ಹಾಸನ, ಅ.7- ಬಿಎಂಐಸಿ (ನೈಸ್) ಯೋಜನೆ ದೇವೇಗೌಡರ ಕೂಸು ಎಂದು ಹೇಳುತ್ತಿರುವವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತಮಾಷೆಯ ಧಾಟಿಯಲ್ಲಿ ಸೂಲಗಿತ್ತಿ ಯಾರು ಎಂದು ಪ್ರಶ್ನಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಂಐಸಿ ಯೋಜನೆ ಸತ್ಯವನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. ದೇವರು ಸತ್ಯವನ್ನು ನೋಡುತ್ತಾನೆ, ಕಾಯುತ್ತಾನೆ. ಜನರೇ ಸೂಕ್ತ ತೀರ್ಮಾನ ಮಾಡುತ್ತಾರೆ.
ಯೋಜನೆಗೆ ಸಂಬಂಧಿಸಿದಂತೆ ನೈಸ್ ಕಂಪನಿಯವರು ಸುಪ್ರೀಂ ಕೋರ್ಟ್ಗೆ ತೆರಳಿ ಹೈಕೋರ್ಟ್ ಆದೇಶಗಳಿಗೆ ತಡೆಯಾಜ್ಞೆ ಪಡೆಯಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಈ ವಿಚಾರವಾಗಿ ನವೆಂಬರ್ 2ರಂದು ತಾವು ಸುದ್ದಿಗೋಷ್ಠಿ ನಡೆಸಿ ವಿವರವಾಗಿ ಮಾತನಾಡುವುದಾಗಿ ತಿಳಿಸಿದರು.
ಸಕ್ರಿಯ ರಾಜಕಾರಣ: ಸಂಸತ್ನಲ್ಲಿ 1999ರಿಂದ 2025ರವರೆಗೆ ತಾವು ಮಾಡಿದ ಭಾಷಣಗಳು ಹಾಗೂ ಹೋರಾಟಗಳನ್ನು ಸಂಗ್ರಹಿಸಿ ಎರಡು ಪುಸ್ತಕಗಳನ್ನು ಹೊರತರಲಾಗುತ್ತಿದೆ. ಮುಂದೆ ಹಾಸನ ಜಿಲ್ಲೆಯಲ್ಲಿ ಮಾತ್ರವಲ್ಲ, ರಾಜ್ಯದ ವಿವಿಧ ಭಾಗಗಳಿಗೂ ಪ್ರವಾಸ ಮಾಡುತ್ತೇನೆ. ಹೊರ ರಾಜ್ಯಗಳಿಗೂ ಪ್ರವಾಸ ಮಾಡುವ ಉದ್ದೇಶವಿದೆ ಎಂದರು.
ರಾಹುಲ್ ಗಾಂಧಿಗೆ ವೇಗವಾಗಿ ಹೋಗೋ ಮನೋಭಾವ :
ಎಸ್ಐಆರ್ ವಿಚಾರದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಮಾತನಾಡಿದ ದೇವೇಗೌಡರು, ಈ ವಿಷಯ ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿದೆ. ಎರಡೂ ಕಡೆಯ ವಾದ ಮಂಡನೆಗೆ ಅವಕಾಶ ನೀಡಲಾಗಿದೆ. ಅಂತಿಮವಾಗಿ ಸುಪ್ರೀಂ ಕೋರ್ಟ್ ನೀಡುವ ತೀರ್ಪನ್ನು ಕಾಯಬೇಕು.ರಾಹುಲ್ ಗಾಂಧಿ ಯುವಕರಾಗಿರುವುದರಿಂದ ಸ್ವಲ್ಪ ವೇಗವಾಗಿ ಹೋಗಬೇಕು ಎಂಬ ಮನೋಭಾವ ಅವರಲ್ಲಿದೆ ಎಂದು ದೇವೇಗೌಡರು ಹೇಳಿದರು.
ಕಾಂಗ್ರೆಸ್ ವಿರುದ್ಧ ಜೆಡಿಎಸ್-ಬಿಜೆಪಿ ಒಗ್ಗಟ್ಟು:
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಒಟ್ಟಾಗಿ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸುವ ವಿಚಾರ ಈಗಾಗಲೇ ಸ್ಪಷ್ಟವಾಗಿದೆ.ವಿಧಾನ ಪರಿಷತ್ನ ನಾಲ್ಕೂ ಅಭ್ಯರ್ಥಿಗಳನ್ನು ಗೆಲ್ಲಿಸಲು ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದರು. ಮತದಾರರ ಪಟ್ಟಿಯಿಂದ 7000 ಮತಗಳನ್ನು ಡಿಲೀಟ್ ಮಾಡಲಾಗಿದೆ ಎಂಬ ಗೃಹ ಸಚಿವರ ಆರೋಪಕ್ಕೆ ಸಂಬಂಧಿಸಿದ ಪ್ರಶ್ನೆಗೆ, ಈ ಸರ್ಕಾರದ ಮೇಲೆ ನಮಗೆ ವಿಶ್ವಾಸವಿಲ್ಲ. ಯಾವುದಾದರೂ ಒಂದು ಸ್ವತಂತ್ರ ಏಜೆನ್ಸಿಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಶಾಸಕರಾದ ಸ್ವರೂಪ್ಪ್ರಕಾಶ್, ಎ. ಮಂಜು ಇತರರು ಇದ್ದರು.
