Homeರಾಜ್ಯಹನೂರು ಗಲಭೆಗೆ ಹಿಂದೆ ಮರಿ ವೀರಪ್ಪನ್‌ ಕೈವಾಡ..!?

ಹನೂರು ಗಲಭೆಗೆ ಹಿಂದೆ ಮರಿ ವೀರಪ್ಪನ್‌ ಕೈವಾಡ..!?

ಬೆಂಗಳೂರು,ಆ.22- ಹನೂರಿನಲ್ಲಿ ನಡೆದ ಶೂಟೌಟ್‌ ಘಟನೆ ನಂತರದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಮರಿ ವೀರಪ್ಪನ್‌ ಎಂಬಾತ ಗ್ರಾಮಸ್ಥರಿಗೆ ಪ್ರಚೋದನೆ ನೀಡಿರುವ ಅಂಶ ಬಯಲಾಗಿದೆ. ಈ ಪ್ರಕರಣ ದಿನಕ್ಕೊಂಡು ತಿರುವು ಪಡೆಯುತ್ತಿದ್ದು, ಅಂದಿನ ಘಟನೆಯನ್ನು ಖಂಡಿಸಿ ಪ್ರತಿಭಟನೆ, ಅರಣ್ಯ ಕಚೇರಿ ಧ್ವಂಸ, ತದನಂತರದಲ್ಲಿ ಅರಣ್ಯಕ್ಕೆ ಬೆಂಕಿ ಹಚ್ಚಿದ ಬಗ್ಗೆ ಪೊಲೀಸರು ತನಿಖೆ ಕೈಗೊಂಡಾಗ ಈ ಎಲ್ಲಾ ಘಟನೆಗಳ ಹಿಂದೆ ಪ್ರಚೋದನೆ ನೀಡಿರುವುದು ಗೊತ್ತಾಗಿದೆ.

ಇದರ ಹಿಂದಿನ ಜಾಡು ಹಿಡಿದು ಹೊರಟ ಪೊಲೀಸರಿಗೆ ಮರಿ ವೀರಪ್ಪನ್‌ ಎಂದೇ ಕುಖ್ಯಾತಿ ಹೊಂದಿರುವ ಗಂಗನದೊಡ್ಡಿಯ ಗೋವಿಂದನ ಕೈವಾಡ ಇರುವುದು ಗೊತ್ತಾಗಿದೆ.ಈತ ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ದೈತ್ಯಾಕಾರದ ಹುಲಿಯನ್ನು ಕೊಂದು ಮೂರು ತುಂಡುಗಳನ್ನಾಗಿ ಮಾಡಿ ಅಮಾನವೀಯತೆ ಮರೆದಿದ್ದನು.ಈ ಪ್ರಕರಣದಲ್ಲಿ ಜೈಲಿಗೆ ಸೇರಿದ್ದ ಈತ ನಂತರದಲ್ಲಿ ಜಾಮೀನು ಪಡೆದು ಹೊರ ಬಂದಿದ್ದಾನೆ.

ಕಾವೇರಿ ವನ್ಯಜೀವಿ ಧಾಮದ ಶಾಗ್ಯ ಕಾಡಿನಲ್ಲಿ ಅರಣ್ಯ ಇಲಾಖೆ ಹಾಗೂ ಕಳ್ಳ ಬೇಟೆಗಾರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಸಾವನ್ನಪ್ಪಿದ ಬಳಿಕ ನಡೆದ ಗಲಭೆ,ಪ್ರತಿಭಟನೆ ಸೇರಿದಂತೆ ಇನ್ನಿತರ ಘಟನೆಗಳಿಗೆ ಈತ ಪ್ರಚೋದನೆ ನೀಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಈ ನಡುವೆ ಕಳ್ಳಬೇಟೆ ತಡೆ ಶಿಬಿರ ಹಾಗೂ ವಸತಿ ಗೃಹಗಳ ಮೇಲೆ ದಾಳಿ , ಅರಣ್ಯಕ್ಕೆ ಬೆಂಕಿ ಇಟ್ಟವರು ಯಾರು ಎಂಬ ಬಗ್ಗೆಯೂ ಅರಣ್ಯ ಸಿಬ್ಬಂದಿಯಲ್ಲಿ ಭಯದ ವಾತಾವರಣ ಉಂಟಾಗಿದ್ದು, ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆಯನ್ನು ಮುಂದಿಟ್ಟುಕೊಂಡು ಸರ್ಕಾರಿ ಆಸ್ತಿ ನಷ್ಟ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿ ಬಂದಿದೆ.ಪ್ರಕರಣ ಸಂಬಂಧ ರಾಜ್ಯ ಸರ್ಕಾರ ತನಿಖೆಗಾಗಿ ಮ್ಯಾಜಿಸ್ಟ್ರೀಟ್‌ ನೇತೃತ್ವದ ತಂಡವನ್ನು ರಚಿಸಿದ್ದು, ಈ ತಂಡ ನೀಡುವ ವರದಿ ಆಧಾರದ ಮೇಲೆ ಘಟನೆಗೆ ಮುಖ್ಯ ಕಾರಣವಾದರೂ ಏನು ಎಂಬುವುದು ಗೊತ್ತಾಗಲಿದೆ.

RELATED ARTICLES
spot_img

Latest News