Homeರಾಜ್ಯಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗಲಿದೆ ಕಾಯಿಲೆಗೆ ತಕ್ಕಂತೆ ಊಟ

ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗಲಿದೆ ಕಾಯಿಲೆಗೆ ತಕ್ಕಂತೆ ಊಟ

ಬೆಂಗಳೂರು, ಆ.19- ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ವಯಸ್ಸು, ಖಾಯಿಲೆ ಹಾಗೂ ಚಿಕಿತ್ಸೆಗೆ ಅನುಗುಣವಾಗಿ ವಿಭಿನ್ನ ಮಾದರಿಯ ಪೌಷ್ಟಿಕ ಆಹಾರ ವಿತರಿಸಲಾಗುವುದು.ಸದ್ಯ ಎಲ್ಲ ರೋಗಿಗಳಿಗೂ ಬಹುತೇಕ ಒಂದೇ ಮಾದರಿಯ ಸಾಮಾನ್ಯ ಆಹಾರ ನೀಡಲಾಗುತ್ತಿದ್ದು, ಇದರಲ್ಲಿ ಬದಲಾವಣೆ ತರಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ.

ಸಾಮಾನ್ಯ ರೋಗಿಗಳು, ಚಿಕಿತ್ಸಾ ಆಹಾರದ ಅಗತ್ಯವಿರುವ ರೋಗಿಗಳು, ಗರ್ಭಿಣಿ ಹಾಗೂ ಬಾಣಂತಿಯರು ಮತ್ತು ಮಕ್ಕಳಿಗೆ ಸೇರಿ ಒಟ್ಟು ನಾಲ್ಕು ಮಾದರಿಯ ಆಹಾರ ನೀಡಲು ಇಲಾಖೆ ಚಿಂತನೆ ನಡೆಸಿದೆ. ಈ ಕುರಿತು ಹೊಸ ಆಹಾರ ಮೆನು ಸಿದ್ಧವಾಗಿದ್ದು, ಅಧಿಕೃತ ಅನುಮೋದನೆ ಬಳಿಕ ರಾಜ್ಯಾದ್ಯಂತ ಜಾರಿಗೆ ತರಲು ಉದ್ದೇಶಿಸಲಾಗಿದೆ.

ಆರೋಗ್ಯ ಇಲಾಖೆ ಆಯುಕ್ತ ಗುರುದತ್‌ ಹೆಗ್ಡೆ ಅವರ ಮಾಹಿತಿ ಪ್ರಕಾರ, ಸದ್ಯ ಬೆಂಗಳೂರಿನ ನಾಲ್ಕು ಜನರಲ್‌ ಸರ್ಕಾರಿ ಆಸ್ಪತ್ರೆಗಳಲ್ಲಿ ಇಸ್ಕಾನ್‌ ವತಿಯಿಂದ ಊಟ ಪೂರೈಕೆಯಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೇರೆ ಬೇರೆ ಸಂಸ್ಥೆಗಳಿಗೆ ಆಹಾರ ಪೂರೈಕೆಯ ಟೆಂಡರ್‌ ನೀಡಲಾಗಿದೆ.

ಮುಂದಿನ ದಿನಗಳಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ರೋಗಿಯ ಖಾಯಿಲೆ, ಚಿಕಿತ್ಸೆ ಹಾಗೂ ವಯಸ್ಸಿಗೆ ಅನುಗುಣವಾಗಿ ಆಹಾರ ನೀಡುವ ಬಗ್ಗೆ ಚಿಂತನೆ ನಡೆದಿದೆ. ಇದರ ಜೊತೆಗೆ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಆಹಾರ ಪದ್ಧತಿಗೆ ಅನುಗುಣವಾಗಿ ಮೆನು ರೂಪಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಈ ವರ್ಷದ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಹೊಸ ಮೆನು ಜಾರಿಗೆ ಬರುವ ಸಾಧ್ಯತೆ ಇದ್ದು, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ದಿನಕ್ಕೆ ಮೂರು ಬಾರಿ ಊಟ, ಟೀ-ಕಾಫಿ

ಹೊಸ ಮೆನು ಪ್ರಕಾರ ರೋಗಿಗಳಿಗೆ ದಿನಕ್ಕೆ ಮೂರು ಬಾರಿ ಊಟ ನೀಡುವುದರ ಜೊತೆಗೆ ಅಗತ್ಯಕ್ಕೆ ಅನುಗುಣವಾಗಿ ಟೀ ಅಥವಾ ಕಾಫಿಯನ್ನೂ ನೀಡಲು ಉದ್ದೇಶಿಸಲಾಗಿದೆ. ಆಹಾರವನ್ನು ನಿಗದಿತ ಗ್ರಾಂ ಪ್ರಮಾಣದಲ್ಲಿ ಪೂರೈಸಲಾಗುತ್ತದೆ. ವಾರದ ಏಳು ದಿನಗಳಲ್ಲೂ ಒಂದೇ ರೀತಿಯ ಆಹಾರ ನೀಡದೆ, ಪ್ರತಿದಿನ ವಿಭಿನ್ನ ಪೌಷ್ಟಿಕ ಆಹಾರ ನೀಡುವ ವ್ಯವಸ್ಥೆ ರೂಪಿಸಲಾಗುತ್ತಿದೆ.

