ಬೆಂಗಳೂರು,ಆ.19- ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣ ಸಂಬಂಧ ಸಚಿವ ಬಿ.ನಾಗೇಂದ್ರ ಅವರು ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ ಪಟ್ಟು ಹಿಡಿದ ಪರಿಣಾಮ ವಿಧಾನಪರಿಷತ್ ಕಲಾಪ ಬಹುತೇಕ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಸಚಿವ ನಾಗೇಂದ್ರ ರಾಜೀನಾಮೆ ನೀಡಬೇಕು. ಇಲ್ಲವೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಪರಿಷತ್ನಲ್ಲಿ ಮುಂದುವರೆದಿದ್ದು, ಸಭಾಪತಿಗಳ ಮನವಿ ಹಾಗೂ ನಡೆಸಿದ ಸಂಧಾನವು ಲ ಕೊಟ್ಟಿಲ್ಲ. ಮುಂದುವರೆದ ಮುಂಗಾರು ಅಧಿವೇಶನದಲ್ಲಿ ಸಂತಾಪ ನಿರ್ಣಯ ಮಂಡನೆ ಮಾಡಿದ ಮೇಲೆ ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಳ್ಳಲು ಮುಂದಾದರು.
ಈ ವೇಳೆ ಬಿಜೆಪಿ ಸದಸ್ಯರು ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಕೊರಳಿಗೆ ಕಪ್ಪು ಶಾಲು ಧರಿಸಿ ಸಚಿವ ನಾಗೇಂದ್ರ ರಾಜೀನಾಮೆ ನೀಡಬೇಕೆಂದು ಸದನದಲ್ಲಿ ಗದ್ದಲ ಎಬ್ಬಿಸಿದರು. ಗದ್ದಲದ ನಡುವೆಯೇ ಸಭಾಪತಿ ಸಲೀಂ ಅವರು, ಈಗಾಗಲೇ ಮೂರು ದಿನ ಕಲಾಪ ವ್ಯರ್ಥವಾಗಿದೆ.
ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಒಂದು ಕಡೆ ಬರಗಾಲ ಮತ್ತೊಂದು ಕಡೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಹಲವು ಸಮಸ್ಯೆಗಳಿವೆ. ಇದರ ಬಗ್ಗೆ ಸದನದಲ್ಲಿ ಅರ್ಥಪೂರ್ಣವಾದ ಚರ್ಚೆಯಾಗಲಿ. ಇಡೀ ರಾಜ್ಯದ ಜನತೆ ಸದನವನ್ನು ಗಮನಿಸುತ್ತಿದ್ದಾರೆ. ಸದಸ್ಯರು ಯಾವ ವಿಷಯವನ್ನು ಚರ್ಚೆ ಮಾಡುತ್ತಾರೆ, ಸರ್ಕಾರ ಏನು ಉತ್ತರ ಕೊಡುತ್ತದೆ? ನಮಗೆ ಪರಿಹಾರ ಸಿಗಲಿದೆಯೇ ಎಂಬ ನಿರೀಕ್ಷೆಯಲ್ಲಿದ್ದಾರೆ.
ನಾನು ಎರಡು ಬಾರಿ ಈಗಾಗಲೇ ಸಭೆ ನಡೆಸಿದ್ದೇನೆ. ಮತ್ತೆ ಮನವಿ ಮಾಡಿಕೊಳ್ಳುತ್ತೇನೆ. ದಯಮಾಡಿ ಪ್ರತಿಪಕ್ಷದ ಸದಸ್ಯರು ಹಠ ಮಾಡದೆ ಸುಗಮವಾಗಿ ಕಲಾಪ ನಡೆಯಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ನಾವು ಸದನಕ್ಕೆ ಅಡ್ಡಿಪಡಿಸುವ ಉದ್ದೇಶ ಇಟ್ಟುಕೊಂಡಿಲ್ಲ. ಸದನದಲ್ಲಿ ಅರ್ಥಪೂರ್ಣವಾದ ಚರ್ಚೆ ನಡೆಯಬೇಕೆಂಬುದು ನಮ ಆಶಯ. ಬರಗಾಲ, ಕೆಪಿಎಸ್ಸಿ, ಬಿಡದಿ, ನೈಸ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆಯಾಗಬೇಕು. ಇದಕ್ಕೆ ನಾವು ಕೂಡ ಸಿದ್ದರಿದ್ದೇವೆ. ನಾವು ಕಲಾಪವನ್ನು ಅಡ್ಡಿಪಡಿಸುತ್ತಿಲ್ಲ. ಆರೋಪಿ ಸ್ಥಾನಲದಲ್ಲಿರುವ ಸಚಿವರು ರಾಜೀನಾಮೆ ನೀಡಬೇಕು ಎಂಬುದು ನಮ ಬೇಡಿಕೆ. ಇದನ್ನು ಸರ್ಕಾರ ಈಡೇರಿಸಿದರೆ ನಮ ಅಭ್ಯಂತರವೇನಿಲ್ಲ. ಸರ್ಕಾರವು ಮೊಂಡು ಹಠ ಬಿಡಲಿ ಎಂದು ಹೇಳಿದರು.
