Homeರಾಜಕೀಯಗೋಲ್ಮಾಲ್ "ಗ್ಯಾರಂಟಿ" : ಶ್ವೇತಪತ್ರ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಆರ್‌.ಅಶೋಕ್‌ ಆಗ್ರಹ

ಗೋಲ್ಮಾಲ್ “ಗ್ಯಾರಂಟಿ” : ಶ್ವೇತಪತ್ರ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಆರ್‌.ಅಶೋಕ್‌ ಆಗ್ರಹ

R. Ashok urges government to release white paper on guarantee schemes

ಬೆಂಗಳೂರು,ಆ.16- ಗ್ಯಾರಂಟಿ ಯೋಜನೆಗಳ ಅಡಿಯಲ್ಲಿ ಇದುವರೆಗೆ ಖರ್ಚಾಗಿರುವ ಪ್ರತಿಯೊಂದು ಪೈಸೆಯ ವಿವರ, ಯೋಜನೆವಾರು ಫಲಾನುಭವಿಗಳ ನಿಖರ ಸಂಖ್ಯೆ ಹಾಗೂ ಹಣ ವರ್ಗಾವಣೆಯ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಶ್ವೇತಪತ್ರವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಒತ್ತಾಯಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯಂತಹ ಮಹತ್ವದ ಸಂದರ್ಭದಲ್ಲಿ ಜನರಿಗೆ ತಪ್ಪು ಅಥವಾ ಪರಸ್ಪರ ಹೊಂದಿಕೆಯಾಗದ ಅಂಕಿ-ಅಂಶಗಳನ್ನು ನೀಡುವುದು ಸರಿಯಲ್ಲ. ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ರಾಜ್ಯದ ಜನರಿಗೆ ಸ್ಪಷ್ಟನೆ ನೀಡಬೇಕು ಮತ್ತು ತಪ್ಪು ಮಾಹಿತಿ ನೀಡಿದ್ದರೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ತಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪೋಸ್ಟ್‌ ಮಾಡಿರುವ ಅವರು, ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಹಾಗೂ ವೆಚ್ಚದ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೀಡಿರುವ ಅಂಕಿ-ಅಂಶಗಳನ್ನು ಪ್ರಶ್ನಿಸಿದ್ದಾರೆ .

ಗೃಹಲಕ್ಷಿ ಯೋಜನೆ ಹಾಗೂ ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ವಿವಿಧ ಅಧಿಕೃತ ಪ್ರಕಟಣೆಗಳು ಮತ್ತು ಮುಖ್ಯಮಂತ್ರಿಗಳ ಕಚೇರಿಯ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಲ್ಲಿ ನೀಡಿರುವ ಅಂಕಿ-ಅಂಶಗಳಿಗೂ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಮುಖ್ಯಮಂತ್ರಿ ಉಲ್ಲೇಖಿಸಿರುವ ಅಂಕಿ-ಅಂಶಗಳಿಗೂ ವ್ಯತ್ಯಾಸವಿದೆ ಎಂದು ಆರೋಪಿಸಿದ್ದಾರೆ.

ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೆಚ್‌.ಎಂ.ರೇವಣ್ಣ ಹಾಗೂ ಉಪಾಧ್ಯಕ್ಷ ದಿನೇಶ್‌ ಗೂಳಿಗೌಡ ಅವರ ಅಧಿಕತ ಪ್ರಕಟಣೆಯಲ್ಲಿ ಗೃಹಲಕ್ಷಿ ಯೋಜನೆಯ ಫಲಾನುಭವಿಗಳ ಸಂಖ್ಯೆ 1.24 ಕೋಟಿ, ಅಂದರೆ 1,24,48,000 ಎಂದು ಉಲ್ಲೇಖಿಸಲಾಗಿದೆ. ಮೇ 25, 2026ರಂದು ಮುಖ್ಯಮಂತ್ರಿಗಳ ಕಚೇರಿಯ ಅಧಿಕೃತ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿಯೂ ಇದೇ ಸಂಖ್ಯೆಯನ್ನು ನೀಡಲಾಗಿತ್ತು ಎಂದು ಆರ್‌.ಅಶೋಕ್‌ ಹೇಳಿದ್ದಾರೆ.

