Homeರಾಜ್ಯಪಟಾಕಿಯಿಂದ ಬೆಂಗಳೂರಲ್ಲಿ ಹೆಚ್ಚಾಯ್ತು ವಾಯು ಮಾಲಿನ್ಯ

ಪಟಾಕಿಯಿಂದ ಬೆಂಗಳೂರಲ್ಲಿ ಹೆಚ್ಚಾಯ್ತು ವಾಯು ಮಾಲಿನ್ಯ

ಬೆಂಗಳೂರು, ನ.11- ದೀಪಾವಳಿ ಹಬ್ಬ ಕಳೆಯುತ್ತಿದ್ದಂತೆ ಸಿಲಿಕಾನ್‌ ಸಿಟಿಯಲ್ಲಿ ವಾಯುಮಾಲಿನ್ಯ ಮಿತಿ ಮೀರಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದೀಪಾವಳಿ ದಿನ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಪ್ರಮಾಣದಲ್ಲಿ ಭಾರಿ ಏರಿಕೆ ಕಂಡುಬಂದಿದೆ.

ನಗರದ ಹಲವು ಪ್ರದೇಶಗಳಲ್ಲಿ ವಾಯು ತೀವ್ರ ಕೆಳಮಟ್ಟಕ್ಕೆ ಕುಸಿದಿದೆ. 2025ರ ದೀಪಾವಳಿ ದಿನ ಬೆಂಗಳೂರಿನಲ್ಲಿ ಗರಿಷ್ಠ ಎಕ್ಯೂಐ 95ರ ಮಟ್ಟದಲ್ಲಿತ್ತು. ಆದರೆ 2026ರ ದೀಪಾವಳಿ ದಿನ ಈ ಪ್ರಮಾಣ 132ಕ್ಕೆ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ದೀಪಾವಳಿ ಸಂದರ್ಭದಲ್ಲಿ ನಿರಂತರವಾಗಿ ಪಟಾಕಿ ಸಿಡಿಸಿದ್ದರಿಂದ ಗಾಳಿಯಲ್ಲಿ ಹೊಗೆ ಹಾಗೂ ಸೂಕ್ಷ್ಮ ಕಣಗಳ ಪ್ರಮಾಣ ಹೆಚ್ಚಾಗಿ ವಾಯುಮಾಲಿನ್ಯ ತೀವ್ರಗೊಂಡಿದೆ.ಬೆಳಗ್ಗೆಯೇ ಎಕ್ಯೂಐ ಪ್ರಮಾಣ 132ಕ್ಕೆ ಏರಿದೆ. ದೀಪಾವಳಿ ದಿನದ ವಿವಿಧ ಸಮಯಗಳಲ್ಲಿ ದಾಖಲಾದ ಪ್ರಮಾಣವು ವಾಯು ಗುಣಮಟ್ಟದಲ್ಲಿನ ಏರಿಳಿತವನ್ನು ತೋರಿಸಿದೆ. ರಾತ್ರಿ 12 ಗಂಟೆಗೆ 102ರಷ್ಟಿದ್ದ , ಬೆಳಗಿನ ಜಾವ 2 ಗಂಟೆಗೆ 111ಕ್ಕೆ ಏರಿಕೆಯಾಗಿದೆ. ಬಳಿಕ ಬೆಳಗ್ಗೆ 6 ಗಂಟೆಗೆ 124ಕ್ಕೆ ತಲುಪಿದ್ದು, ಬೆಳಗ್ಗೆ 9 ಗಂಟೆಗೆ 132 ದಾಖಲಾಗಿದೆ.

ಪಟಾಕಿಗಳಿಂದ ಹೊರಹೊಮ್ಮುವ ಹೊಗೆ ಮತ್ತು ವಾತಾವರಣದಲ್ಲಿ ಹರಡುವ ಸೂಕ್ಷ್ಮ ಧೂಳಿನ ಕಣಗಳು ವಾಯುಮಾಲಿನ್ಯ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ. ಹೀಗಾಗಿ ಹಬ್ಬದ ಸಂಭ್ರಮದ ನಡುವೆಯೇ ನಗರದ ಗಾಳಿಯ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತವಾಗಿದೆ.