ಈ ಪ್ರಕರಣದಲ್ಲಿ 600 ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ ಎಂದು ಆರೋಪವಿದೆ. ಈಗಾಗಲೇ ಚಾರ್ಜ್ಶೀಟ್ ಕೂಡ ಹಾಕಲಾಗಿದೆ. ಆರೋಪಿ ಸ್ಥಾನದಲ್ಲಿರುವವರು ಸಂಪುಟದಲ್ಲಿ ಮುಂದುವರೆಯಬಾರದು. ಸಭಾಪತಿಗಳ ಸಲಹೆಯನ್ನು ಸಂಪೂರ್ಣವಾಗಿ ನಾವು ಒಪ್ಪುತ್ತೇವೆ. ನೀವು ನೀಡುವ ಆದೇಶಕ್ಕೆ ನಮ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಆಗ ಮಾಜಿ ಸಭಾಪತಿ ಹಾಗೂ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಸದನ ನಡೆಯುತ್ತಿರುವ ರೀತಿ ನನಗೆ ನಾಚಿಕೆಯಾಗುತ್ತಿದೆ. ಇದು ಯಾರಿಗೂ ಶೋಭೆ ತರುವುದಿಲ್ಲ. ಸಭಾಪತಿಗಳು ಹೇಳಿದಂತೆ ಮೊದಲು ಪ್ರಶ್ನೋತ್ತರ ಕಲಾಪ ಮುಗಿಯಲಿ ನಂತರ ಚರ್ಚೆ ಅವಕಾಶ ಕೊಡುತ್ತಾರೆಂದು ಸಲಹೆ ಮಾಡಿದರು.
ಈ ವೇಳೆ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಪರಮೇಶ್ವರ್ ಮಾತನಾಡಿ, ವಿಧಾನಪರಿಷತ್ನ್ನು ಚಿಂತಕರ ಚಾವಡಿ, ಹಿರಿಯರ ಸದನ ಎಂದು ಕರೆಯುತ್ತಾರೆ. ಇಲ್ಲಿ ನಡೆಯುವ ಚರ್ಚೆಗಳು ಕೆಳಮನೆಗೆ ಮೇಲ್ಪಂಕ್ತಿಯಾಗಿವೆ.
ನಾವು ವಿಷಯಗಳನ್ನು ಚರ್ಚೆಯಾಗಬೇಕು. ಬರಗಾಲ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಬೇಕು. 102 ತಾಲ್ಲೂಕುಗಳಲ್ಲಿ ಈ ಬಾರಿ ಬರಗಾಲವಿದೆ. ನಾವು ಕೇಂದ್ರಕ್ಕೆ ಬರ ಪರಿಹಾರ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಈ ಎಲ್ಲದರ ಬಗ್ಗೆ ಚರ್ಚೆ ನಡೆಯುವ ಅಗತ್ಯವಿದೆ.
ಸದನದಲ್ಲಿ ಪ್ರತಿಪಕ್ಷಗಳ ಸದಸ್ಯರು ಚರ್ಚೆ ಮಾಡಿ ಸರ್ಕಾರಕ್ಕೆ ಸಲಹೆಸೂಚನೆಗಳನ್ನು ನೀಡಲಿ. ಆದರೆ ಕಲಾಪ ನಡೆಯಲು ಅಡ್ಡಿಪಡಿಸುವುದು ಸರಿಯಲ್ಲ. ಸಭಾಪತಿಗಳು ಈಗಾಗಲೇ ಸಲಹೆಗಳನ್ನು ನೀಡಿದಂತೆ ಸದನದಲ್ಲಿ ಚರ್ಚೆ ನಡೆಯಲಿ. ನಾವು ಎಲ್ಲದಕ್ಕೂ ಉತ್ತರ ಕೊಡುತ್ತೇವೆ. ನಮ ಉತ್ತರ ನಿಮಗೆ ತೃಪ್ತಿ ತರದಿದ್ದರೆ ಸ್ಪಷ್ಟನೆ ಕೇಳಿ ಎಂದು ಹೇಳಿದರು. ಈ ವೇಳೆ ಜೆಡಿಎಸ್ನ ಟಿ.ಶರವಣ ಅವರು ಹೇಳಿದ ಮಾತೊಂದು ಸದನದ ದಿಕ್ಕು ತಪ್ಪಿಸಿ ಭಾರೀ ಗದ್ದಲ, ಕೋಲಾಹಲ ಸೃಷ್ಟಿಸಿತು. ನಾವು ಎಲ್ಲೂ ಕಲಾಪಕ್ಕೆ ಅಡ್ಡಿಪಡಿಸುತ್ತಿಲ್ಲ. ಸದನದಲ್ಲಿ ಅರ್ಥಪೂರ್ಣವಾದ ಚರ್ಚೆ ನಡೆಯಬೇಕೆಂಬುದು ನಮ ಆಶಯ.
