Homeಬೆಂಗಳೂರುಜಿಬಿಎ ವ್ಯಾಪ್ತಿಯಪೌರಕಾರ್ಮಿಕರ ಬೋನಸ್‌‍ ವಿತರಣೆಯಲ್ಲೂ ತಾರತಮ್ಯ

ಜಿಬಿಎ ವ್ಯಾಪ್ತಿಯಪೌರಕಾರ್ಮಿಕರ ಬೋನಸ್‌‍ ವಿತರಣೆಯಲ್ಲೂ ತಾರತಮ್ಯ

ಬೆಂಗಳೂರು, ಅ.7- ಅಂಬೇಡ್ಕರ್‌ ಜಯಂತಿ ಸಂದರ್ಭದಲ್ಲಿ ನಗರದ ಪೌರ ಕಾರ್ಮಿಕರಿಗೆ ಬೋನಸ್‌‍ ನೀಡುವುದಾಗಿ ಘೋಷಿಸಿದ್ದ ಜಿಬಿಎ ವ್ಯಾಪ್ತಿಯ ಐದು ನಗರಪಾಲಿಕೆಗಳ ಅಧಿಕಾರಿಗಳ ಭರವಸೆ ಇದೀಗ ವಿವಾದಕ್ಕೆ ಕಾರಣವಾಗಿದೆ.ಪ್ರತಿ ಪೌರ ಕಾರ್ಮಿಕರಿಗೆ 22 ಸಾವಿರ ಬೋನಸ್‌‍ ನೀಡುವುದಾಗಿ ತಿಳಿಸಿದ್ದರೂ, ಎಲ್ಲರಿಗೂ ಒಂದೇ ಮೊತ್ತದ ಬೋನಸ್‌‍ ಸಿಗದಿರುವುದು ಪೌರ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಬಿಎ ವ್ಯಾಪ್ತಿಯ ಐದು ನಗರಪಾಲಿಕೆಗಳಲ್ಲಿ ನೇರ ನೇಮಕಾತಿ, ಖಾಯಂ ಹಾಗೂ ಗುತ್ತಿಗೆ ಆಧಾರದ ಮೇಲೆ ಸುಮಾರು 15 ಸಾವಿರ ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ನಗರ ಸ್ವಚ್ಛತೆ, ಕಸ ವಿಲೇವಾರಿ ಸೇರಿದಂತೆ ಹಲವು ಪ್ರಮುಖ ಕೆಲಸಗಳನ್ನು ನಿರ್ವಹಿಸುವ ಪೌರ ಕಾರ್ಮಿಕರಿಗೆ ಅಂಬೇಡ್ಕರ್‌ ಜಯಂತಿಯಂದು ಬೋನಸ್‌‍ ನೀಡುವುದಾಗಿ ನಗರಪಾಲಿಕೆಗಳ ಆಯುಕ್ತರು ಭರವಸೆ ನೀಡಿದ್ದರು.

ಅದರಂತೆ ಐದು ನಗರಪಾಲಿಕೆಗಳ ಪೈಕಿ ಸುಮಾರು 67 ಸಾವಿರ ಪೌರ ಕಾರ್ಮಿಕರಿಗೆ 22 ಸಾವಿರ ಬೋನಸ್‌‍ ಪಾವತಿಸಲಾಗಿದೆ ಎನ್ನಲಾಗಿದೆ. ಆದರೆ ಉಳಿದ ಸಾವಿರಾರು ಪೌರ ಕಾರ್ಮಿಕರಿಗೆ 22 ಸಾವಿರ ಬದಲಿಗೆ ಕೇವಲ 7 ಸಾವಿರದಷ್ಟು ಬೋನಸ್‌‍ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಇದರಿಂದ ಒಂದೇ ರೀತಿಯ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಬೋನಸ್‌‍ನಲ್ಲೂ ತಾರತಮ್ಯ ಮಾಡಲಾಗುತ್ತಿದೆ ಎಂದು ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘೋಷಣೆ ಮಾಡಿದಂತೆ ಪೂರ್ಣ ಮೊತ್ತದ ಬೋನಸ್‌‍ ನೀಡಲು ಸಾಧ್ಯವಿಲ್ಲದಿದ್ದರೆ ಮೊದಲೇ ಸ್ಪಷ್ಟಪಡಿಸಬೇಕಿತ್ತು. ಇದೀಗ ಹಣದ ಕೊರತೆಯನ್ನು ಮುಂದಿಟ್ಟುಕೊಂಡು ಕಡಿಮೆ ಮೊತ್ತ ನೀಡಿರುವುದು ಸರಿಯಲ್ಲ ಎಂದು ಪೌರ ಕಾರ್ಮಿಕರು ಆಕ್ಷೇಪಿಸಿದ್ದಾರೆ.

ಹಣದ ಕೊರತೆಯೇ ಕಾರಣವೇ? ಐದು ನಗರಪಾಲಿಕೆಗಳಲ್ಲೂ ಪೌರ ಕಾರ್ಮಿಕರಿಗೆ ಬೋನಸ್‌‍ ನೀಡಲು ಅಗತ್ಯ ಹಣದ ಕೊರತೆ ಎದುರಾಗಿದೆಯೇ ಎಂಬ ಪ್ರಶ್ನೆಯೂ ಇದೀಗ ಕೇಳಿಬಂದಿದೆ. ನಗರಪಾಲಿಕೆಗಳ ಖಜಾನೆಯಲ್ಲಿ ಹಣವಿಲ್ಲದ ಕಾರಣದಿಂದಲೇ ಬೋನಸ್‌‍ ಪಾವತಿಯಲ್ಲಿ ವ್ಯತ್ಯಾಸ ಉಂಟಾಗಿದೆಯೇ? ಅಥವಾ ಬೇರೆ ಕಾರಣದಿಂದ ಕೆಲವು ಕಾರ್ಮಿಕರಿಗೆ ಮಾತ್ರ ಕಡಿಮೆ ಮೊತ್ತ ನೀಡಲಾಗಿದೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕಾಗಿದೆ.

ಬಡ ಪೌರ ಕಾರ್ಮಿಕರ ವಿಚಾರದಲ್ಲಿ ಈ ರೀತಿಯ ತಾರತಮ್ಯ ಮಾಡಬಾರದು. ಘೋಷಣೆ ಮಾಡಿದಂತೆ ಪ್ರತಿಯೊಬ್ಬರಿಗೂ 22 ಸಾವಿರ ಬೋನಸ್‌‍ ನೀಡಬೇಕು. ಬಾಕಿ ಇರುವ ಮೊತ್ತವನ್ನು ಕೂಡಲೇ ಪಾವತಿಸಬೇಕು ಎಂದು ಪೌರ ಕಾರ್ಮಿಕರು ಒತ್ತಾಯಿಸಿದ್ದಾರೆ.ತಮಗೆ ಬರಬೇಕಾದ ಪೂರ್ಣ ಬೋನಸ್‌‍ ನೀಡದಿದ್ದರೆ ಮುಂದಿನ ದಿನಗಳಲ್ಲಿ ನಗರಪಾಲಿಕೆಗಳ ವಿರುದ್ಧ ಹೋರಾಟ ನಡೆಸುವುದಾಗಿ ಕಾರ್ಮಿಕ ಸಂಘಟನೆಗಳು ಎಚ್ಚರಿಕೆ ನೀಡಿವೆ.

RELATED ARTICLES
spot_img

Latest News