Homeರಾಜ್ಯಉಗ್ರರ 'ಸೇಫ್‌ ಹೌಸ್‌' ಆಗುತ್ತಿದೆಯಾ ಕರ್ನಾಟಕ…?

ಉಗ್ರರ ‘ಸೇಫ್‌ ಹೌಸ್‌’ ಆಗುತ್ತಿದೆಯಾ ಕರ್ನಾಟಕ…?

Is Karnataka becoming a safe house for terrorists...?

ಬೆಂಗಳೂರು, ಆ.15- ವಿಶ್ವಮಾನವ ಕುವೆಂಪು ಅವರ ಕನಸಿನ ವಿಶ್ವಶಾಂತಿಯ ತೋಟವಾಗಿದ್ದ ಕರ್ನಾಟಕ ಉಗ್ರಗಾಮಿಗಳ ಸ್ಲೀಪರ್‌ ಸೆಲ್‌ ಆಗುತ್ತಿದೆಯೇ? ಹೌದು… ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಗಮನಿಸಿದರೆ ಅದು ನಿಜ ಎನಿಸುತ್ತಿದೆ.

ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಶಾಂತಿಯ ತವರೂರಂತೆ ಇದ್ದ ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ಉಗ್ರರ ಹೆಜ್ಜೆ ಗುರುತುಗಳು ಕಾಣಿಸಿಕೊಳ್ಳತೊಡಗಿವೆ. ಕೇಂದ್ರ ಗುಪ್ತದಳದ ಸೂಚನೆ ಮೇರೆಗೆ ಪೊಲೀಸರು ಬೆಂಗಳೂರು ನಗರ ಸೇರಿದಂತೆ ಇತರ ಭಾಗಗಳಲ್ಲಿ ಐದು ಮಂದಿ ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ತುಮಕೂರಿನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಶಂಕಿತ ಉಗ್ರನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ದಾವಣಗೆರೆಯಲ್ಲಿ ಮತ್ತೊಬ್ಬ ಶಂಕಿತ ಇರುವ ಬಗ್ಗೆ ಮಾಹಿತಿ ದೊರೆತಿತ್ತು.ಅದರಂತೆ ತುಮಕೂರು ಹಾಗೂ ದಾವಣಗೆರೆ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಶಂಕಿತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಹಲವು ವಿಧ್ವಂಸಕ ಕೃತ್ಯಗಳ ಬಗ್ಗೆ ಆತ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ನಂತರ ರಾಯಚೂರಿನ ಸದರ್‌ ಬಜಾರ್‌ ಠಾಣೆ ಪೊಲೀಸರಿಗೆ ಬಂದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಟೀ ಅಂಗಡಿ ನಡೆಸುತ್ತಿದ್ದ ಶಂಕಿತ ಉಗ್ರನೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆತ ದೇಶದಲ್ಲಿ ಗಲಭೆ ಸೃಷ್ಟಿಸಲು ಶತ್ರು ರಾಷ್ಟ್ರದ ಉಗ್ರರ ಜೊತೆ ಸೇರಿಕೊಂಡು ಸಂಚು ರೂಪಿಸಿದ್ದನೆಂದು ತಿಳಿದುಬಂದಿದೆ.