ಆದರೆ ಆರೋಪಿ ಸ್ಥಾನದಲ್ಲಿದ್ದು ನೂರಾರು ಕೋಟಿ ನುಂಗಿ ನೀರು ಕುಡಿದ ಸಚಿವರೊಬ್ಬರನ್ನು ಸಂಪುಟಕ್ಕೆ ತೆಗೆದುಕೊಂಡರೆ ಅದನ್ನು ಸಹಿಸಿಕೊಳ್ಳಬೇಕು ಎಂದು ಪ್ರಶ್ನೆ ಮಾಡಿದರು.ನೂರಾರು ಕೋಟಿ ನುಂಗಿ ನೀರು ಕುಡಿದಿದೆ ಎಂಬ ಶರವಣ ಅವರ ಮಾತು ವಿವಾದದ ಕಿಡಿ ಹೊತ್ತಿಸಿತು. ಆಡಳಿತ ಪಕ್ಷದ ಸದಸ್ಯರು ಈ ಪದವನ್ನು ಕಡತದಿಂದ ತೆಗೆದು ಹಾಕಬೇಕು. ಅವರು ನುಂಗಿ ನೀರು ಕುಡಿದಿದ್ದನ್ನು ನೀವು ನೋಡಿದ್ದೀರಾ? ಯಾವ ಆಧಾರದ ಮೇಲೆ ನೀವು ಆರೋಪ ಮಾಡುತ್ತಾರೆ ಎಂದು ತರಾಟೆಗೆ ತೆಗೆದುಕೊಂಡಿತು.
ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಭಾರೀ ಗದ್ದಲ, ಆರೋಪ, ಪ್ರತ್ಯಾರೋಪಗಳು ನಡೆದು ಸದನದಲ್ಲಿ ಗದ್ದಲ ಉಂಟಾಯಿತು. ಎಲ್ಲಿಗೆ ಹೋಯಿತು? ಎಲ್ಲಿಗೆ ಹೋಯಿತು? ರಾಹುಲ್ ಗಾಂಧಿ ಮನೆಗೆ ಹೋಯಿತು. ವಜಾ ಮಾಡಿ ವಜಾ ಮಾಡಿ ನಾಗೇಂದ್ರ ಅವರನ್ನು ವಜಾ ಮಾಡಿ ಎಂದು ಪ್ರತಿಪಕ್ಷದ ಸದಸ್ಯರು ಆಗ್ರಹಿಸಿದರು.
ರಾಹುಲ್ ಗಾಂಧಿ ಮನೆಗೆ ವಾಲೀಕಿ ಅಭಿವೃದ್ಧಿ ನಿಗಮದ ಹಣ ಹೋಗಿದೆ ಎಂದು ಪ್ರತಿಪಕ್ಷಗಳು ಮಾಡಿದ ಆರೋಪಕ್ಕೆ, ಕಡತಕ್ಕೆ ಹೋಗಬಾರದು, ಮಾಧ್ಯಮಗಳು ಕೂಡ ವರದಿ ಮಾಡಬಾರದೆಂದು ಸಭಾಪತಿ ನಿರ್ದೇಶನ ನೀಡಿದರು. ಇದರಿಂದ ಕೆರಳಿದ ಪ್ರತಿಪಕ್ಷದ ಸದಸ್ಯರು ನೀವು ಮಾಧ್ಯಮಗಳಿಗೆ ನಿರ್ದೇಶನ ನೀಡಬೇಡಿ. ಇದೇನು ಸರ್ವಾಧಿಕಾರಿ ಧೋರಣೆಯೇ ಎಂದು ಪ್ರಶ್ನೆ ಮಾಡಿದರು. ಗದ್ದಲದ ನಡುವೆಯೇ ಪ್ರಶ್ನೋತ್ತರ ಕಲಾಪ ಆರಂಭವಾಯಿತು.
