ಬೆಂಗಳೂರು, ಆ.18- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಲ್ಲಿ ಇತ್ತೀಚೆಗೆ ಆಗಿರುವ ಸ್ವಭಾವದ ಬದಲಾವಣೆ ಕುರಿತು ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಸ್ವಾರಸ್ಯಕರ ಚರ್ಚೆ ನಡೆಯಿತು.ನಾನು ಅಧಿಕಾರ ದುರುಪಯೋಗ ಪಡಿಸಿಕೊಂಡು ಯಾರಿಗೂ ತೊಂದರೆ ಕೊಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಂತೆ, ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸದಸ್ಯರು, ನೀವು ಉದಾರಿಗಳು, ತೊಂದರೆ ಕೊಡುವುದಿಲ್ಲ. ಆದರೆ ನಿಮ ಸಂಪುಟದಲ್ಲಿ ತೊಂದರೆ ಕೊಡಲು ಬಹಳಷ್ಟು ಜನರಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರು ಶಿವಕುಮಾರ್, ಅವರನ್ನು ಉದ್ದೇಶಿಸಿ ಮಾತನಾಡಿ, ನೀವು ವೇದಾಂತಿಯಾಗಿ ಬಿಡಿ. ನಿಮ ನಡವಳಿಕೆ ಆಡಳಿತಕ್ಕೆ ಹೊಂದಾಣಿಕೆಯಾಗುತ್ತಿಲ್ಲ. ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟು ವೇದಾಂತಿಯಾಗಿ ಬಿಡಿೞೞ ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದಕ್ಕೆ ಧ್ವನಿಗೂಡಿಸಿದ ಅರಗ ಜ್ಞಾನೇಂದ್ರ ಅವರು ಮುಖ್ಯಮಂತ್ರಿಯಾಗುವ ಮೊದಲು ಮತ್ತು ನಂತರ ಡಿ.ಕೆ.ಶಿವಕುಮಾರ್ ಅವರಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಇದು ಹೇಗೆ ಸಾಧ್ಯ?ೞೞ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬದಲಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬಳಿಕ ಬಂದಿದೆ ಎಂದು ಬಿಜೆಪಿ ಸದಸ್ಯರು ತಳಕು ಹಾಕಿದರು. ಈ ವೇಳೆ ಸುನಿಲ್ ಕುಮಾರ್ ಅವರು, ಸಮಸ್ತೇ ಸದಾ ವತ್ಸಲೆ ಎಂದು ಹೇಳಿ ಸಾಕಷ್ಟು ಬದಲಾಗಿದ್ದಾರೆ. ಆ ಗೀತೆಯನ್ನೂ ಪೂರ್ತಿ ಹೇಳಿದ್ದರೆ ಇನ್ನೂ ಸಾಕಷ್ಟು ಬದಲಾವಣೆಯಾಗುತ್ತಿತ್ತು ಎಂದರು.
ಬಿಜೆಪಿ ಸದಸ್ಯರ ಮಾತಿಗೆ ನಗುತ್ತಲೇ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ನೀವೆಲ್ಲಾ ಸೇರಿ ನನಗೆ ಏನೋ ಮಾಡುತ್ತೀರಾ ಎಂದು ಹಾಸ್ಯ ಚಟಾಕಿ ಹಾರಿಸಿದರು.ಮುಂದುವರಿದು ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಾನು 135 ಮಂದಿ ಕಾಂಗ್ರೆಸ್ ಶಾಸಕರಿಗೆ ಮಾತ್ರ ಮುಖ್ಯಮಂತ್ರಿಯಲ್ಲ. ಇಲ್ಲಿರುವ ಎಲ್ಲಾ ಶಾಸಕರಿಗೂ ನಾನು ಮುಖ್ಯಮಂತ್ರಿ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಕೈಜೋಡಿಸಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ, ಈ ಒಗ್ಗಟ್ಟು ಅನುದಾನ ಹಂಚಿಕೆಯಲ್ಲೂ ಇರಲಿ ಎಂದು ಚುಟುಕಾಗಿ ಹೇಳಿದರು. ಹಿಂದಿನ ಸಂಫ್ರದಾಯಗಳನ್ನು ಪಾಲಿಸುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದರು.ಇದರೊಂದಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬದಲಾದ ಸ್ವಭಾವ, ಆಡಳಿತ ಶೈಲಿ ಮತ್ತು ಪಕ್ಷಾತೀತವಾಗಿ ಕೆಲಸ ಮಾಡುವ ಅವರ ಹೇಳಿಕೆಗಳು ವಿಧಾನಸಭೆಯಲ್ಲಿ ಕೆಲಕಾಲ ನಗೆ ಮತ್ತು ಸ್ವಾರಸ್ಯಕ್ಕೆ ಕಾರಣವಾದವು.
