಂದ ಬಳಿಕ ರದ್ದತಿಗೆ ಕಾಂಗ್ರೆಸ್‌‍ ನಿರ್ಧಾರ
2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕೆಲವು ಕಾನೂನುಗಳನ್ನು ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ರದ್ದುಪಡಿಸುವುದಾಗಿ ಕಾಂಗ್ರೆಸ್‌‍ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ 2023ರ ಜೂನ್‌ನಲ್ಲೇ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಪಡಿಸಲು ತೀರ್ಮಾನಿಸಿತ್ತು.

ಆದರೆ ಸಚಿವ ಸಂಪುಟದ ನಿರ್ಧಾರ ಕಾನೂನು ರೂಪ ಪಡೆಯಲಿಲ್ಲ. ಜುಲೈ ಅಧಿವೇಶನದಲ್ಲಿ ರದ್ದತಿ ಮಸೂದೆ ಮಂಡಿಸುವುದಾಗಿ ಸರ್ಕಾರ ಘೋಷಿಸಿದ್ದರೂ, ಅಂತಿಮ ಹಂತದಲ್ಲಿ ಕರಡು ಮಸೂದೆಯನ್ನು ಹಿಂಪಡೆಯಲಾಗಿತ್ತು. ಪರಿಣಾಮವಾಗಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆ ಇಂದಿಗೂ ಜಾರಿಯಲ್ಲಿದೆ.ಇದೀಗ ಬೆಳಗಾವಿ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಯಾವ ರೀತಿಯ ಮತಾಂತರ ನಿಷೇಧ?
ವ್ಯಕ್ತಿಯನ್ನು ತಪ್ಪು ಮಾಹಿತಿ ನೀಡುವುದು, ಬಲವಂತ, ಅನಗತ್ಯ ಪ್ರಭಾವ, ಒತ್ತಾಯ, ಆಮಿಷ, ವಂಚನೆ ಅಥವಾ ಇತರೆ ಮೋಸದ ವಿಧಾನಗಳ ಮೂಲಕ ಮತ್ತೊಂದು ಧರ್ಮಕ್ಕೆ ಮತಾಂತರಿಸುವುದನ್ನು ಕಾಯ್ದೆ ನಿಷೇಧಿಸುತ್ತದೆ. ಇಂತಹ ಮತಾಂತರಕ್ಕೆ ಸಹಾಯ ಮಾಡುವುದು ಅಥವಾ ಸಂಚು ರೂಪಿಸುವುದಕ್ಕೂ ಕಾನೂನಿನಲ್ಲಿ ಅವಕಾಶವಿಲ್ಲ.

ಮದುವೆಯ ಮೂಲಕ ಮತಾಂತರಕ್ಕೂ ನಿಯಮ
ಮದುವೆಯ ಉದ್ದೇಶದಿಂದ ಮಾತ್ರ ಮತಾಂತರ ಮಾಡುವುದು ಅಥವಾ ಮತಾಂತರಕ್ಕಾಗಿ ಮಾತ್ರ ಮದುವೆ ಮಾಡಿಕೊಳ್ಳುವುದನ್ನೂ ಕಾಯ್ದೆ ನಿಯಂತ್ರಿಸುತ್ತದೆ. ಮತಾಂತರದ ಉದ್ದೇಶದಿಂದ ನಡೆದ ಮದುವೆಯನ್ನು ನ್ಯಾಯಾಲಯ ಅಮಾನ್ಯ ಎಂದು ಘೋಷಿಸುವ ಅವಕಾಶವೂ ಕಾಯ್ದೆಯಲ್ಲಿದೆ.

ಸ್ವಇಚ್ಛೆಯ ಮತಾಂತರಕ್ಕೆ ಏನು ನಿಯಮ?
ವ್ಯಕ್ತಿಯೊಬ್ಬರು ಸ್ವಯಂ ಇಚ್ಛೆಯಿಂದ ಧರ್ಮ ಬದಲಿಸಬೇಕೆಂದಿದ್ದರೆ, ಕಾಯ್ದೆಯಡಿ ಜಿಲ್ಲಾಧಿಕಾರಿಗೆ ಪೂರ್ವ ಮಾಹಿತಿ ನೀಡುವ ಪ್ರಕ್ರಿಯೆ ಇದೆ. ಮತಾಂತರ ನಡೆಸುವ ಧಾರ್ಮಿಕ ವ್ಯಕ್ತಿಗೂ ಪ್ರತ್ಯೇಕವಾಗಿ ಮಾಹಿತಿ ನೀಡುವ ನಿಯಮವಿದೆ. ಜಿಲ್ಲಾಧಿಕಾರಿ ಈ ಮತಾಂತರದ ಉದ್ದೇಶದ ಬಗ್ಗೆ ಪರಿಶೀಲನೆ ನಡೆಸಬಹುದು.

ದೂರು ಯಾರು ನೀಡಬಹುದು?
ಮತಾಂತರಗೊಂಡ ವ್ಯಕ್ತಿಯ ಕುಟುಂಬದವರು, ಸಂಬಂಧಿಕರು ಅಥವಾ ಆ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿರುವವರು ಕಾನೂನುಬಾಹಿರ ಮತಾಂತರದ ಬಗ್ಗೆ ದೂರು ನೀಡಬಹುದು. ಕಾಯ್ದೆಯಡಿ ಪ್ರಕರಣಗಳು ಜಾಮೀನು ರಹಿತ ಹಾಗೂ ಸಂಜ್ಞೇಯ ಅಪರಾಧಗಳಾಗಿವೆ.

