Homeಬೆಂಗಳೂರುಜಿಬಿಎ ಪೌರ ಕಾರ್ಮಿಕರ ಅಕ್ರಮ ನೇಮಕಾತಿ ಕುರಿತು ತನಿಖೆಗೆ ಆಗ್ರಹ

ಜಿಬಿಎ ಪೌರ ಕಾರ್ಮಿಕರ ಅಕ್ರಮ ನೇಮಕಾತಿ ಕುರಿತು ತನಿಖೆಗೆ ಆಗ್ರಹ

ಬೆಂಗಳೂರು, ಅ.7- ಜಿಬಿಎಯ ಪಶ್ಚಿಮ ವಲಯದ ವಾರ್ಡ್‌ ಸಂಖ್ಯೆ 65ರಲ್ಲಿ ದಿನಗೂಲಿ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ 13 ಮಂದಿ ಪೌರಕಾರ್ಮಿಕರನ್ನು ನಿಯಮಾವಳಿ ಉಲ್ಲಂಘಿಸಿ ಖಾಯಂ ನೌಕರರನ್ನಾಗಿ ಸಕ್ರಮಗೊಳಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

2020ರ ಸೆಪ್ಟೆಂಬರ್‌ 3ರಂದು ಆಗಿನ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರಾಗಿದ್ದ ಚಿದಾನಂದ್‌ ಅವರು 13 ಮಂದಿ ದಿನಗೂಲಿ ನೌಕರರನ್ನು ಖಾಯಂಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ಬೆಂಗಳೂರು ನಾಗರಿಕ ಹಕ್ಕು ಹೋರಾಟ ಸಮಿತಿ ಉಪ ಅಧ್ಯಕ್ಷ ಗಣೇಶ್‌ ಸಿಂಗ್‌ ಆರೋಪಿಸಿದ್ದಾರೆ.

ರಾಜ ಬಿನ್‌ ಮಾರಪ್ಪ, ಜಯಮ್ಮ ಬಿನ್‌ ಕೃಷ್ಣ, ರಾಮಯ್ಯ ಆರ್‌., ರಂಗಪ್ಪ, ನಾರಾಯಣಪ್ಪ, ಕೆಂಪಯ್ಯ, ತಿಮ್ಮಯ್ಯ, ಸಾಕಮ್ಮ, ಲಲಿತ, ನರಸಿಂಹಮೂರ್ತಿ, ಗೌರಮ್ಮ, ಕೃಷ್ಣ ಮತ್ತು ರಮೇಶ್‌ ಖಾಯಂಗೊಂಡವರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಈ ಖಾಯಂ ನೇಮಕಾತಿಗೆ ಅಗತ್ಯವಿದ್ದ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಗಣೇಶ್‌ ಸಿಂಗ್‌ ಆಗ್ರಹಿಸಿದ್ದಾರೆ.

ಕಳೆದ ಆರು ವರ್ಷಗಳಲ್ಲಿ ಈ ನೌಕರರಿಗೆ ನೀಡಲಾಗಿರುವ ವೇತನ, ಭತ್ಯೆ ಸೇರಿದಂತೆ ಸೌಲಭ್ಯಗಳನ್ನು ಪರಿಶೀಲಿಸಿ, ನೇಮಕಾತಿ ಕಾನೂನುಬಾಹಿರವೆಂದು ಸಾಬೀತಾದಲ್ಲಿ ಸರ್ಕಾರಕ್ಕೆ ಆಗಿರುವ ನಷ್ಟವನ್ನು ವಸೂಲಿ ಮಾಡಬೇಕು ಎಂದು ಆಗ್ರಹಿಸಲಾಗಿದೆ.ಇದೇ ವೇಳೆ, ಪಟ್ಟಿಯಲ್ಲಿರುವ ಕೃಷ್ಣ ಎಂಬ ನೌಕರರ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿದೆ. ಅಧಿಕಾರಿಗಳಿಗೆ ಬೆದರಿಕೆ ಹಾಕುವುದು, ನಕಲಿ ದಾಖಲೆಗಳ ಮೂಲಕ ತ್ಯಾಜ್ಯ ವಿಲೇವಾರಿ ಕಾರ್ಯ ನಿರ್ವಹಿಸಿದಂತೆ ತೋರಿಸಿ ಹಣ ಪಡೆಯುವುದು ಸೇರಿದಂತೆ ಹಲವು ಆರೋಪಗಳ ಕುರಿತು ಹಿಂದೆಯೇ ತನಿಖೆ ನಡೆದಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಂದಿನ ಬಿಬಿಎಂಪಿ ಮುಖ್ಯ ಆಯುಕ್ತರಾಗಿದ್ದ ತುಷಾರ್‌ ಗಿರಿನಾಥ್‌ ಅವರ ಸೂಚನೆಯ ಮೇರೆಗೆ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತರಾಗಿದ್ದ ವಿಕಾಸ್‌‍ ಸುರಾಳ್ಕರ್‌ ನೇತೃತ್ವದಲ್ಲಿ ವಿಚಾರಣೆ ನಡೆಸಿ ವರದಿ ಸಲ್ಲಿಸಲಾಗಿತ್ತು. ವರದಿ ಆಧಾರದ ಮೇಲೆ ಕೃಷ್ಣ ಅವರನ್ನು ಸೇವೆಯಿಂದ ವಜಾಗೊಳಿಸಿ, ಅವರಿಗೆ ನೀಡಲಾಗಿದ್ದ ಕಿರಿಯ ಆರೋಗ್ಯ ಪರಿವೀಕ್ಷಕ ಹುದ್ದೆಯನ್ನು ಹಿಂಪಡೆದು, ಅಮಾನತು ಅವಧಿಯ ಬಳಿಕ ಸಾಮಾನ್ಯ ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸುವಂತೆ ಆದೇಶಿಸಲಾಗಿತ್ತು ಎಂದು ಸಮಿತಿ ಹೇಳಿದೆ.

ಈ ಸಂಬಂಧ ಜಿಬಿಎ ಮುಖ್ಯ ಆಯುಕ್ತರು ಹಾಗೂ ವಿಶೇಷ ಆಯುಕ್ತರು (ಆಡಳಿತ) ಅವರಿಗೆ ದಾಖಲೆಗಳ ಸಹಿತ ದೂರು ನೀಡಲಾಗಿದೆ. ಇದೇ ಆರೋಪಗಳಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರ, ವಂಚನೆ, ನಕಲಿ ದಾಖಲೆ ಸೃಷ್ಟಿ ಹಾಗೂ ಅಧಿಕಾರ ದುರುಪಯೋಗದ ಕುರಿತು ಲೋಕಾಯುಕ್ತ ಐಜಿಪಿಗೂ ದೂರು ಸಲ್ಲಿಸಲಾಗಿದೆ ಎಂದು ಸಮಿತಿಯ ಉಪಾಧ್ಯಕ್ಷ ಗಣೇಶ್‌ ಸಿಂಗ್‌ ಬಿ. ತಿಳಿಸಿದ್ದಾರೆ.

RELATED ARTICLES
spot_img

Latest News