Homeರಾಜ್ಯಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬೇಟೆಗಾರರು ಬಲಿ, ರೊಚ್ಚಿಗೆದ್ದ ಗ್ರಾಮಸ್ಥರಿಂದ ಕಚೇರಿ ಮೇಲೆ ದಾಳಿ

ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬೇಟೆಗಾರರು ಬಲಿ, ರೊಚ್ಚಿಗೆದ್ದ ಗ್ರಾಮಸ್ಥರಿಂದ ಕಚೇರಿ ಮೇಲೆ ದಾಳಿ

Three poachers killed in encounter with forest personnel in K’taka

ಕೊಳ್ಳೇಗಾಲ/ಹನೂರು, ಆ.15- ಅರಣ್ಯ ಸಿಬ್ಬಂದಿ ಮತ್ತು ಕಳ್ಳಬೇಟೆಗಾರರ ನಡುವೆ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಕಳ್ಳಬೇಟೆಗಾರರು ಗುಂಡಿಗೆ ಬಲಿಯಾಗಿರುವ ಘಟನೆ ಹನೂರು ತಾಲ್ಲೂಕಿನ ಶಾಗ್ಯ ಗ್ರಾಮದ ಸಮೀಪದ ಮರಿಯಮಂಗಲ ಬೀಟ್‌ನಲ್ಲಿ ನಡೆದಿದೆ.

ಅರಣ್ಯ ಇಲಾಖೆಯ ಸಿಬ್ಬಂದಿಯ ಗುಂಡಿನ ದಾಳಿಯಲ್ಲಿ ಮರಿಯಮಂಗಲ ಗ್ರಾಮದ ಅಂತೋಣಿ (50), ಜಗನ್ನಾಥದೊಡ್ಡಿ ಗ್ರಾಮದ ಜೋಸೆಫ್‌ ಪೀಟರ್‌ (42) ಮತ್ತು ಲಾಸರದೊಡ್ಡಿ ಗ್ರಾಮದ ಕುಮಾರ್‌ (33) ಗುಂಡಿಗೆ ಬಲಿಯಾದ ಕಾಡುಗಳ್ಳರು. ಕಾರ್ಯಾಚರಣೆ ವೇಳೆ ಒಬ್ಬಾತ ಪರಾರಿಯಾಗಿದ್ದಾನೆ.

ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿ ವಲಯದ ಶಾಗ್ಯ ಅರಣ್ಯ ಪ್ರದೇಶದ ಮರಿಯಮಂಗಲ ಬೀಟ್‌ನಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ನಾಲ್ವರು ಬೇಟೆಗಾಗಿ ರಾತ್ರಿ ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ಈ ವೇಳೆ ಮರಿಯಮಂಗಲದಲ್ಲಿ ಕರ್ತವ್ಯದಲ್ಲಿದ್ದ ಅರಣ್ಯ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಇವರ ಕಣ್ಣಿಗೆ ಬಿದ್ದಿದ್ದಾರೆ.

ಅಕ್ರಮ ಬೇಟೆಗಾರರನ್ನು ಕಂಡ ಅರಣ್ಯ ಸಿಬ್ಬಂದಿ ಅವರನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳುವ ಭರದಲ್ಲಿ ಕಳ್ಳಬೇಟೆಗಾರರು ಗಾರ್ಡ್‌ಗಳ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಅರಣ್ಯ ಸಿಬ್ಬಂದಿ ಪ್ರತಿದಾಳಿ ನಡೆಸಿದಾಗ ಗುಂಡು ತಗುಲಿ ಮೂವರು ಕಳ್ಳಬೇಟೆಗಾರರು ಬಲಿಯಾಗಿದ್ದಾರೆ.

