ಬೆಂಗಳೂರು,ಆ.19- ಊಟದ ವೇಳೆ ಕುಡಿಯಲು ನೀರು ಕೊಡಲಿಲ್ಲವೆಂಬ ಕ್ಷುಲ್ಲಕ ವಿಚಾರಕ್ಕೆ ಇಬ್ಬರು ಕ್ಲೀನರ್‌ಗಳ ನಡುವೆ ಜಗಳ ನಡೆದು ಒಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಆರ್‌ಎಂಸಿಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಆಂಧ್ರಪ್ರದೇಶದ ಹಿಂದೂಪುರ ನಿವಾಸಿ ಬರ್ಕತ್ (35) ಕೊಲೆಯಾದ ಕ್ಲೀನರ್. ಬರ್ಕತ್ ಹಾಗೂ ಮಧುಗಿರಿ ಮೂಲದ ಸೀನಪ್ಪ ಲಾರಿಗಳ ಕ್ಲೀನರ್ ವೃತ್ತಿ ಮಾಡುತ್ತಿದ್ದು, ನಿನ್ನೆ ಅನ್‌ಲೋಡ್ ಮಾಡಿ ಮತ್ತೊಂದು ಲೋಡ್‌ಗಾಗಿ ರಿಂಗ್ ರಸ್ತೆಯ ಮಾರ್ಡ್ರನ್ ಬ್ರೆಡ್ ಸಮೀಪ ಲಾರಿ ನಿಲ್ಲಿಸಿಕೊಂಡು ಕಾಯುತ್ತಿದ್ದರು.
ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಇಬ್ಬರು ಲಾರಿ ಚಾಲಕರು ಹಾಗೂ ಈ ಇಬ್ಬರು ಕ್ಲೀನರ್‌ಗಳು ಲಾರಿಸ್ಟಾಂಡ್‌ನಲ್ಲೇ ಊಟ ಮಾಡಿದ್ದಾರೆ.ಚಾಲಕರು ಊಟ ಮಾಡಿಕೊಂಡು ಲಾರಿಗಳ ಬಳಿ ಹೋಗಿದ್ದಾರೆ. ಕ್ಲೀನರ್‌ಗಳು ಊಟ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಸೀನಪ್ಪ ಕುಡಿಯಲು ನೀರು ಕೊಡುವಂತೆ ಬರ್ಕತ್‌ಗೆ ಕೇಳಿದ್ದಾರೆ. ಆದರೆ ಆತ ನೀರು ಕೊಟ್ಟಿಲ್ಲ. ಇದರಿಂದ ಕೋಪಗೊಂಡ ಸೀನಪ್ಪ ತನ್ನ ಬಳಿ ಇದ್ದ ಚಾಕುವಿನಿಂದ ಬರ್ಕತ್‌ಗೆ ಇರಿದಿದ್ದಾನೆ. ಇವರಿಬ್ಬರ ಕಿರುಚಾಟ ಕೇಳಿ ಲಾರಿ ಚಾಲಕರು ಬಂದು ಜಗಳ ಬಿಡಿಸಿದ್ದಾರೆ.
ತೀವ್ರ ರಕ್ತಸ್ರಾವದಿಂದ ಅಸ್ವಸ್ಥನಾದ ಬರ್ಕತ್‌ನನ್ನು ತಕ್ಷಣ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಪರಿಕ್ಷಿಸಿ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.ಸುದ್ದಿ ತಿಳಿದು ಆರ್‌ಎಂಸಿಯಾರ್ಡ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿ ಸೀನಪ್ಪನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
