Homeಬೆಂಗಳೂರುಭಾರತ ಹಾಕಿ ತಂಡದ ಮಾಜಿ ನಾಯಕ ಸೋಮಯ್ಯ ಮನೆಯಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಅರೆಸ್ಟ್

ಭಾರತ ಹಾಕಿ ತಂಡದ ಮಾಜಿ ನಾಯಕ ಸೋಮಯ್ಯ ಮನೆಯಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಅರೆಸ್ಟ್

ಬೆಂಗಳೂರು,ನ.11-ಭಾರತ ಹಾಕಿ ತಂಡದ ಮಾಜಿ ನಾಯಕ ಸೋಮಯ್ಯ ಅವರ ಮನೆಯಲ್ಲಿ ಕಳವು ಮಾಡಿಕೊಂಡು ಹೋಗಿದ್ದ ಇಬ್ಬರು ಆರೋಪಿಗಳನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿ ಚಿನ್ನ, ಬೆಳ್ಳಿ ಪದಕಗಳು ಸೇರಿದಂತೆ 8 ಅಂತರಾಷ್ಟ್ರೀಯ ಪದಕಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾಣಿಕ್ಯ ಅಲಿಯಾಸ್‌‍ ಮಣಿಕಾಂತ (31) ಮತ್ತು ಭರತ್‌ (25) ಬಂಧಿತ ಆರೋಪಿಗಳು.ಮಾಣಿಕ್ಯನ ವಿರುದ್ಧ ಕರ್ನಾಟಕದಲ್ಲಿ 25 ಪ್ರಕರಣಗಳು ಮತ್ತು ತಮಿಳುನಾಡಿನಲ್ಲಿ ಎಂಟು ಪ್ರಕರಣಗಳು ದಾಖ ಲಾಗಿವೆ. ಈತನ ವಿರುದ್ಧ 3 ಪ್ರೋಕ್ಲೋನೇಶನ್‌, ಆರು ಎನ್‌ಬಿಡಬ್ಲ್ಯೂ ಹೊರಡಿಸಲಾಗಿದೆ. ಆರೋಪಿ ಭರತ್‌ ವಿರುದ್ಧ 2 ಪ್ರಕರಣಗಳು ದಾಖಲಾಗಿವೆ. ಈ ಇಬ್ಬರು ಆರೋಪಿಗಳು ಬೆಂಗಳೂರು ನಗರದ ನಿವಾಸಿಗಳು.

ಬಿಎಲ್‌ಕಾವಲ್‌ನ 4ನೇ ಕ್ರಾಸ್‌‍ನಲ್ಲಿ ಸೋಮಯ್ಯ ಅವರು ವಾಸವಾಗಿದ್ದು, ಕುಟುಂಬ ಸಮೇತ ಕೊಡಗು ಜಿಲ್ಲೆಗೆ ಹೋಗಿದ್ದರು. ಆ ಸಂದರ್ಭದಲ್ಲಿ ಕಳ್ಳರು ಇವರ ಮನೆಯ ಮುಂಬಾಗಿಲಿನ ಬೀಗ ಹೊಡೆದು ಒಳನುಗ್ಗಿ ಅಂತರಾಷ್ಟ್ರೀಯ ಕ್ರೀಡೆಗಳಿಗೆ ಸಂಬಂಧಿಸಿದ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳ ಜೊತೆ ಚಿನ್ನಾಭರಣಗಳನ್ನು ಮತ್ತು ಹಣ ಕಳವು ಮಾಡಿಕೊಂಡು ಪರಾರಿಯಾಗಿದ್ದರು.
ಸೋಮಯ್ಯ ಅವರ ಕುಟುಂಬ ವಾಪಸ್ಸಾದಾಗ ಮನೆಯಲ್ಲಿ ಕಳ್ಳತನವಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಅವರು ಪೊಲೀ ಸರಿಗೆ ದೂರು ನೀಡಿದ್ದಾರೆ.

ಆರೋಪಿಗಳ ಪತ್ತೆಗಾಗಿ 65 ಮಂದಿ ಸಿಬ್ಬಂದಿ ಮತ್ತು ಅಧಿಕಾರಿಗಳನ್ನೊಳಗೊಂಡ ಎಂಟು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ತಂಡವು ವಿವಿಧ ಆಯಾಮಗಳಲ್ಲಿ ಕಾರ್ಯಾಚರಣೆ ಕೈಗೊಂಡು ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿವೆ. ಖಚಿತ ಮಾಹಿತಿ ಮೇರೆಗೆ ರಾಮನಗರದ ಹಾಗಲಹಳ್ಳಿ ಕ್ರಾಸ್‌‍ ಬಳಿ ಇಬ್ಬರು ಆರೋಪಿಗಳನ್ನು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಸಮೇತ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಮತ್ತೊಬ್ಬ ಸ್ನೇಹಿತನೊಂದಿಗೆ ಸೇರಿ ಕಳವು ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ.

ಆರೋಪಿಗಳನ್ನು ಠಾಣೆಗೆ ಕರೆದೊಯ್ದು ಸುದೀರ್ಘ ವಿಚಾರಣೆಗೆ ಒಳಪಡಿಸಲಾಗಿ, ಕಳವು ಮಾಡಿದ್ದ ಪದಕಗಳ ಪೈಕಿ ಒಂದು ಚಿನ್ನದ ಪದಕ ಮತ್ತು 1 ಬೆಳ್ಳಿ ಪದಕಗಳನ್ನು ರಾಜಾಜಿನಗರದ ಗೋಲ್‌್ಡ ಕಂಪನಿಯೊಂದರಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ಅದರಂತೆ ಪೊಲೀಸರು ಆ ಕಂಪನಿಯಿಂದ 2 ಪದಕಗಳನ್ನು ವಶಕ್ಕೆ ಪಡೆದಿದ್ದಾರೆ.

ಉಳಿದ ಪದಕಗಳನ್ನು ಆರೋಪಿ ಯೊಬ್ಬನ ಹೊಸಕೋಟೆಯ ಹೆಚ್‌ ಕ್ರಾಸ್‌‍ ಬಳಿಯ ವಾಸದ ಮನೆಯಲ್ಲಿಟ್ಟಿರುವುದಾಗಿ ತಿಳಿಸಿದ್ದು, ಅದರಂತೆ ಪೊಲೀಸರು ಅಲ್ಲಿಗೆ ತೆರಳಿ ಆರು ಪದಕಗಳು, ಒಂದು ಬೆಳ್ಳಿಯ ಕೊಡಗಿನ ಕತ್ತಿ, ಒಂದು ಕ್ಯಾಮೆರಾ, ಒಲಂಪಿಕ್‌ ಬ್ಯಾಗ್‌ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬನ ಪತ್ತೆಕಾರ್ಯ ಮುಂದುವರೆದಿದ್ದು, ತನಿಖೆ ಪ್ರಗತಿಯಲ್ಲಿದೆ.

RELATED ARTICLES

Latest News