ಹೈದರಾಬಾದ್,ಆ.22- ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವು 6.87 ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಆಸ್ತಿ ಹೊಂದಿದ್ದ ಕಂದಾಯ ಅಧಿಕಾರಿಯ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ದಾಖಲಿಸಿದೆ. ಕಂದಾಯ ಅಧಿಕಾರಿಯನ್ನು ದೇಶಾನಿ ಶ್ರೀನಿವಾಸ್ ರೆಡ್ಡಿ ಎಂದು ಗುರುತಿಸಲಾಗಿದೆ, ಪ್ರಸ್ತುತ ಇವರು ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂನಲ್ಲಿ ವಿಭಾಗೀಯ ಆಡಳಿತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಆಗಸ್ಟ್ 20ರಂದು ರೆಡ್ಡಿ ಅವರ ನಿವಾಸ, ಕಚೇರಿ ಮತ್ತು ಇತರ ಐದು ಸ್ಥಳಗಳಲ್ಲಿ ಎಸಿಬಿ ಶೋಧ ನಡೆಸಿತ್ತು. ಶೋಧ ಕಾರ್ಯಾಚರಣೆ ವೇಳೆ 2.63 ಕೋಟಿ ರೂ. ಮೌಲ್ಯದ ಎರಡು ವಸತಿ ಫ್ಲಾಟ್ಗಳು, 1.61 ಕೋಟಿ ರೂ. ಮೌಲ್ಯದ ನೆಲ ಮತ್ತು ಮೂರು ಮಹಡಿಗಳ ಪೆಂಟ್ಹೌಸ್, 10 ಎಕರೆ ಕೃಷಿ ಭೂಮಿ ಮತ್ತು ಹೈದರಾಬಾದ್ ಮತ್ತು ಅದರ ಹೊರವಲಯದ ವಿವಿಧ ಭಾಗಗಳಲ್ಲಿ ಎಂಟು ತೆರೆದ ಪ್ಲಾಟ್ಗಳಿಗೆ ಸಂಬಂಧಿಸಿದ ದಾಖಲೆಗಳು ಕಂಡುಬಂದಿವೆ.
ಈ ಆಸ್ತಿಗಳ ಜೊತೆಗೆ, ರೆಡ್ಡಿ ಬಾರ್ ಮತ್ತು ರೆಸ್ಟೋರೆಂಟ್ನಲ್ಲಿ 86 ಲಕ್ಷ ರೂ.ಗಳನ್ನು ತಮ ಪಾಲಿನ ರೂಪದಲ್ಲಿ ಹೂಡಿಕೆ ಮಾಡಿದ್ದಾರೆ ಎಂಬುದು ಗೊತ್ತಾಗಿದೆ. 4 ಲಕ್ಷ ರೂ. ನಗದು, ಬ್ಯಾಂಕ್ ಠೇವಣಿ, 680 ಗ್ರಾಂ ಚಿನ್ನ, ಮೂರು ಕಾರುಗಳು, ಎರಡು ದ್ವಿಚಕ್ರ ವಾಹನಗಳು ಮತ್ತು ವಿವಿಧ ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆಸ್ತಿಗಳ ಅಧಿಕೃತ ಮೌಲ್ಯ 6.87 ಕೋಟಿ ರೂ.ಗಳಾಗಿದ್ದರೂ, ಸ್ಥಿರ ಆಸ್ತಿಗಳ ಮಾರುಕಟ್ಟೆ ಸುಮಾರು 50 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಕಂದಾಯ ಅಧಿಕಾರಿಯು ಈ ಆಸ್ತಿಗಳನ್ನು ಭ್ರಷ್ಟಾಚಾರದ ಮೂಲಕ ಗಳಿಸಿದ್ದಾರೆ ಮತ್ತು ಅವು ಅವರ ತಿಳಿದಿರುವ ಆದಾಯದ ಮೂಲಗಳನ್ನು ಮೀರಿವೆ.
ರೆಡ್ಡಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕಾಗಿ ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೆಡ್ಡಿ ವಿರುದ್ಧ ಇದು ಮೊದಲ ಅಕ್ರಮ ಆಸ್ತಿ ಪ್ರಕರಣವಲ್ಲ. 2009 ರ ಡಿಸೆಂಬರ್ನಲ್ಲಿ ಅವರು ಮಂಡಲ ಕಂದಾಯ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದಾಗ ಎಸಿಬಿ ಅವರ ವಿರುದ್ಧ ಇದೇ ರೀತಿಯ ಪ್ರಕರಣವನ್ನು ದಾಖಲಿಸಿತ್ತು.