ಸಿಲ್‌್ಕ ಬೋರ್ಡ್‌ನಲ್ಲಿ ಅತಿ ಹೆಚ್ಚು ಮಾಲಿನ್ಯ:ನಗರದ ವಿವಿಧ ಪ್ರದೇಶಗಳ ವರದಿಯನ್ನು ಗಮನಿಸಿದರೆ ಸಿಲ್ಕ್ ಬೋರ್ಡ್‌ನಲ್ಲಿ ಗರಿಷ್ಠ 179 ದಾಖಲಾಗಿದೆ. ಹೊಂಬೇಗೌಡ ನಗರದಲ್ಲಿ 176 ಹಾಗೂ ಹೆಬ್ಬಾಳದಲ್ಲಿ 168 ದಾಖಲಾಗಿದ್ದು, ಈ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಕುಸಿದಿರುವುದು ವರದಿಯಾಗಿದೆ.

ನಗರದ ಇತರ ಪ್ರದೇಶಗಳಲ್ಲೂ ಪ್ರಮಾಣ 100ರ ಗಡಿ ದಾಟಿದೆ. ಜಿಗಣಿಯಲ್ಲಿ 122, ಪೀಣ್ಯದಲ್ಲಿ 120, ಸಾಣೆಗೊರವ ಹಳ್ಳಿಯಲ್ಲಿ 113, ಬಾಪೂಜಿ ನಗರದಲ್ಲಿ 112, ಆರ್‌ವಿಸಿಇ ಮೈಲಸಂದ್ರದಲ್ಲಿ 110 ಹಾಗೂ ಬಿಟಿಎಂ ಲೇಔಟ್‌ನಲ್ಲಿ 109 ದಾಖಲಾಗಿದೆ.

ವಾಯುಮಾಲಿನ್ಯ ಹೆಚ್ಚಾದ ಸಂದರ್ಭದಲ್ಲಿ ಮಕ್ಕಳು, ವೃದ್ಧರು ಹಾಗೂ ಉಸಿರಾಟದ ಸಮಸ್ಯೆ ಇರುವವರು ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಗಾಳಿಯ ಗುಣಮಟ್ಟ ಕುಸಿದಿರುವ ಸಮಯದಲ್ಲಿ ಅನಗತ್ಯವಾಗಿ ಹೊರಾಂಗಣದಲ್ಲಿ ಹೆಚ್ಚು ಸಮಯ ಕಳೆಯುವುದನ್ನು ತಪ್ಪಿಸುವುದು, ಹೊಗೆ ಹೆಚ್ಚಿರುವ ಪ್ರದೇಶಗಳಿಂದ ದೂರವಿರುವುದು ಸೂಕ್ತ.

ಒಟ್ಟಿನಲ್ಲಿ, ದೀಪಾವಳಿಯ ಪಟಾಕಿ ಸಂಭ್ರಮದ ಬೆನ್ನಲ್ಲೇ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಳವಾಗಿರುವುದು ಪರಿಸರದ ಮೇಲಿನ ಪರಿಣಾಮಗಳ ಬಗ್ಗೆ ಮತ್ತೆ ಗಮನ ಸೆಳೆದಿದೆ. ಹಬ್ಬದ ಆಚರಣೆಯ ಜೊತೆಗೆ ವಾಯುಮಾಲಿನ್ಯ ನಿಯಂತ್ರಣಕ್ಕೂ ಆದ್ಯತೆ ನೀಡುವ ಅಗತ್ಯವನ್ನು ಈ ಅಂಕಿಅಂಶಗಳು ಎತ್ತಿ ತೋರಿಸಿವೆ.

RELATED ARTICLES

Latest News