ಶಿಕ್ಷೆ ಎಷ್ಟು?
ಸಾಮಾನ್ಯ ಪ್ರಕರಣಗಳಲ್ಲಿ 3ರಿಂದ 5 ವರ್ಷಗಳವರೆಗೆ ಜೈಲು ಮತ್ತು 25,000 ದಂಡ ವಿಧಿಸಬಹುದು. ಮಹಿಳೆಯರು, ಅಪ್ರಾಪ್ತರು, ಪರಿಶಿಷ್ಟ ಜಾತಿ/ಪಂಗಡದವರು ಅಥವಾ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡ ಪ್ರಕರಣಗಳಲ್ಲಿ 3ರಿಂದ 10 ವರ್ಷಗಳವರೆಗೆ ಜೈಲು ಮತ್ತು 50,000 ದಂಡ ವಿಧಿಸುವ ಅವಕಾಶವಿದೆ. ಮರುಅಪರಾಧಕ್ಕೆ ಶಿಕ್ಷೆ ಹೆಚ್ಚಾಗಬಹುದು. ಬಲವಂತದ ಮತಾಂತರಕ್ಕೆ ಒಳಗಾದವರಿಗೆ ನ್ಯಾಯಾಲಯದ ಆದೇಶದ ಮೇರೆಗೆ 5 ಲಕ್ಷದವರೆಗೆ ಪರಿಹಾರ ನೀಡುವ ವ್ಯವಸ್ಥೆಯೂ ಇದೆ.

ಮತ್ತೆ ಹಿಂದಿನ ಧರ್ಮಕ್ಕೆ ಮರಳಿದರೆ?
ವ್ಯಕ್ತಿಯು ತನ್ನ ತಕ್ಷಣದ ಹಿಂದಿನ ಧರ್ಮಕ್ಕೆ ಮರುಮತಾಂತರಗೊಂಡರೆ, ಅದನ್ನು ಈ ಕಾಯ್ದೆಯ ಅರ್ಥದಲ್ಲಿ ಮತಾಂತರವೆಂದು ಪರಿಗಣಿಸಲಾಗುವುದಿಲ್ಲ ಎಂಬ ವಿನಾಯಿತಿಯಿದೆ.
ಒಟ್ಟಿನಲ್ಲಿ ವ್ಯಕ್ತಿಯ ಸ್ವಇಚ್ಛೆಯ ಧರ್ಮ ಬದಲಾವಣೆಯನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕಿಂತ, ಬಲವಂತ, ವಂಚನೆ, ಆಮಿಷ, ಒತ್ತಡ ಮತ್ತು ಮೋಸದ ಮೂಲಕ ನಡೆಯುವ ಮತಾಂತರವನ್ನು ತಡೆಯುವುದು ಕಾಯ್ದೆಯ ಪ್ರಮುಖ ಉದ್ದೇಶ ಎಂದು ಕಾನೂನಿನಲ್ಲಿನ ನಿಬಂಧನೆಗಳು ಹೇಳುತ್ತವೆ.

ಕಾಯ್ದೆ ರದ್ದತಿಗೆ ಕ್ರಿಶ್ಚಿಯನ್‌ ಸಂಘಟನೆಗಳ ಒತ್ತಡ
ಮತಾಂತರ ನಿಷೇಧ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಎಂದು ಕ್ರಿಶ್ಚಿಯನ್‌ ಸಂಘಟನೆಗಳು ಹಾಗೂ ಅಲ್ಪಸಂಖ್ಯಾತ ಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.ಬೆಂಗಳೂರಿನ ಆರ್ಚ್‌ಬಿಷಪ್‌ ಪೀಟರ್‌ ಮಚಾಡೊ ನೇತೃತ್ವದ ಕ್ರಿಶ್ಚಿಯನ್‌ ಸಮುದಾಯದ ನಿಯೋಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಕಾಯ್ದೆ ರದ್ದತಿಗೆ ಮಧ್ಯಪ್ರವೇಶಿಸುವಂತೆ ಮನವಿ ಮಾಡಿತ್ತು. ಧಾರ್ಮಿಕ ಸ್ವಾತಂತ್ರ್ಯ ಹಾಗೂ ಧರ್ಮವನ್ನು ಆಚರಿಸುವ ಮತ್ತು ಪ್ರಚಾರ ಮಾಡುವ ಸಂವಿಧಾನಾತಕ ಹಕ್ಕುಗಳ ಮೇಲೆ ಕಾಯ್ದೆ ಪರಿಣಾಮ ಬೀರುತ್ತಿದೆ ಎಂಬ ಆತಂಕವನ್ನು ಸಂಘಟನೆಗಳು ವ್ಯಕ್ತಪಡಿಸಿದ್ದವು.ವಿವಿಧ ಕ್ರಿಶ್ಚಿಯನ್‌ ಮತ್ತು ಅಲ್ಪಸಂಖ್ಯಾತ ಸಂಘಟನೆಗಳು ಕೂಡ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಪಡಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿವೆ.

RELATED ARTICLES

Latest News