ಆದರೆ, ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಗೃಹಲಕ್ಷಿ ಯೋಜನೆಯ ಫಲಾನುಭವಿಗಳ ಸಂಖ್ಯೆ 1.28 ಕೋಟಿ ಎಂದು ಹೇಳಿದ್ದಾರೆ. ಹೀಗಾಗಿ ಸುಮಾರು ನಾಲ್ಕು ಲಕ್ಷ ಫಲಾನುಭವಿಗಳ ಹೆಚ್ಚಳಕ್ಕೆ ಕಾರಣವೇನು? ಹೆಚ್ಚುವರಿ ಫಲಾನುಭವಿಗಳು ಯಾರು ಮತ್ತು ಅವರ ಖಾತೆಗಳಿಗೆ ಹಣ ಹೇಗೆ ವರ್ಗಾವಣೆಯಾಗಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಶಕ್ತಿ ಯೋಜನೆಯ ವೆಚ್ಚದಲ್ಲೂ ಗೊಂದಲ? :
ಶಕ್ತಿ ಯೋಜನೆಯ ವೆಚ್ಚದ ವಿಚಾರದಲ್ಲಿಯೂ ಸರ್ಕಾರದ ವಿವಿಧ ಅಂಕಿ-ಅಂಶಗಳನ್ನು ಪ್ರಶ್ನಿಸಿದ್ದಾರೆ.ಜೂನ್‌ 11, 2026ರಂದು ಮುಖ್ಯಮಂತ್ರಿಗಳ ಕಚೇರಿಯ ಅಧಿಕೃತ ಎಕ್‌್ಸ ಖಾತೆಯಲ್ಲಿ ಶಕ್ತಿ ಯೋಜನೆಗೆ 19,771 ಕೋಟಿ ರೂ. ವೆಚ್ಚವಾಗಿದೆ ಎಂದು ತಿಳಿಸಲಾಗಿತ್ತು. ಅದಕ್ಕೂ ಮೊದಲು, ಮೇ 25ರಂದು ಕಾಂಗ್ರೆಸ್‌‍ ಸರ್ಕಾರ ಮೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಪ್ರಕಟಿಸಿದ ಮಾಹಿತಿಯಲ್ಲಿ 18,943 ಕೋಟಿ ರೂ. ವೆಚ್ಚವಾಗಿದೆ ಎಂದು ಉಲ್ಲೇಖಿಸಲಾಗಿತ್ತು.

ಆದರೆ, ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಶಕ್ತಿ ಯೋಜನೆಯ ವೆಚ್ಚ 14,875 ಕೋಟಿ ರೂ. ಎಂದು ಹೇಳಿದ್ದಾರೆ. ಒಂದೇ ಯೋಜನೆಗೆ ಸಂಬಂಧಿಸಿದಂತೆ ವಿಭಿನ್ನ ಸಂದರ್ಭಗಳಲ್ಲಿ ಸಾವಿರಾರು ಕೋಟಿ ರೂಪಾಯಿಗಳಷ್ಟು ವ್ಯತ್ಯಾಸದ ಅಂಕಿ-ಅಂಶಗಳು ಹೇಗೆ ಬರುತ್ತಿವೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಆರ್‌.ಅಶೋಕ್‌ ಒತ್ತಾಯಿಸಿದ್ದಾರೆ.

ಯಾರದ್ದು ಸತ್ಯ, ಯಾರದ್ದು ಸುಳ್ಳು? :
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಅಂಕಿ-ಅಂಶಗಳು, ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆಗಳು ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ನೀಡಿರುವ ಮಾಹಿತಿಗಳ ನಡುವೆ ವ್ಯತ್ಯಾಸ ಕಂಡುಬರುತ್ತಿದೆ. ಹೀಗಾಗಿ ಸರ್ಕಾರವೇ ನಿಖರವಾದ ಅಂಕಿ-ಅಂಶಗಳನ್ನು ಜನರ ಮುಂದೆ ಇಡಬೇಕು ಎಂದು ಆರ್‌. ಅಶೋಕ್‌ ಆಗ್ರಹಿಸಿದ್ದಾರೆ.

ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಪ್ರತ್ಯೇಕ ಸಮಿತಿಗಳನ್ನು ರಚಿಸಿ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಲಾಗಿದೆ. ಆದರೆ ಸರ್ಕಾರಿ ಇಲಾಖೆಗಳು ಒಂದು ರೀತಿಯ ಲೆಕ್ಕ ನೀಡಿದರೆ, ಅನುಷ್ಠಾನ ಸಮಿತಿಗಳು ಮತ್ತೊಂದು ರೀತಿಯ ಅಂಕಿ-ಅಂಶ ನೀಡುತ್ತಿವೆ ಎಂಬುದು ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ ಎಂದು ಅವರು ಟೀಕಿಸಿದ್ದಾರೆ.

RELATED ARTICLES
spot_img

Latest News