ಈ ಮೂವರ ಮೃತದೇಹಗಳನ್ನು ಕೂಡಲೇ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಕುಟುಂಬಸ್ಥರು ಆಗಮಿಸಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲು ಸಿದ್ಧತೆ ಮಾಡಲಾಗಿದೆ. ಶಾಗ್ಯ ಅರಣ್ಯ ವಲಯ ಅಧಿಕಾರಿ ಮಹದೇವಯ್ಯ, ಬೀಟ್‌ ಫಾರೆಸ್ಟ್‌ ಗಾರ್ಡ್‌ ಸೇರಿದಂತೆ ಇತರ ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಈ ಘಟನೆ ಕಾಡುಗಳ್ಳ ವೀರಪ್ಪನ್‌ ದಾಳಿಗಳನ್ನು ನೆನಪಿಸಿದೆ. ಈ ಹಿಂದೆ ವೀರಪ್ಪನ್‌ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನವೇ ಇಂತಹ ದಾಳಿಗಳನ್ನು ಮಾಡುತ್ತಿದ್ದ. ಹಾಗಾಗಿ ಇವರು ಕಳ್ಳಬೇಟೆಗಾರರೋ ಅಥವಾ ವೀರಪ್ಪನ್‌ ಸಹಚರರೋ ಎಂಬುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನವೇ ಮೂವರು ಅರಣ್ಯ ಇಲಾಖೆಯ ಸಿಬ್ಬಂದಿಯ ಗುಂಡಿನ ದಾಳಿಗೆ ಬಲಿಯಾಗಿರುವುದು ದುರಂತವೇ ಸರಿ.

ಎರಡು ನಾಡ ಬಂದೂಕುಗಳು ವಶಕ್ಕೆ: ಕಾರ್ಯಾಚರಣೆ ವೇಳೆ ಎರಡು ನಾಡ ಬಂದೂಕುಗಳು ಹಾಗೂ ಜಿಂಕೆಯ ಮೃತದೇಹವನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಆರೋಪ:

ಮೂವರು ಕಾಡುಬೇಟೆಗಾರರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಟೆಗಾರರನ್ನು ಮೊದಲು ಸೆರೆ ಹಿಡಿದು, ನಂತರ ಹತ್ತಿರದಿಂದ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಅರಣ್ಯ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆರೋಪಿಸಿದ್ದಾರೆ.

ಆರೋಪ ನಿರಾಕರಣೆ: ಈ ಆರೋಪವನ್ನು ಅರಣ್ಯ ಇಲಾಖೆ ನಿರಾಕರಿಸಿದ್ದು, ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಗುಂಡು ತಗುಲಿ ಸಾವು ಸಂಭವಿಸಿದೆ ಎಂದು ಇಲಾಖೆ ತಿಳಿಸಿದೆ.

ಅರಣ್ಯ ಕಚೇರಿ ಮೇಲೆ ದಾಳಿ: ಗುಂಡೇಟಿನಿಂದ ಮೂವರು ಮೃತಪಟ್ಟಿರುವ ಘಟನೆಯನ್ನು ಖಂಡಿಸಿ ಶಾಗ್ಯದಲ್ಲಿರುವ ಉಪವಲಯ ಅರಣ್ಯಾಧಿಕಾರಿಗಳ ಕಚೇರಿಗೆ ನುಗ್ಗಿದ ಗ್ರಾಮಸ್ಥರು ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಕಚೇರಿಯೊಳಗೆ ಕೈಗೆ ಸಿಕ್ಕಿದ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿದ್ದಲ್ಲದೇ, ಕಚೇರಿ ಮುಂದೆ ನಿಲ್ಲಿಸಿದ್ದ ಬೈಕಿಗೂ ಹಾನಿ ಮಾಡಿದ್ದಾರೆ.

ಸೌವ್ಯಾರ್‌ ಪಾಳ್ಯ ಸುತ್ತಮುತ್ತಲ ಗ್ರಾಮಗಳಾದ ಲಾಜರ್‌ದೊಡ್ಡಿ, ಜಗನ್ನಾಥದೊಡ್ಡಿ ಹಾಗೂ ಮರಿಯಮಂಗಲದ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ತನಿಖೆಗೆ ಒತ್ತಾಯ:

ಈ ಪ್ರಕರಣದ ಉನ್ನತ ಮಟ್ಟದ ತನಿಖೆಯಾಗಬೇಕು. ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕು. ಜೊತೆಗೆ ತಲಾ ಒಬ್ಬರಿಗೆ ಉದ್ಯೋಗ ನೀಡಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು. ಪ್ರತಿಭಟನೆಯ ಗಂಭೀರತೆಯನ್ನು ಅರಿತ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ನಿಯಂತ್ರಿಸಲು ಮುಂಜಾಗ್ರತಾ ಕ್ರಮ ಕೈಗೊಂಡು ಗ್ರಾಮಸ್ಥರ ಮನವೊಲಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.

RELATED ARTICLES
spot_img

Latest News