ಬೆಂಗಳೂರು, ಅ.7- ನಗರದಲ್ಲಿ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ಆಸ್ತಿಗಳನ್ನು ಪತ್ತೆಹಚ್ಚಲು ಜಿಬಿಎ ಮನೆ-ಮನೆ ಪರಿಶೀಲನೆ ಕಾರ್ಯ ನಡೆಸಲು ತೀರ್ಮಾನಿಸಿದೆ.
ಈ ಕಾರ್ಯಕ್ಕಾಗಿ ಖಾಸಗಿ ಏಜೆನ್ಸಿಯೊಂದನ್ನು ನೇಮಿಸುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ನಗರದಾದ್ಯಂತ ಆಸ್ತಿ ತೆರಿಗೆ ಪಾವತಿಸುತ್ತಿರುವ ಆಸ್ತಿಗಳ ಸಂಖ್ಯೆ ಮತ್ತು ವಾಸ್ತವಿಕವಾಗಿ ಇರುವ ಆಸ್ತಿಗಳ ಸಂಖ್ಯೆಯ ನಡುವೆ ಭಾರಿ ವ್ಯತ್ಯಾಸ ಕಂಡುಬಂದಿರುವ ಹಿನ್ನೆಲೆಯಲ್ಲಿ ಜಿಬಿಎ ಈ ಕ್ರಮ ಕೈಗೊಂಡಿದೆ. ಪರಿಶೀಲನಾ ಕಾರ್ಯಕ್ಕೆ ಸುಮಾರು 1,585 ಸಿಬ್ಬಂದಿಯನ್ನು ನಿಯೋಜಿಸಲು ಯೋಜಿಸಲಾಗಿದೆ ಎಂದು ಜಿಬಿಎ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
2011ರ ಜನಗಣತಿ ಅಂಕಿ-ಅಂಶಗಳ ಪ್ರಕಾರ ನಗರದಲ್ಲಿ ಸುಮಾರು 47 ಲಕ್ಷ ವಾಸದ ಘಟಕಗಳಿದ್ದವು. ಪ್ರಸ್ತುತ ಈ ಸಂಖ್ಯೆ ಮತ್ತಷ್ಟು ಹೆಚ್ಚಿರುವ ಸಾಧ್ಯತೆಯಿದೆ. ಆದರೆ ಜಿಬಿಎ ವ್ಯಾಪ್ತಿಯಲ್ಲಿ ಇದುವರೆಗೆ ಸುಮಾರು 23 ಲಕ್ಷ ಆಸ್ತಿಗಳು ಮಾತ್ರ ಆಸ್ತಿ ತೆರಿಗೆ ಪಾವತಿಸುತ್ತಿವೆ.
ಸುಮಾರು 7 ಲಕ್ಷದಿಂದ 10 ಲಕ್ಷ ಆಸ್ತಿಗಳು ತೆರಿಗೆ ಜಾಲದಿಂದ ಹೊರಗಿರಬಹುದು ಎಂದು ನಾವು ಅಂದಾಜಿಸಿದ್ದೇವೆ. ಎಲ್ಲಾ ಆಸ್ತಿಗಳೂ ಸೂಕ್ತವಾಗಿ ತೆರಿಗೆ ಪಾವತಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸುವುದು ಅಗತ್ಯ ಎಂದು ಮೌದ್ಗಿಲ್ ತಿಳಿಸಿದ್ದಾರೆ.
ವಾಣಿಜ್ಯ ಆಸ್ತಿಗಳಲ್ಲೂ ಭಾರೀ ವ್ಯತ್ಯಾಸ:ವಾಣಿಜ್ಯ ಆಸ್ತಿಗಳ ವಿಚಾರದಲ್ಲಂತೂ ತೆರಿಗೆ ವ್ಯಾಪ್ತಿಯಲ್ಲಿರುವ ಮತ್ತು ವಾಸ್ತವಿಕವಾಗಿ ಇರುವ ಆಸ್ತಿಗಳ ನಡುವೆ ಇನ್ನಷ್ಟು ದೊಡ್ಡ ಅಂತರವಿದೆ. ಜನಗಣತಿ ಮಾಹಿತಿಯ ಪ್ರಕಾರ ಬೆಂಗಳೂರಿನಲ್ಲಿ ಸುಮಾರು 6 ಲಕ್ಷ ವಾಣಿಜ್ಯ ಆಸ್ತಿಗಳಿವೆ. ಆದರೆ ಜಿಬಿಎ ದಾಖಲೆಗಳಲ್ಲಿ ಕೇವಲ 1.3 ಲಕ್ಷ ಆಸ್ತಿಗಳನ್ನು ಮಾತ್ರ ವಾಣಿಜ್ಯ ಆಸ್ತಿಗಳಾಗಿ ಘೋಷಿಸಲಾಗಿದೆ.
