ಬೆಂಗಳೂರು,ಆ.16- ನಾಳೆಯಿಂದ ಮತ್ತೆ ಆರಂಭವಾಗಲಿರುವ ವಿಧಾನಮಂಡಲದ ಉಭಯ ಸದನಗಳ ಕಲಾಪವು ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವಿನ ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ವಾಲೀಕಿ ಮಹರ್ಷಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣವನ್ನು ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಬಿಜೆಪಿ, ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡೂ ಕಡೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿದೆ.
ವಾಲೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಮತ್ತು ದುರುಪಯೋಗ ಆರೋಪಗಳು ಈಗಾಗಲೇ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದವು.ವಾಲೀಕಿ ನಿಗಮದ ಬಹುಕೋಟಿ ಹಣ ದುರುಪಯೋಗ ಪ್ರಕರಣ ಹಾಗೂ ಹೈಕೋರ್ಟ್ ಮತ್ತು ತನಿಖಾ ಸಂಸ್ಥೆಗಳ ಕಣ್ಣುತಪ್ಪಿಸಿ ಅಥವಾ ನಿಬಂಧನೆಗಳನ್ನು ಮೀರಿ ದೆಹಲಿಗೆ ತೆರಳಿರುವ ಆರೋಪಗಳನ್ನು ಮುನ್ನೆಲೆಗೆ ತಂದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕೇಸರಿ ಪಡೆ ಸಜ್ಜಾಗಿದೆ.
ನ್ಯಾಯಾಲಯದ ಷರತ್ತುಗಳನ್ನು ಉಲ್ಲಂಘಿಸಿ ದೆಹಲಿಗೆ ಹೋಗಿ ಬಂದಿದ್ದಾರೆಂಬ ದಾಖಲೆಗಳು ಪ್ರತಿಪಕ್ಷಗಳ ಕೈಗೆ ಸಿಕ್ಕಿದ್ದು, ಅಧಿವೇಶನದಲ್ಲಿ ಸರ್ಕಾರದ ನೈತಿಕತೆಯನ್ನು ಪ್ರಶ್ನಿಸಲು ಇದು ಪ್ರಮುಖ ಅಸ್ತ್ರವಾಗಲಿದೆ.
ಸಚಿವರಾಗಿರುವ ನಾಗೇಂದ್ರ ಅವರು ಕೂಡಲೇ ತಮ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು ಎಂದು ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡೂ ಕಡೆಗಳಲ್ಲಿ ಸರ್ಕಾರದ ವಿರುದ್ಧ ಮುಗಿಬೀಳಲು ಬಿಜೆಪಿ ಶಾಸಕಾಂಗ ಪಕ್ಷ ಸಂಪೂರ್ಣ ಸಿದ್ಧತೆ ನಡೆಸಿದೆ. ಪ್ರಕರಣದ ತನಿಖೆ, ಹೊಣೆಗಾರಿಕೆ ನಿಗದಿ ಹಾಗೂ ಸಚಿವರ ರಾಜೀನಾಮೆ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಸದನದೊಳಗೆ ನಿರಂತರ ಒತ್ತಡ ಹೇರುವ ತಂತ್ರ ರೂಪಿಸಿದೆ.
ಇದಕ್ಕೆ ಮತ್ತಷ್ಟು ರಾಜಕೀಯ ಬಲ ನೀಡಲು ಬಿಜೆಪಿ, ಸಚಿವ ನಾಗೇಂದ್ರ ಅವರು ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘಿಸಿ ದೆಹಲಿಗೆ ತೆರಳಿ ಬಂದಿದ್ದಾರೆ ಎಂಬ ಆರೋಪವನ್ನೂ ಮುನ್ನೆಲೆಗೆ ತರುವ ಸಾಧ್ಯತೆ ಇದೆ.ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿಯೇ ಈ ಪ್ರವಾಸ ನಡೆದಿದೆ ಎಂಬ ಆರೋಪವನ್ನು ಪ್ರತಿಪಕ್ಷಗಳು ಪ್ರಶ್ನಿಸುತ್ತಿದ್ದು, ಇದನ್ನೇ ಸರ್ಕಾರದ ವಿರುದ್ಧದ ಮತ್ತೊಂದು ಅಸ್ತ್ರವನ್ನಾಗಿ ಬಳಸಲು ಬಿಜೆಪಿ ಮುಂದಾಗಿದೆ.
ಕಾಂಗ್ರೆಸ್ ವಿರುದ್ಧವೇ ಅಮಿತ್ ಶಾ ಅಸ್ತ್ರ :
ಈ ಬಾರಿ ಬಿಜೆಪಿ ತಂತ್ರದ ಮತ್ತೊಂದು ಪ್ರಮುಖ ಅಂಶವೆಂದರೆ ದೆಹಲಿಯ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ನಡೆದ ಪೊಲೀಸ್ ಲಾಠಿಚಾರ್ಜ್ ಪ್ರಕರಣ.
