Homeರಾಜ್ಯಭಾರತ್‌ ಜೋಡೋ ಯುವ ಸಂಘಗಳ ವೆಚ್ಚದ ಹೊರೆ ಜಿಬಿಎ ಹೆಗಲಿಗೆ

ಭಾರತ್‌ ಜೋಡೋ ಯುವ ಸಂಘಗಳ ವೆಚ್ಚದ ಹೊರೆ ಜಿಬಿಎ ಹೆಗಲಿಗೆ

ಬೆಂಗಳೂರು, ಆ.22- ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮುದಾಯಿಕ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯಾದ್ಯಂತ 10 ಸಾವಿರ ಭಾರತ್‌ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ಯೋಜನೆಯಡಿ ನಗರದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಭಾರತ್‌ ಜೋಡೋ ಯುವ ಸಂಘಗಳಿಗೆ ತಗಲುವ ವೆಚ್ಚವನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರವೇ ಭರಿಸಬೇಕಿದೆ. ಯೋಜನೆಯಡಿ ಪ್ರತಿಯೊಂದು ಸಂಘಕ್ಕೆ ವಾರ್ಷಿಕ ತಲಾ 10 ಲಕ್ಷ ರೂಪಾಯಿ ಅನುದಾನ ನೀಡಲಾಗುತ್ತಿದ್ದು, ಒಟ್ಟು 1,000 ಕೋಟಿ ರೂಪಾಯಿ ವೆಚ್ಚವಾಗಲಿದೆ. ಆಡಳಿತ ಮತ್ತು ಪ್ರಾಜೆಕ್ಟ್‌ ಮ್ಯಾನೇಜ್‌ಮೆಂಟ್‌ ಯುನಿಟ್‌ ವೆಚ್ಚ ಸೇರಿದಂತೆ ಯೋಜನೆಯ ಒಟ್ಟು ವಾರ್ಷಿಕ ವೆಚ್ಚ 1,010 ಕೋಟಿ ರೂಪಾಯಿಯಾಗಲಿದೆ.

ಸರ್ಕಾರದ ಮಾರ್ಗಸೂಚಿಯಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸಂಘ, ಪಟ್ಟಣ ಪಂಚಾಯಿತಿಯಲ್ಲಿ ಸರಾಸರಿ 4 ಸಾವಿರ ಜನಸಂಖ್ಯೆಗೆ ಒಂದು ಸಂಘ, ಪುರಸಭೆಯಲ್ಲಿ 6 ಸಾವಿರ ಜನಸಂಖ್ಯೆಗೆ ಒಂದು ಸಂಘ ಹಾಗೂ ನಗರಸಭೆಯಲ್ಲಿ 8 ಸಾವಿರ ಜನಸಂಖ್ಯೆಗೆ ಒಂದು ಸಂಘ ಸ್ಥಾಪಿಸಲಾಗುತ್ತದೆ.

ಅದೇ ರೀತಿ ಮಹಾನಗರ ಪಾಲಿಕೆ ಹಾಗೂ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಸರಾಸರಿ 10 ಸಾವಿರ ಜನಸಂಖ್ಯೆಗೆ ಒಂದು ಭಾರತ್‌ ಜೋಡೋ ಯುವ ಸಂಘ ಸ್ಥಾಪಿಸಲು ಸರ್ಕಾರ ಸೂಚಿಸಿದೆ.

ವಿಶೇಷವೆಂದರೆ, ಜಿಬಿಎ ವ್ಯಾಪ್ತಿಯಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಬೇಕಾಗುವ ವೆಚ್ಚವನ್ನು ಜಿಬಿಎ ಹಾಗೂ ಅದರ ವ್ಯಾಪ್ತಿಯ ಐದು ನಗರ ಪಾಲಿಕೆಗಳು ತಮ್ಮ ಸ್ವಂತ ಆಯವ್ಯಯದಿಂದಲೇ ಭರಿಸಬೇಕು ಎಂದು ಸರ್ಕಾರದ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.

