ಚಾಮರಾಜನಗರ,ಆ.19- ಬೇಟೆಗಾರರು ಗುಂಡು ಹಾರಿಸಿದ್ದಕ್ಕೆ ಅನಿವಾರ್ಯವಾಗಿ ಪ್ರತಿಯಾಗಿ ಅರಣ್ಯ ಸಿಬ್ಬಂದಿ ಗುಂಡು ಹಾರಿಸಬೇಕಾಗಿತ್ತು ಎಂದು ಆರ್‌ಎಫ್ ಒ ಮರಿಸ್ವಾಮಿ ಅವರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಕರಡಿಕಲ್ ಗುಡ್ಡದ ಬಳಿ ನಡೆದ ಮೂವರು ಬೇಟೆಗಾರರ ಎನ್‌ಕೌಂಟರ್ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟರು.
ಆ.14ರ ರಾತ್ರಿ ಕಾಡಿನಲ್ಲಿ ಗುಂಡಿನ ಶಬ್ದ ಕೇಳಿಬಂತು. ಟಾರ್ಚ್ ಬೆಳಕು ಕೂಡ ಅಲ್ಲಲ್ಲಿ ಕಾಣಿಸಿತು. ಇದರಿಂದ ಬೇಟೆಗಾರರು ಕಾಡಿನಲ್ಲಿ ಬೇಟೆಯಾಡುತ್ತಿರುವ ಮಾಹಿತಿ ನಮ ಸಿಬ್ಬಂದಿಗಳಿಗೆ ಬಂದಿದೆ.
ಅದರಂತೆ ಎರಡು ತಂಡಗಳಾಗಿ ಸಿಬ್ಬಂದಿಗಳು ಕಾಡಿಗೆ ಹೋಗಿ ಶೋಧ ನಡೆಸುತ್ತಿದ್ದರು. ಅಲ್ಲಿ ಬೀಡುಬಿಟ್ಟಿದ್ದ ಕಳ್ಳ ಬೇಟೆಗಾರರನ್ನು ನಮ ಸಿಬ್ಬಂದಿಗಳು ನೋಡಿ ಶರಣಾಗುವಂತೆ ಸೂಚನೆ ನೀಡಿದರು. ಅವರು ಶರಣಾಗುವ ಬದಲು ನಮ ಸಿಬ್ಬಂದಿ ಮೇಲೆಯೇ ನೇರವಾಗಿ ಗುಂಡಿನ ದಾಳಿ ಮಾಡಲು ಮುಂದಾದರು. ಆ ವೇಳೆ ಅನಿವಾರ್ಯವಾಗಿ ನಮ ಸಿಬ್ಬಂದಿ ಪ್ರತಿಯಾಗಿ ಗುಂಡು ಹಾರಿಸಬೇಕಾಯಿತು ಎಂದು ಅವರು ತಿಳಿಸಿದರು.
ಅವರ ಕುಟುಂಬದವರು ಹೇಳುವಂತೆ ಅವರುಗಳು ದನ ಹುಡುಕಲು ಕಾಡಿಗೆ ಬಂದಿರಲಿಲ್ಲ. ಪ್ರಾಣಿಗಳನ್ನು ಬೇಟೆಯಾಡಲೆಂದೇ ಬಂದಿ ದ್ದರು. ಅವರ ಬಳಿ ಆಹಾರ ಸಾಮಾಗ್ರಿಗಳು, ನಾಡ ಬಂದೂಕುಗಳು ಮತ್ತು ಎರಡು ಚೀಲಗಳಲ್ಲಿ ಪ್ರಾಣಿಗಳ ಮಾಂಸ ಇತ್ತು. ಇವುಗಳನ್ನು ನಮ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಸ್ಥಳದಲ್ಲಿ ಸಿಕ್ಕಿರುವ ವಸ್ತುಗಳು ಮತ್ತು ತಮಗೆ ದೊರೆತಿರುವ ಸಾಕ್ಷಿಗಳಿಂದ ಅವರುಗಳು ಪ್ರಾಣಿಗಳ ಬೇಟೆಗೋಸ್ಕರವೇ ಬಂದಿದ್ದರು ಎಂಬುದು ತಿಳಿದು ಬಂದಿದೆ ಎಂದು ಅವರು ತಿಳಿಸಿದ್ದಾರೆ.