ತದನಂತರ ಕಲಬುರಗಿ ನಗರದ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಉತ್ತರ ಪ್ರದೇಶದ ಮಹಮದ್‌ ಸಮೀರ್‌ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಆತ ಕೂಡ ಬೆಚ್ಚಿಬೀಳಿಸುವ ಹಲವು ರೋಚಕ ಹಾಗೂ ಆಘಾತಕಾರಿ ವಿಚಾರಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ. ಈತ ಉತ್ತರ ಪ್ರದೇಶದಿಂದ ಬಂದು ಕಲಬುರಗಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ವಿದೇಶಿ ಉಗ್ರರ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಸ್ವಾತಂತ್ರ್ಯೋತ್ಸವದ ಮುನ್ನಾದಿನ ಬೆಂಗಳೂರು ನಗರದ ಹೆಬ್ಬಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ಬೊಮ್ಮಸಂದ್ರದ ಕೈಗಾರಿಕಾ ಪ್ರದೇಶದಲ್ಲಿ ಅಡಗಿದ್ದ ತಾಲಿಬಾನ್‌ ಶಂಕಿತ ಉಗ್ರ ಅಸಾಫೂಲ್‌ ಮಲ್ಲಿಕ್‌ (25) ಎಂಬಾತನನ್ನು ಬಂಧಿಸುವುದರೊಂದಿಗೆ ರಾಜ್ಯದಲ್ಲೂ ಉಗ್ರರ ಹೆಜ್ಜೆ ಗುರುತುಗಳು ಕಾಣಿಸಿಕೊಳ್ಳುತ್ತಿರುವುದು ರಾಜ್ಯ ಉಗ್ರರ ಸ್ಲೀಪರ್‌ ಸೆಲ್‌ ಆಗುತ್ತಿದೆಯೇ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಬಂಧಿತ ಶಂಕಿತ ಉಗ್ರ ಪಶ್ಚಿಮ ಬಂಗಾಳದವನಾಗಿದ್ದು, ಬೊಮ್ಮಸಂದ್ರದ ಕೈಗಾರಿಕಾ ಪ್ರದೇಶದಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡಿಕೊಂಡಿದ್ದ. ಉಗ್ರಗಾಮಿಗಳ ಜೊತೆ ನಿಕಟ ಸಂಪರ್ಕವಿಟ್ಟುಕೊಂಡು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದ ಎಂಬುದು ಪೊಲೀಸರ ವಿಚಾರಣೆಯಿಂದ ಬಯಲಾಗಿದೆ.

ಹೊಟ್ಟೆಪಾಡಿಗಾಗಿ ಬೇರೆ ಬೇರೆ ರಾಜ್ಯಗಳಿಂದ ಇಲ್ಲಿಗೆ ಬಂದಿರುವ ಯುವಕರು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಗಾರೆ ಕೆಲಸ, ಸೆಕ್ಯೂರಿಟಿ ಗಾರ್ಡ್‌, ಬಟ್ಟೆ ವ್ಯಾಪಾರ, ಮಾಂಸದಂಗಡಿಗಳಲ್ಲಿ ಕೆಲಸ ಹೀಗೆ ಹಲವಾರು ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಉಗ್ರರ ಜೊತೆ ನಂಟು ಬೆಳೆಸಿಕೊಳ್ಳುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಪೊಲೀಸರ ಕಾರ್ಯಾಚರಣೆ ವೇಳೆ ಐದು ಮಂದಿ ಶಂಕಿತ ಉಗ್ರರು ಮಾತ್ರ ಸಿಕ್ಕಿಬಿದ್ದಿದ್ದಾರೆ. ಇನ್ನೆಷ್ಟು ಮಂದಿ ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಅಡಗಿಕುಳಿತಿದ್ದಾರೋ ಆ ದೇವರೇ ಬಲ್ಲ.

ಇದುವರೆಗೂ ಶಾಂತಿಯ ತೋಟದಂತಿರುವ ನಮ್ಮ ರಾಜ್ಯದಲ್ಲಿ ಮತ್ತೆ ಅಶಾಂತಿ ಸೃಷ್ಟಿಯಾಗಬಾರದು ಎಂದರೆ, ದೇಶದಲ್ಲೇ ನಂಬರ್‌ ಒನ್‌ ಪೊಲೀಸರೆಂದು ಬಿಂಬಿಸಿಕೊಂಡಿರುವ ನಮ್ಮ ಪೊಲೀಸರು ವಿಷಕಾರಿ ಹಾವುಗಳಂತೆ ಹುತ್ತದೊಳಗೆ ಅಡಗಿ ಕುಳಿತಿರುವ ವಿದ್ರೋಹಿಗಳನ್ನು ಪತ್ತೆಹಚ್ಚಿ ಬಂಧಿಸಿ ಹೆಡೆಮುರಿ ಕಟ್ಟಬೇಕು ಎನ್ನುವುದು ಈ ಲೇಖನದ ಉದ್ದೇಶವಾಗಿದೆ.

RELATED ARTICLES
spot_img

Latest News