ನವದೆಹಲಿ, ಆ.17 (ಪಿಟಿಐ)- ಯುಜಿಸಿ-ನೆಟ್ ಮರುಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಕ್ರಮವನ್ನು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಪರೀಕ್ಷೆಯಲ್ಲಿನ ಲೋಪಗಳಿಗೆ ಎನ್‌ಟಿಎ ನಾಯಕತ್ವವನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಅವರು ಎಕ್ಸ್‌ನಲ್ಲಿ ಒತ್ತಾಯಿಸಿದ್ದಾರೆ.
‘ಮೋದಿ ಜಿ, ನಿಮ್ಮ ಎನ್‌ಟಿಎ ಈಗ ಏನು ಮಾಡಿದೆ ಎಂದು ನೋಡಿ’ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಸಮಾಜಶಾಸ್ತ್ರ, ಇಂಗ್ಲಿಷ್ ಮತ್ತು ವಾಣಿಜ್ಯ ವಿಷಯಗಳ ಯುಜಿಸಿ-ನೆಟ್ ಪರೀಕ್ಷೆಗಳನ್ನು ಜೂನ್ 22ರಿಂದ 30ರ ನಡುವೆ ನಡೆಸಲಾಗಿತ್ತು. ಆದರೆ ಸುಮಾರು ಎರಡು ತಿಂಗಳ ಬಳಿಕ, ಪ್ರಶ್ನೆಪತ್ರಿಕೆಗಳಲ್ಲಿ ದೋಷಗಳಿದ್ದು, ಹಳೆಯ ಪ್ರಶ್ನೆಗಳನ್ನು ಪುನರಾವರ್ತಿಸಲಾಗಿದೆ ಎಂಬ ಕಾರಣಕ್ಕೆ ಮೂರು ವಿಷಯಗಳ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ವರ್ಷಗಳಿಂದ ಪರೀಕ್ಷೆಗೆ ಸಿದ್ಧತೆ ನಡೆಸಿದ, ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿದ ಹಾಗೂ ದೂರದ ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸಿದ ಸಾವಿರಾರು ಅಭ್ಯರ್ಥಿಗಳು ಇದೀಗ ಸೆಪ್ಟೆಂಬರ್‌ನಲ್ಲಿ ಮತ್ತೆ ಪರೀಕ್ಷೆ ಬರೆಯಬೇಕಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
‘ಎನ್‌ಟಿಎ ತಪ್ಪು ಮಾಡುತ್ತದೆ, ಆದರೆ ವಿದ್ಯಾರ್ಥಿ ಶಿಕ್ಷೆ ಅನುಭವಿಸುತ್ತಾನೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಾನು ಇದನ್ನು ಕೋಟಾ, ಡೆಹ್ರಾಡೂನ್ ಮತ್ತು ಪ್ರಯಾಗ್‌ರಾಜ್‌ನಲ್ಲಿ ಹೇಳಿದ್ದೇನೆ. ಇದನ್ನು ಹೇಳುತ್ತಲೇ ಇರುತ್ತೇನೆ. ಇದು ಇನ್ನು ಮುಂದೆ ಶಿಕ್ಷಣ ವ್ಯವಸ್ಥೆಯಲ್ಲ. ಇದು ಯುವಕರನ್ನು ಹೊರಹಾಕುವ ಯಂತ್ರವಾಗಿದೆ’ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಈ ವ್ಯವಸ್ಥೆ ವಿದ್ಯಾರ್ಥಿಗಳ ಹಣ, ವರ್ಷಗಳ ಪರಿಶ್ರಮ, ಮಾನಸಿಕ ಆರೋಗ್ಯ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಳ್ಳುತ್ತದೆ. ಪ್ರತಿಯಾಗಿ ಉದ್ಯೋಗವೂ ದೊರೆಯುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ.
‘ಈ ಪ್ರಶ್ನೆಪತ್ರಿಕೆಗಳು ಪರೀಕ್ಷೆಗೂ ಮುನ್ನ ಸೋರಿಕೆಯಾಗಿದ್ದವೇ?’ ಎಂಬ ನೈಜ ಪ್ರಶ್ನೆಗೆ ಎನ್‌ಟಿಎ ಇನ್ನೂ ಉತ್ತರಿಸಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಮೋದಿ ಸರ್ಕಾರದ ಇತರ ಸಂಸ್ಥೆಗಳಂತೆ ಎನ್‌ಟಿಎ ಕೂಡ ತನ್ನ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಇಂತಹ ಪ್ರಕರಣಗಳಲ್ಲಿ ಯಾರ ಮೇಲೂ ಹೊಣೆಗಾರಿಕೆ ನಿಗದಿಯಾಗುವುದಿಲ್ಲ ಎಂದು ಅವರು ಟೀಕಿಸಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಮೊದಲ ಹೆಜ್ಜೆಯಾಗಬೇಕು, ಆದರೆ ಅದು ಕೊನೆಯ ಹೆಜ್ಜೆಯಾಗಬಾರದು. ಎನ್‌ಟಿಎ ನಾಯಕತ್ವವನ್ನೂ ಹೊಣೆಗಾರರನ್ನಾಗಿ ಮಾಡಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