ಈ ಘಟನೆಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸಿದ್ದ ವಿಚಾರವನ್ನು ಬಿಜೆಪಿ ಇದೀಗ ರಾಜ್ಯದ ಸದನದಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ.
ದೆಹಲಿಯ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿ ರಾಷ್ಟ್ರಮಟ್ಟದಲ್ಲಿ ಹಾಗೂ ಸಂಸತ್ತಿನ ಉಭಯ ಸದನಗಳಲ್ಲಿ (ಲೋಕಸಭೆ ಮತ್ತು ರಾಜ್ಯಸಭೆ) ಕಾಂಗ್ರೆಸ್ ಪಕ್ಷ ಮುಗಿಬಿದ್ದಿತ್ತು. ಅಮಿತ್ ಶಾ ಅವರ ರಾಜೀನಾಮೆ ಅಥವಾ ಸ್ಪಷ್ಟನೆಗೆ ಒತ್ತಾಯಿಸಿ ಕಲಾಪವನ್ನು ಸ್ತಬ್ಧಗೊಳಿಸುವ ತಂತ್ರಗಾರಿಕೆಯನ್ನು ಕಾಂಗ್ರೆಸ್ ರೂಪಿಸಿತ್ತು.
ಈಗ ಅದೇ ರಾಷ್ಟ್ರ ರಾಜಕಾರಣದ ದಾಳವನ್ನು ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ವಿರುದ್ಧವೇ ತಿರುಗಿಸಲು ಬಿಜೆಪಿ ಮುಂದಾಗಿದೆ. ಕೇಂದ್ರ ಗೃಹ ಸಚಿವರ ರಾಜೀನಾಮೆ ಕೇಳಿದ ಕೈ ಪಕ್ಷಕ್ಕೆ ಅದೇ ನೈತಿಕತೆಯ ಅಳಲು ಈಗ ರಾಜ್ಯದಲ್ಲಿ ಮುಳುವಾಗಲಿದೆ ಎಂದು ವಾದಿಸುತ್ತಿರುವ ಬಿಜೆಪಿ, ಸಚಿವ ನಾಗೇಂದ್ರ ಅವರನ್ನು ಸಂಪುಟದಲ್ಲಿ ಮುಂದುವರಿಸುವುದನ್ನು ವಿರೋಧಿಸಿ ಸದನದ ಕಲಾಪ ಸುಗಮವಾಗಿ ನಡೆಯಲು ಅವಕಾಶ ನೀಡದಿರಲು ನಿರ್ಧರಿಸಿದೆ.
ಪ್ರತಿಪಕ್ಷದಲ್ಲಿದ್ದಾಗ ಒಂದು ನಿಲುವು ಅಧಿಕಾರದಲ್ಲಿದ್ದಾಗ ಮತ್ತೊಂದು ನಿಲುವು ಎಂಬ ಆರೋಪವನ್ನು ಕಾಂಗ್ರೆಸ್ ವಿರುದ್ಧ ಮಾಡುವುದು ಬಿಜೆಪಿ ತಂತ್ರದ ಭಾಗವಾಗಬಹುದು.
ಇದರ ಪರಿಣಾಮವಾಗಿ ಸೋಮವಾರದಿಂದ ಆರಂಭವಾಗುವ ಕಲಾಪದಲ್ಲಿ ನಾಗೇಂದ್ರ ರಾಜೀನಾಮೆ ವಿಚಾರವೇ ಪ್ರಮುಖ ಸಂಘರ್ಷದ ಕೇಂದ್ರವಾಗುವ ಸಾಧ್ಯತೆ ಇದೆ. ಪ್ರಶ್ನೋತ್ತರ ಅವಧಿ, ಶೂನ್ಯವೇಳೆ ಸೇರಿದಂತೆ ಕಲಾಪದ ವಿವಿಧ ಹಂತಗಳಲ್ಲಿ ಬಿಜೆಪಿ ಸದಸ್ಯರು ಪ್ರಕರಣವನ್ನು ಪ್ರಸ್ತಾಪಿಸಿ ಸರ್ಕಾರದಿಂದ ಸ್ಪಷ್ಟನೆಗೆ ಒತ್ತಾಯಿಸಬಹುದು.
ಸರ್ಕಾರ ಸಮರ್ಪಕ ಉತ್ತರ ನೀಡದಿದ್ದರೆ ಧರಣಿ, ಘೋಷಣೆ, ಸಭಾತ್ಯಾಗ ಸೇರಿದಂತೆ ವಿವಿಧ ರೀತಿಯ ಪ್ರತಿಭಟನಾ ತಂತ್ರಗಳನ್ನು ಬಿಜೆಪಿ ಅನುಸರಿಸುವ ಸಾಧ್ಯತೆ ಇದೆ.