ಹೀಗಾಗಿ ಮನೆ-ಮನೆಗೆ ನಡೆಯುವ ಪರಿಶೀಲನೆಯಲ್ಲಿ ಆಸ್ತಿ ತೆರಿಗೆ ಪಾವತಿ ಸ್ಥಿತಿಯಷ್ಟೇ ಅಲ್ಲದೆ, ಆಸ್ತಿಯ ವಾಸ್ತವಿಕ ಬಳಕೆ, ತೆರಿಗೆ ಮೌಲ್ಯಮಾಪನ ಹಾಗೂ ದಾಖಲೆಗಳಲ್ಲಿನ ಘೋಷಣೆಗಳನ್ನು ಪರಿಶೀಲಿಸಲಾಗುತ್ತದೆ.
ಕಡಿಮೆ ತೆರಿಗೆ ಪಾವತಿಸುವವರಿಗೂ ಬಿಸಿ:
ಪರಿಶೀಲನಾ ಸಿಬ್ಬಂದಿ ತೆರಿಗೆ ಕಡಿಮೆ ಮೌಲ್ಯಮಾಪನ ಮಾಡಿರುವ ಆಸ್ತಿಗಳು, ತಪ್ಪು ಮಾಹಿತಿ ನೀಡಿ ತೆರಿಗೆ ಪಾವತಿಸುತ್ತಿರುವವರು ಹಾಗೂ ಬಾಡಿಗೆಗೆ ನೀಡಿದ್ದರೂ ವಾಣಿಜ್ಯ ಬಳಕೆಯಾಗಿ ಘೋಷಿಸದಿರುವ ಆಸ್ತಿಗಳನ್ನು ಗುರುತಿಸಲಿದ್ದಾರೆ.ಪ್ರಸ್ತುತ ತೆರಿಗೆ ಅಧಿಕಾರಿಗಳಿಗೆ ಇಂತಹ ಆಸ್ತಿಗಳನ್ನು ಪರಿಶೀಲಿಸುವ ಅಧಿಕಾರವಿದ್ದರೂ, ಈವರೆಗೆ ನಡೆದ ಪರಿಶೀಲನೆಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚುವರಿ ಆದಾಯ ಸಂಗ್ರಹವಾಗಿಲ್ಲ. ಹೀಗಾಗಿ ಖಾಸಗಿ ಏಜೆನ್ಸಿಯ ಸಿಬ್ಬಂದಿಯನ್ನು ದೊಡ್ಡ ಪ್ರಮಾಣದಲ್ಲಿ ನಿಯೋಜಿಸಿ ವ್ಯವಸ್ಥಿತವಾಗಿ ಸಮೀಕ್ಷೆ ನಡೆಸಲು ಜಿಬಿಎ ಮುಂದಾಗಿದೆ.
5 ಸಾವಿರ ಕೋಟಿ ತೆರಿಗೆ ಆದಾಯ:
ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಪ್ರಸ್ತುತ ಆಸ್ತಿ ತೆರಿಗೆಯಿಂದ ವಾರ್ಷಿಕವಾಗಿ ಸುಮಾರು 5,000 ಕೋಟಿ ಆದಾಯ ಸಂಗ್ರಹವಾಗುತ್ತಿದೆ. ಆದರೆ ನಗರದಲ್ಲಿ ಹೆಚ್ಚುತ್ತಿರುವ ಆಡಳಿತಾತ್ಮಕ ಮತ್ತು ಮೂಲಸೌಕರ್ಯ ವೆಚ್ಚಗಳಿಗೆ ಈ ಆದಾಯ ಸಾಕಾಗುತ್ತಿಲ್ಲ.ನಗರ ಪಾಲಿಕೆಗಳು ಎರಡು ವರ್ಷಗಳ ಹಿಂದಿನ ಗುತ್ತಿಗೆದಾರರ ಬಾಕಿ ಬಿಲ್ಗಳನ್ನೂ ಪಾವತಿಸಲು ಹೆಣಗಾಡುತ್ತಿವೆ.
ಹಣಕಾಸಿನ ಕೊರತೆಯಿಂದ ಹಲವು ನಾಗರಿಕ ಕಾಮಗಾರಿಗಳ ಮೇಲೂ ಪರಿಣಾಮ ಬೀರುತ್ತಿದ್ದು, ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಆಸ್ತಿಗಳನ್ನು ಪತ್ತೆಹಚ್ಚಿ ತೆರಿಗೆ ಜಾಲಕ್ಕೆ ಸೇರ್ಪಡೆಗೊಳಿಸುವ ಮೂಲಕ ಜಿಬಿಎ ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗಿದೆ.
