ಚಾಮರಾಜನಗರ,ಆ.19- ಕಾವೇರಿ ವನ್ಯಜೀವಿ ಧಾಮದಲ್ಲಿ ಇತ್ತೀಚೆಗೆ ನಡೆದ ಬೇಟೆಗಾರರ ಶೂಟೌಟ್ ಘಟನೆಯ ನಂತರ ದುಷ್ಕರ್ಮಿಗಳು ಅರಣ್ಯ ಇಲಾಖೆಯ ಆರು ಕಳ್ಳಬೇಟೆ ತಡೆ ಶಿಬಿರಗಳನ್ನು ಧ್ವಂಸಗೊಳಿಸಿದ್ದಾರೆ. ಕೊತ್ತನೂರು ವಲಯ ವ್ಯಾಪ್ತಿಗೆ ಬರುವ ಮಿಂಚಿನಾರೆಹಳ್ಳ ಕಳ್ಳಬೇಟೆ ತಡೆ ಶಿಬಿರವನ್ನು ಕಿಡಿಗೇಡಿಗಳು ಡೈನಮೈಟ್ ಹಾಗೂ ಜಿಲೆಟಿನ್ ಕಡ್ಡಿಗಳನ್ನು ಬಳಸಿ ಸ್ಫೋಟ ಮಾಡಿದ್ದಾರೆ. ಸ್ಫೋಟದ ತೀವ್ರತೆಗೆ ಕಟ್ಟಡದ ಗೋಡೆಗಳು ಶಿಥಿಲಗೊಂಡು ಉರುಳಿ ಬಿದ್ದಿದೆ. ಶಿಬಿರದ ಒಳಭಾಗದಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಹೋಗಿವೆ.
ದುಷ್ಕರ್ಮಿಗಳು ತಮಿಳುನಾಡಿನಿಂದ ಕಾವೇರಿ ನದಿ ದಾಟಿ ಬಂದು ಈ ಕೃತ್ಯವೆಸಗಿರಬಹುದೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.ಇದಕ್ಕೂ ಮುನ್ನ ಎರಡು ದಿನಗಳ ಹಿಂದೆಯಷ್ಟೆ ಕಾವೇರಿ ವನ್ಯಧಾಮದ ಹೊಳೆ ಮುರುದಟ್ಟಿ ಶಿಬಿರದ ಮೇಲೂ ಕಿಡಿಗೇಡಿಗಳು ಜಿಲೆಟಿನ್ ಸ್ಫೋಟಿಸಿದ್ದರು.
ಕಳ್ಳಬೇಟೆ ತಡೆ ಶಿಬಿರಗಳು ಹಾಗೂ ಅರಣ್ಯ ಸಿಬ್ಬಂದಿಗಳನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ದಾಳಿಗಳು ನಡೆಯುತ್ತಿರುವುದರಿಂದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಲ್ಲಿ ಭಯ ಉಂಟಾಗಿದೆ.ಈ ಎಲ್ಲಾ ಘಟನೆಗಳ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಎಲ್ಲಾ ಕಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಮೂವರ ಶೂಟೌಟ್ ನಂತರ ರೊಚ್ಚಿಗೆದ್ದ ಸಾರ್ವಜನಿಕರು ಶಾಗ್ಯ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ನುಗ್ಗಿ ಪಿಠೋಪಕರಣಗಳನ್ನು ಧ್ವಂಸ ಮಾಡಿದರು. ನಂತರ ಹನೂರು ಪೊಲೀಸ್ ಠಾಣೆ ಮುಂದೆ ರಸ್ತೆ ತಡೆ, ಪ್ರತಿಭಟನೆ ಮಾಡಿ ಪೊಲೀಸರ ಮೇಲೂ ಸಹ ಹಲ್ಲೆಗೆ ಮುಂದಾಗಿದ್ದರು.
