ಬೆಂಗಳೂರು,ಆ.18- ಶ್ರಾವಣ ಮಾಸದ ಮೊದಲನೇ ಸಂಭ್ರಮದ ಹಬ್ಬ ವರಮಹಾಲಕ್ಷ್ಮಿ ಹಬ್ಬಕ್ಕೆ ರಾಜ್ಯಾದ್ಯಂತ ಭರ್ಜರಿ ಸಿದ್ಧತೆ ನಡೆಯುತ್ತಿದ್ದು, ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟಿದೆ.
ಲಕ್ಷ್ಮಿ ದೇವಿಯನ್ನು ಮನೆ ತುಂಬಿಸಿಕೊಳ್ಳಲು ಮಹಿಳೆಯರು ಕಾತುರದಿಂದ ಕಾಯುತ್ತಿದ್ದು, ಕಳೆದ ಒಂದು ವಾರದಿಂದಲೇ ಹಬ್ಬದ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ.
ಬರದ ಛಾಯೆಯ ನಡುವೆಯೂ ಮಾರುಕಟ್ಟೆಗಳಿಗೆ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿ ಬೀಳುತ್ತಿದ್ದು, ಬೆಲೆಗಳು ಕಣ್ಣು ಕೆಂಪಾಗಿಸಿದೆ.ಹಬ್ಬಗಳ ಸಂದರ್ಭದಲ್ಲಿ ಹೂ, ಹಣ್ಣು, ತರಕಾರಿ, ದಿನಸಿ ಬೆಲೆ ಏರಿಕೆ ಸಾಮಾನ್ಯ. ಆದರೆ ಈ ಬಾರಿ ವರಲಕ್ಷ್ಮಿ ಹಬ್ಬಕ್ಕೆ ಎಲ್ಲವೂ ದುಪ್ಪಟ್ಟಾಗಿದ್ದು, ಗ್ರಾಹಕರಿಗೆ ವರಮಹಾಲಕ್ಷ್ಮಿ ದುಬಾರಿಯಾಗಿದ್ದಾಳೆ.
ಹಬ್ಬಕ್ಕಿನ್ನೇನು ಎರಡೇ ದಿನ ಬಾಕಿ ಉಳಿದಿದ್ದು, ಅಗತ್ಯ ವಸ್ತುಗಳ ಖರೀದಿಯಲ್ಲಿ ಸಾರ್ವಜನಿಕರು ಮಗ್ನರಾಗಿದ್ದಾರೆ. ಬಟ್ಟೆ ಅಂಗಡಿಗಳು, ಗ್ರಂಧಿಗೆ, ಫ್ಯಾನ್ಸಿಸ್ಟೋರ್ಗಳಲ್ಲಿ ಜನವೋ ಜನ. ಮನೆಗಳಲ್ಲಿ ವರಮಹಾಲಕ್ಷ್ಮಿಯನ್ನು ಪ್ರತಿಷ್ಟಾಪನೆಗೆ ಬೇಕಾದ ಸೀರೆ, ಅರಿಶಿನ, ಕುಂಕುಮ, ಲಕ್ಷ್ಮಿದೇವಿಯ ಮುಖವಾಡಗಳು, ಬಳೆ, ಪೂಜಾ ಸಾಮಗ್ರಿ, ಅಲಂಕಾರಿಕ ವಸ್ತುಗಳ ಖರೀದಿ ಜೋರಾಗಿದೆ.
ಈ ಬಾರಿ ಬರದ ಹಿನ್ನೆಲೆಯಲ್ಲಿ ಹೂಗಳ ಬೆಲೆ ಗಗನಕ್ಕೇರಿದ್ದು, ಜನರು ಇಂದಿನಿಂದಲೇ ಖರೀದಿಯಲ್ಲಿ ತೊಡಗಿದ್ದು, ಪ್ರತೀ ಕೆಜಿಗೆ 100 ರಿಂದ 150 ರೂ. ಹೆಚ್ಚಳವಾಗಿದೆ. ಕಳೆದ ವಾರ ಕೆಜಿಗೆ 150 ರಿಂದ 200 ರೂ.ಗೆ ಮಾರಾಟವಾಗುತ್ತಿದ್ದ ಸೇವಂತಿಗೆ ಇಂದು 300 ರಿಂದ 350 ರೂ.ವರೆಗೆ ತಲುಪಿದೆ. ಪ್ರತೀ ಕೆಜಿಗೆ ಮಲ್ಲಿಗೆ 400 ರೂ., ಕನಕಾಂಬರ 1200 ರೂ., ಸುಗಂಧರಾಜ 200., ಗುಲಾಬಿ 150 ರೂ., ಜೋಡಿ ಕಮಲ 150 ರೂ. ಗೆ ಮಾರಾಟವಾಗುತ್ತಿದೆ.
ಗಗನಕ್ಕೇರಿದ ಏಲಕ್ಕಿ ಬಾಳೆ :
ಕಳೆದ ಕೆಲವು ತಿಂಗಳುಗಳಿಂದ ಏಲಕ್ಕಿ ಬಾಳೆಹಣ್ಣಿನ ಬೆಲೆ ಏರುತ್ತಲೇ ಇದ್ದು, ಹಬ್ಬದ ಹಿನ್ನೆಲೆಯಲ್ಲಿ ಕೆಜಿಗೆ 150 ರೂ. ತಲುಪಿದೆ. ಬರದ ಹಿನ್ನೆಲೆಯಲ್ಲಿ ಇಳುವರಿ ಕುಂಠಿತವಾಗಿ ಮಾರುಕಟ್ಟೆಗೆ ಗುಣಮಟ್ಟದ ಬಾಳೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಬಾಳೆಹಣ್ಣು, ಬಾಳೆಕಾಯಿ ಬಾರದಿರುವುದರಿಂದ ಬೆಲೆ ಏರಿಕೆಗೆ ಕಾರಣವಾಗಿದೆ.
ತೆಂಗಿನಕಾಯಿ ದುಬಾರಿ :
ಕಳೆದ ಕೆಲವು ತಿಂಗಳುಗಳಿಂದ ಕಡಿಮೆಯಾಗಿದ್ದ ತೆಂಗಿನಕಾಯಿ ಮತ್ತೆ ಏರಿಕೆಯಾಗಿದ್ದು, ಒಂದಕ್ಕೆ 30 ರೂ.ಗಳಿಂದ 35 ರೂ.ವರೆಗೆ ಮಾರಾಟವಾಗುತ್ತಿದ್ದ ತೆಂಗಿನಕಾಯಿ ಕಳೆದ ವಾರದಿಂದ ಜೋಡಿಗೆ 100 ರೂ.ಗೆ ಮಾರಾಟವಾಗುತ್ತಿದೆ. ಅದರಲ್ಲೂ ಕಳಸದ ತೆಂಗಿನಕಾಯಿಗಂತೂ ಭಾರೀ ಬೇಡಿಕೆ ಬಂದಿದೆ.ಅಡಿಕೆ, ವೀಳ್ಯದೆಲೆ, ಹಣ್ಣು ಹಾಗೂ ದಿನಸಿ ಪದಾರ್ಥಗಳ ಬೆಲೆಯೂ ಸಹ ಗಗನಕ್ಕೇರಿದ್ದು, ಮಧ್ಯಮ ವರ್ಗದವರಿಗೆ ವರಮಹಾಲಕ್ಷ್ಮಿ ಹಬ್ಬ ಭಾರೀ ಹೊರೆಯಾಗಿ ಪರಿಣಮಿಸಿದೆ.