ಸಾಮಾನ್ಯ ರೋಗಿಗಳಿಗೆ ಮೆನು

ಸಾಮಾನ್ಯ ರೋಗಿಗಳಿಗೆ ರವೆ ಉಪ್ಪಿಟ್ಟು, ಕಾಫಿ, ಬಾಳೆಹಣ್ಣು, ರಾಗಿ ಮುದ್ದೆ-ಸಾಂಬಾರ್‌, ಸೋಯಾ ಚಂಕ್ಸ್‌, ಟೀ-ಬಿಸ್ಕೆಟ್‌, ಚಪಾತಿ-ತರಕಾರಿ ಪಲ್ಯ, ಮೊಟ್ಟೆ ಅಥವಾ ಸೋಯಾ ಚಂಕ್ಸ್‌ ಹಾಗೂ ಗೋಧಿ ಗಂಜಿಯಂತಹ ಆಹಾರ ನೀಡುವ ಪ್ರಸ್ತಾವನೆ ಇದೆ.

ಚಿಕಿತ್ಸಾ ಆಹಾರ

ಖಾಯಿಲೆ ಹಾಗೂ ಚಿಕಿತ್ಸೆಗೆ ಅನುಗುಣವಾಗಿ ವಿಶೇಷ ಆಹಾರದ ಅಗತ್ಯವಿರುವ ರೋಗಿಗಳಿಗೆ ಉಪ್ಪಿಟ್ಟು, ಮೊಳಕೆಕಾಳು, ಕಾಫಿ, ಮಜ್ಜಿಗೆ, ರಾಗಿ ಮುದ್ದೆ-ಸಾಂಬಾರ್‌, ಸಕ್ಕರೆ ರಹಿತ ಟೀ-ಬಿಸ್ಕೆಟ್‌, ಚಪಾತಿ-ಪಲ್ಯ-ಸಾಂಬಾರ್‌, ಗೋಧಿ ಗಂಜಿ-ತರಕಾರಿ ಸಲಾಡ್‌, ಪೊಂಗಲ್‌, ಬ್ರೆಡ್‌ ಮತ್ತು ಕಾಫಿಯಂತಹ ಮೆನು ರೂಪಿಸಲಾಗಿದೆ.

ಗರ್ಭಿಣಿ ಹಾಗೂ ಬಾಣಂತಿಯರಿಗೆ ವಿಶೇಷ ಆಹಾರ

ಗರ್ಭಿಣಿ ಮತ್ತು ಬಾಣಂತಿಯರಿಗೆ ಉಪ್ಪಿಟ್ಟು, ಮೊಳಕೆಕಾಳು, ಕಾಫಿ, ಹಾಲು, ಬಾಳೆಹಣ್ಣು, ಮುದ್ದೆ-ಸಾಂಬಾರ್‌, ಸೋಯಾ ಚಂಕ್ಸ್‌, ಟೀ-ಬಿಸ್ಕೆಟ್‌, ಚಿಕ್ಕಿ, ಚಪಾತಿ-ತರಕಾರಿ ಪಲ್ಯ, ಮೊಟ್ಟೆ ಅಥವಾ ಕಿತ್ತಳೆ ಹಣ್ಣು ಹಾಗೂ ಪೊಂಗಲ್‌ನಂತಹ ಪೌಷ್ಟಿಕ ಆಹಾರ ನೀಡುವ ಪ್ರಸ್ತಾವನೆ ಇದೆ.

ಮಕ್ಕಳಿಗೆ ಪೌಷ್ಟಿಕ ಮೆನು

ಮಕ್ಕಳಿಗೆ ರವೆ ಇಡ್ಲಿ, ಗೋಧಿ ಗಂಜಿ, ಪೊಂಗಲ್‌, ಬ್ರೆಡ್‌-ಕಾಫಿ, ಹಾಲು-ಬಾಳೆಹಣ್ಣು, ಅನ್ನ-ಸಾಂಬಾರ್‌ ಹಾಗೂ ಮೊಟ್ಟೆ ಅಥವಾ ಸೋಯಾ ಚಂಕ್ಸ್‌ ನೀಡಲು ಉದ್ದೇಶಿಸಲಾಗಿದೆ.

RELATED ARTICLES
spot_img

Latest News