ವಿಧಾನಸಭೆಯ ಜೊತೆಗೆ ವಿಧಾನ ಪರಿಷತ್ತಿನಲ್ಲಿಯೂ ಇದೇ ವಿಚಾರವನ್ನು ಪ್ರತಿಧ್ವನಿಸುವಂತೆ ಮಾಡುವ ಮೂಲಕ ಸರ್ಕಾರದ ಮೇಲೆ ಎರಡು ಸದನಗಳಿಂದಲೂ ಒತ್ತಡ ಹೇರುವುದು ಪ್ರತಿಪಕ್ಷದ ಉದ್ದೇಶವಾಗಿದೆ.
ನಾಗೇಂದ್ರ ರಾಜೀನಾಮೆ ವಿಚಾರ ಕೇವಲ ಓರ್ವ ಸಚಿವರ ರಾಜೀನಾಮೆಯ ಬೇಡಿಕೆಗೆ ಸೀಮಿತವಾಗದೆ, ಸರ್ಕಾರದ ಆಡಳಿತಾತಕ ಹೊಣೆಗಾರಿಕೆ ಮತ್ತು ಭ್ರಷ್ಟಾಚಾರ ವಿರೋಧಿ ನಿಲುವಿನ ಪರೀಕ್ಷೆಯಾಗಿ ಬಿಜೆಪಿ ಬಿಂಬಿಸಲು ಮುಂದಾಗಿದೆ. ಮತ್ತೊಂದೆಡೆ, ಪ್ರಕರಣ ತನಿಖಾ ಹಂತದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂಬ ನಿಲುವನ್ನು ಸರ್ಕಾರ ಮುಂದಿಟ್ಟುಕೊಂಡು ಪ್ರತಿಪಕ್ಷದ ಆರೋಪಗಳಿಗೆ ಉತ್ತರಿಸುವ ಸಂಭವ ಇದೆ.
ಹಿಂದಿನ ಅಧಿವೇಶನಗಳಲ್ಲಿ ಕಂಡುಬಂದಂತೆ ಈ ಬಾರಿಯೂ ರಾಜಕೀಯ ಆರೋಪ-ಪ್ರತ್ಯಾರೋಪಗಳು ಸದನದ ಕಾರ್ಯಕಲಾಪವನ್ನು ಆವರಿಸುವ ಸಾಧ್ಯತೆ ಇದೆ.
ಅಮಿತ್ ಶಾ ರಾಜೀನಾಮೆ ವಿಚಾರದಲ್ಲಿ ಕಾಂಗ್ರೆಸ್ ಹಿಂದೆ ಅನುಸರಿಸಿದ್ದ ಪ್ರತಿಭಟನಾ ತಂತ್ರವನ್ನೇ ಇದೀಗ ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಬಳಸಲು ಹೊರಟಿರುವುದು ಈ ಅಧಿವೇಶನದ ರಾಜಕೀಯ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಸದನದ ಒಳಗೆ ಮತ್ತು ಹೊರಗೆ ಸಚಿವ ನಾಗೇಂದ್ರ ಅವರ ರಾಜೀನಾಮೆಯನ್ನು ಆಗ್ರಹಿಸಿ ಬಿಜೆಪಿ ನಡೆಸಲಿರುವ ಪ್ರತಿಭಟನೆಯು ಉಭಯ ಸದನಗಳ ಕಲಾಪವನ್ನು ಗದ್ದಲದ ಗೂಡಾಗಿಸುವುದು ಖಚಿತವಾಗಿದ್ದು, ಸದನದಲ್ಲಿ ತೀವ್ರ ಸ್ವರೂಪದ ರಾಜಕೀಯ ಸಂಘರ್ಷ ಏರ್ಪಡುವ ಎಲ್ಲಾ ಸಾಧ್ಯತೆಗಳಿವೆ.
ಹೀಗಾಗಿ ಸೋಮವಾರದಿಂದ ವಿಧಾನಸಭೆ ಹಾಗೂ ವಿಧಾನ ಪರಿಷತ್ನಲ್ಲಿ ನಾಗೇಂದ್ರ ರಾಜೀನಾಮೆಗಾಗಿ ಬಿಜೆಪಿ ನಡೆಸಲಿರುವ ಹೋರಾಟವು ಸರ್ಕಾರದ ವಿರುದ್ಧದ ಸಾಮಾನ್ಯ ಪ್ರತಿಪಕ್ಷದ ಪ್ರತಿಭಟನೆಯಾಗುತ್ತದೆಯೇ, ಅಥವಾ ಸದನದ ಕಲಾಪವನ್ನೇ ಕದಡುವ ಮಟ್ಟಿಗೆ ರಾಜಕೀಯ ಸಂಘರ್ಷ ತೀವ್ರಗೊಳ್ಳುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.