ಇದರಿಂದ ನಗರದ ಐದು ನಗರ ಪಾಲಿಕೆಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ. ಜಿಬಿಎ ವ್ಯಾಪ್ತಿಯಲ್ಲಿನ ಸಂಘಗಳ ಸಂಖ್ಯೆ, ಅವುಗಳಿಗೆ ಬೇಕಾಗುವ ಅನುದಾನ ಹಾಗೂ ಐದು ನಗರ ಪಾಲಿಕೆಗಳು ಭರಿಸಬೇಕಾದ ವೆಚ್ಚದ ಪ್ರಮಾಣವನ್ನು ಜನಸಂಖ್ಯೆಯ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ.

ಯೋಜನೆಯಡಿ ಒಟ್ಟು 10 ಸಾವಿರ ಸಂಘಗಳಿಗೆ ನೀಡಲಾಗುವ 1,000 ಕೋಟಿ ರೂಪಾಯಿ ಅನುದಾನದಲ್ಲೇ ಪ್ರತಿ ಸಂಘದಲ್ಲಿನ ಒಬ್ಬ ತರಬೇತುದಾರರಿಗೆ ವಾರ್ಷಿಕ 24 ಸಾವಿರ ರೂಪಾಯಿ ಗೌರವಧನ ನೀಡಲು 24 ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಸಚಿವ ಸಂಪುಟದ ಉಪಸಮಿತಿ ಶಿಫಾರಸು

ಭಾರತ್‌ ಜೋಡೋ ಯುವ ಸಂಘಗಳ ಸ್ಥಾಪನೆ ಕುರಿತು ಸಚಿವ ಸಂಪುಟದಲ್ಲಿ ಚರ್ಚೆ ನಡೆದ ಬಳಿಕ ಸೂಕ್ತ ಶಿಫಾರಸುಗಳಿಗಾಗಿ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲಾಗಿತ್ತು. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿದ್ದ ಉಪಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಯೋಜನೆಯ ಮಾರ್ಗಸೂಚಿ ಸಿದ್ಧಪಡಿಸಲಾಗಿದ್ದು, ಕೆಲ ಮಾರ್ಪಾಡುಗಳೊಂದಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಯೋಜನೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ನಗರಾಭಿವೃದ್ಧಿ, ಕಂದಾಯ ಹಾಗೂ ಶಿಕ್ಷಣ ಇಲಾಖೆಗಳ ಸಹಯೋಗದೊಂದಿಗೆ ಸಂಘಗಳ ಚಟುವಟಿಕೆಗಳನ್ನು ನಡೆಸಲು ಸರ್ಕಾರ ಸೂಚಿಸಿದೆ.

ಪ್ರತಿ ವರ್ಷ 1,010 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದ್ದು, ಮಾರ್ಗಸೂಚಿಗಳಲ್ಲಿ ಭವಿಷ್ಯದಲ್ಲಿ ಬದಲಾವಣೆ ಅಗತ್ಯವಾದರೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರ ಅನುಮೋದನೆ ಪಡೆದು ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ.

ಜಿಬಿಎ ವ್ಯಾಪ್ತಿಯಲ್ಲಿ ಯೋಜನೆಯ ಅನುಷ್ಠಾನಕ್ಕೆ ಅಗತ್ಯವಿರುವ ಸಂಪೂರ್ಣ ವೆಚ್ಚವನ್ನು ಸ್ಥಳೀಯ ಸಂಸ್ಥೆಗಳೇ ಭರಿಸಬೇಕಿರುವುದರಿಂದ, ಈಗಾಗಲೇ ವಿವಿಧ ಅಭಿವೃದ್ಧಿ ಕಾಮಗಾರಿಗಳ ಆರ್ಥಿಕ ಒತ್ತಡ ಎದುರಿಸುತ್ತಿರುವ ಜಿಬಿಎ ಹಾಗೂ ಐದು ನಗರ ಪಾಲಿಕೆಗಳಿಗೆ ಈ ಯೋಜನೆ ಮತ್ತಷ್ಟು ಆರ್ಥಿಕ ಹೊರೆಯಾಗುವ ಸಾಧ್ಯತೆ ಇದೆ.

RELATED ARTICLES
spot_img

Latest News